ಬೆಂಗಳೂರು, ಮಾ.10- ಬಿಬಿಎಂಪಿ ಅಮಾನ್ಯಗೊಂಡು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಿ ಆರು ತಿಂಗಳು ಕಳೆದರೂ ಜಿಬಿಎ ಲೋಗೋ ಇನ್ನೂ ಫೈನಲ್ ಆಗಿಲ್ಲ.ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಹಾಗೂ ನೂತನವಾಗಿ ರಚನೆಯಾಗಿರುವ ಐದು ನಗರ ಪಾಲಿಕೆಗಳಿಗೆ ಲಾಂಛನ (ಲೋಗೋ) ರೂಪಿಸುವ ಕಾರ್ಯ ಕಳೆದ ಆರು ತಿಂಗಳಿನಿಂದ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.
ನಗರ ಪಾಲಿಕೆ ಕಚೇರಿಗಳು, ಜಿಬಿಎ ಕೇಂದ್ರ ಕಚೇರಿ ಸೇರಿದಂತೆ ಹಲವೆಡೆಗಳಲ್ಲಿ ಹೊಸ ಹೆಸರಿನ ನಾಮಫಲಕಗಳನ್ನು ಅಳವಡಿಸಲಾಗಿದ್ದರೂ, ಇನ್ನೂ ಅಧಿಕೃತ ಲೋಗೋ ಅಂತಿಮಗೊಳಿಸದಿರುವುದು ಕಂಡು ಬಂದಿದೆ.
ಈ ಸಂಬಂಧ ಜಿಬಿಎ ಅಧಿಕಾರಿಗಳು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಐದು ನಗರ ಪಾಲಿಕೆಗಳಿಗೆ ಒಟ್ಟು 58 ಬಗೆಯ ಕರಡು ಲೋಗೋಗಳನ್ನು ಸಿದ್ಧಪಡಿಸಿ ನೀಡಿದ್ದಾರೆ. ಈ ವಿನ್ಯಾಸಗಳನ್ನು ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಅವರಿಗೆ ಅವಗಾಹನೆಗೆ ಸಲ್ಲಿಸಿ, ಅವರ ಅನುಮೋದನೆ ಪಡೆದ ಬಳಿಕ ಅಂತಿಮ ಲೋಗೋವನ್ನು ಅಧಿಕೃತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇತಿಹಾಸ ಮತ್ತು ಪರಂಪರೆ ಪ್ರತಿಬಿಂಬಿಸುವ ವಿನ್ಯಾಸ; ಹಿಂದಿನ ಬಿಬಿಎಂಪಿ ಲೋಗೋದಲ್ಲಿ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ್ದ ಗಡಿ ಗೋಪುರದ ಚಿತ್ರ ಬಳಸಲಾಗಿತ್ತು. ಅದೇ ರೀತಿಯಲ್ಲಿ ಜಿಬಿಎ ಹಾಗೂ ಹೊಸ ನಗರ ಪಾಲಿಕೆಗಳ ಲೋಗೋದಲ್ಲಿಯೂ ಗಡಿ ಗೋಪುರವನ್ನು ಪ್ರಮುಖವಾಗಿ ಬಳಸುವ ಯೋಚನೆ ಮಾಡಲಾಗಿದೆ. ಜೊತೆಗೆ ಪ್ರತ್ಯೇಕ ನಗರ ಪಾಲಿಕೆಗಳ ಭೌಗೋಳಿಕ ಗಡಿಯನ್ನು ಗಡಿ ಗೋಪುರದ ಹಿಂಭಾಗದಲ್ಲಿ ಪ್ರದರ್ಶಿಸುವ ವಿನ್ಯಾಸಗಳನ್ನು ರೂಪಿಸಲಾಗಿದೆ.
ಜಿಬಿಎ ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿರುವ ಹಿನ್ನೆಲೆಯಲ್ಲಿ, ಕೆಲವು ಲೋಗೋ ವಿನ್ಯಾಸಗಳಲ್ಲಿ ಗಂಡಬೇರುಂಡ, ಆನೆ, ನಾಡಪ್ರಭು ಕೆಂಪೇಗೌಡರ ಭಾವಚಿತ್ರ ಹಾಗೂ ಗಡಿ ಗೋಪುರವನ್ನು ಒಳಗೊಂಡಂತೆ ವಿಭಿನ್ನ ಮಾದರಿಗಳನ್ನು ರೂಪಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಗರವಾಗಿರುವುದರಿಂದ, ಇತಿಹಾಸ ಮತ್ತು ಪರಂಪರೆಯ ಜೊತೆಗೆ ಆಧುನಿಕತೆ ಪ್ರತಿಬಿಂಬಿಸುವ ಸ್ಟೈಲಿಶ್ ಹಾಗೂ ನೂತನ ವಿನ್ಯಾಸ ಮಾದರಿಯ ಲೋಗೋಗಳನ್ನೂ ಸಿದ್ಧಪಡಿಸಲಾಗಿದೆ.ವಿಭಿನ್ನ ಬಣ್ಣಗಳ ಬಳಕೆಲೋಗೋಗಳ ವಿನ್ಯಾಸಗಳಲ್ಲಿ ಬಂಗಾರದ ಬಣ್ಣ, ಹಸಿರು, ಹಳದಿ, ಕೇಸರಿ, ಬಿಳಿ ಹಾಗೂ ನೀಲಿ ಸೇರಿದಂತೆ ಆಕರ್ಷಕ ಬಣ್ಣಗಳನ್ನು ಬಳಸಲಾಗಿದೆ. ಆದರೆ ಇಷ್ಟೊಂದು ಕರಡು ವಿನ್ಯಾಸಗಳು ಸಿದ್ಧವಾಗಿದ್ದರೂ ಇನ್ನೂ ಅಂತಿಮ ಲೋಗೋ ಘೋಷಣೆ ಆಗದೇ ಇರುವುದರಿಂದ ವಿಳಂಬದ ಬಗ್ಗೆ ಚರ್ಚೆ ಶುರುವಾಗಿದೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಜಿಬಿಎ ಹಾಗೂ ಐದು ನಗರ ಪಾಲಿಕೆಗಳಿಗೆ ಪ್ರತ್ಯೇಕ ಲೋಗೋಗಳನ್ನು ವಿವಿಧ ವಿನ್ಯಾಸಗಳಲ್ಲಿ ಸಿದ್ಧಪಡಿಸಲಾಗಿದೆ. ಉಪ ಮುಖ್ಯಮಂತ್ರಿ ಅವರು ಅನುಮೋದನೆ ನೀಡುವ ಲೋಗೋವನ್ನು ಅಧಿಕೃತಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
