Thursday, April 30, 2026
Homeಬೆಂಗಳೂರುಇಂದು ಗ್ಯಾಸ್‌‍ ಸಿಗದಿದ್ದರೆ ನಾಳೆಯಿಂದ ಹೋಟೆಲ್‌ ಬಂದ್‌ ಸಾಧ್ಯತೆ..!

ಇಂದು ಗ್ಯಾಸ್‌‍ ಸಿಗದಿದ್ದರೆ ನಾಳೆಯಿಂದ ಹೋಟೆಲ್‌ ಬಂದ್‌ ಸಾಧ್ಯತೆ..!

If gas is not available today, hotels may close from tomorrow..!

ಬೆಂಗಳೂರು,ಮಾ.10- ಮಧ್ಯಪ್ರಾಚ್ಯ ದೇಶಗಳಲ್ಲಿ ಮುಂದುವರಿದಿರುವ ಯುದ್ಧದ ಪರಿಣಾಮ ಇದೀಗ ಭಾರತದಲ್ಲಿಯೂ ಎಫೆಕ್ಟ್‌ ಕಾಣಿಸಿಕೊಳ್ಳಲು ಆರಂಭವಾಗಿದೆ. ಆ ಯುದ್ಧದ ಎಫೆಕ್ಟ್‌ನಿಂದ ನಗರದಲ್ಲೂ ಗ್ಯಾಸ್‌‍ ಕೊರತೆ ಉದ್ಭವಿಸಿರುವುದರಿಂದ ಇಲ್ಲಿನ ಹೋಟೆಲ್‌ಗಳು ಬಂದ್‌ ಆಗುವ ಸಾಧ್ಯತೆಗಳಿವೆ.

ಯುದ್ಧದ ಹಿನ್ನೆಲೆ ಇಂಧನ ಹಾಗೂ ಅನಿಲದ ಆಮದು-ರಫ್ತು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಇದರ ಪರಿಣಾಮವಾಗಿ ವಾಣಿಜ್ಯ ಗ್ಯಾಸ್‌‍ ಪೂರೈಕೆಯಲ್ಲಿ ಸಮಸ್ಯೆ ಉಂಟಾಗಿದೆ. ಕಳೆದ ಎರಡು-ಮೂರು ದಿನಗಳಿಂದ ಹೋಟೆಲ್‌ಗಳಿಗೆ ಸರಿಯಾದ ಪ್ರಮಾಣದಲ್ಲಿ ವಾಣಿಜ್ಯ ಗ್ಯಾಸ್‌‍ ಪೂರೈಕೆ ಆಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಹೋಟೆಲ್‌ ಉದ್ಯಮ ಸಂಪೂರ್ಣವಾಗಿ ಗ್ಯಾಸ್‌‍ ಮೇಲೆ ಅವಲಂಬಿತವಾಗಿರುವುದರಿಂದ ಟೀ, ಕಾಫಿ ಸೇರಿದಂತೆ ಆಹಾರ ತಯಾರಿಕೆಗೆ ಅಗತ್ಯವಾದ ಗ್ಯಾಸ್‌‍ ಕೊರತೆ ತೀವ್ರ ಸಮಸ್ಯೆಯಾಗುತ್ತಿದೆ. ಈಗಾಗಲೇ ಹಲವು ಹೋಟೆಲ್‌ಗಳಲ್ಲಿ ಇರುವ ಗ್ಯಾಸ್‌‍ ಸ್ಟಾಕ್‌ ಸಂಪೂರ್ಣವಾಗಿ ಖಾಲಿಯಾಗುವ ಹಂತಕ್ಕೆ ಬಂದಿದೆ. ಇಂದು ಕೂಡ ಗ್ಯಾಸ್‌‍ ಪೂರೈಕೆ ಆಗದಿದ್ದರೆ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಬಂದ್‌ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಹೋಟೆಲ್‌ ಮಾಲೀಕರು ಎಚ್ಚರಿಕೆ ನೀಡಿದ್ದಾರೆ.

ಗ್ಯಾಸ್‌‍ ಪೂರೈಕೆಯಲ್ಲಿ ಉಂಟಾದ ವ್ಯತ್ಯಯದಿಂದ ಹೋಟೆಲ್‌ ಉದ್ಯಮದ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದ್ದು, ಪರಿಸ್ಥಿತಿ ಮುಂದುವರೆದರೆ ಸಾರ್ವಜನಿಕರಿಗೂ ಟೀ-ಕಾಫಿ ಸೇರಿದಂತೆ ಊಟ-ತಿಂಡಿ ಸೇವೆಗಳಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ಹೋಟೇಲ್‌ ಮಾಲೀಕರ ಸಂಘದ ಗೌರವ ಅಧ್ಯಕ್ಷ ಪಿ.ಸಿ.ರಾವ್‌ ಎಚ್ಚರಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಪಂಚತಾರಾ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಸೇರಿದಂತೆ 7 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಬಹುತೇಕ ಹೋಟೆಲ್‌ಗಳು ಗ್ಯಾಸ್‌‍ ಮೇಲೆಯೇ ಅವಲಂಬಿತವಾಗಿ ಅಡುಗೆ ಪದಾರ್ಥಗಳನ್ನು ತಯಾರಿಸುತ್ತವೆ. ಐಟಿ ಬಿಟಿ ಉದ್ಯಮಿಗಳು, ಖಾಸಗಿ ವಲಯದ ನೌಕರರು, ಲಕ್ಷಾಂತರ ಕಾರ್ಮಿಕರು ಹೋಟೆಲ್‌ ತಿಂಡಿ-ಊಟಗಳ ಮೇಲೆಯೇ ಅವಲಂಬಿತರಾಗಿದ್ದಾರೆ.

ಹೋಟೆಲ್‌ಗಳು ಬಂದ್‌ ಆದರೆ ಈ ಎಲ್ಲರ ಕೆಲಸಕ್ಕೆ ಹೊಡೆತ ಬೀಳುತ್ತದೆ. ಈಗಾಗಲೇ ಗ್ಯಾಸ್‌‍ ಸಿಲಿಂಡರ್‌ ಸಂಕಷ್ಟದ ಬಿಸಿ ತಟ್ಟತೊಡಗಿದೆ. ರಾಜ್ಯದ ವಿವಿಧೆಡೆ ನಗರ, ಪಟ್ಟಣ ಪ್ರದೇಶಗಳ ಹೋಟೆಲ್‌ ಮತ್ತಿತರ ಕಡೆ ಸಿಲಿಂಡರ್‌ ಇಲ್ಲದೆ ತಿಂಡಿ ಪದಾಥರ್ಗಳನ್ನು ತಯಾರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ಯಾಸ್‌‍ ಬಂದ್‌ ಆದರೆ ಹೋಟೆಲ್‌ಗಳಷ್ಟೇ ಅಲ್ಲ, ಮದುವೆ ಸೇರಿದಂತೆ ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಲಿದೆ.

RELATED ARTICLES

Latest News