ಬೆಂಗಳೂರು,ಆ.3- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟಕ್ಕೆ ಪೂರ್ಣಪ್ರಮಾಣದ ಸಚಿವರ ನಿಯೋಜನೆಯಾಗಿದ್ದು, ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.7 ಜಿಲ್ಲೆಗಳು ಅವಕಾಶ ವಂಚಿತವಾಗಿವೆ. 9 ಮಂದಿ ಮೊದಲ ಬಾರಿಗೆ ಸಚಿವರಾಗುತ್ತಿದ್ದು, ಉಳಿದ 11 ಮಂದಿ ಮಾಜಿ ಸಚಿವರುಗಳಿಗೆ ಅವಕಾಶ ಕಲ್ಪಿಸಲಾಗಿದೆ.
ಸಚಿವ ಸಂಪುಟದಲ್ಲಿ ಒಕ್ಕಲಿಗ, ಲಿಂಗಾಯತ ಸಮುದಾಯಕ್ಕೆ ತಲಾ ಆರು ಸ್ಥಾನಗಳು, ಪರಿಶಿಷ್ಟ ಜಾತಿಯ ಎಲ್ಲಾ ಪಂಗಡಗಳನ್ನೊಳಗೊಂಡು 7 ಸ್ಥಾನಗಳು, ಪರಿಶಿಷ್ಟ ಪಂಗಡ ಮತ್ತು ಮುಸ್ಲಿಂ ಸಮುದಾಯಕ್ಕೆ ತಲಾ ಮೂರು ಸ್ಥಾನಗಳು, ಹಿಂದುಳಿದ ವರ್ಗಗಳ ಪೈಕಿ ಕುರುಬ ಸಮುದಾಯಕ್ಕೆ ಮೂರು, ಈಡಿಗ, ಉಪ್ಪಾರ, ಬೆಸ್ತ, ಕ್ಷತ್ರಿಯಾ ಮತ್ತು ಮರಾಠ ಸಮುದಾಯಕ್ಕೆ ತಲಾ ಒಂದು ಸ್ಥಾನಗಳನ್ನು ನೀಡಲಾಗಿದೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಕೃಷ್ಣಭೈರೇಗೌಡ, ಚೆೆಲುವರಾಯಸ್ವಾಮಿ, ಕೆ.ಎಂ.ಶಿವಲಿಂಗೇಗೌಡ, ಎಚ್.ಸಿ.ಬಾಲಕೃಷ್ಣ ಮತ್ತು ರಾಮಲಿಂಗಾರೆಡ್ಡಿ ಸಂಪುಟದಲ್ಲಿದ್ದಾರೆ.
ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ್, ಲಕ್ಷ್ಮಣ ಸವದಿ, ವಿಜಯಾನಂದ ಕಾಶಪ್ಪನವರ್, ಬಸವರಾಜರಾಯ ರೆಡ್ಡಿ ಸಚಿವರಾಗಲಿದ್ದಾರೆ.
ಕೊನೆಯ ಕ್ಷಣದಲ್ಲಿ ಎಸ್.ಎಸ್.ಮಲ್ಲಿಕಾರ್ರ್ಜುನ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಲುವಾಗಿ ಬೆಸ್ತ ಸಮುದಾಯದ ಮಂಕಾಳ ವೈದ್ಯ ಅವರನ್ನು ಕೈಬಿಡಲಾಗಿದೆ.
ಪರಿಶಿಷ್ಟ ಜಾತಿಯ ಪೈಕಿ ಬಲಗೈ ಸಮುದಾಯದ ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿದ್ದು, ಪ್ರಿಯಾಂಕ್ ಖರ್ಗೆ, ಪಿ.ಎಂ.ನರೇಂದ್ರಸ್ವಾಮಿ ಸಂಪುಟ ಸೇರಿದ್ದಾರೆ.ಎಡಗೈ ಸಮುದಾಯದ ಕೆ.ಎಚ್.ಮುನಿಯಪ್ಪ ಮೊದಲಿನಿಂದಲೂ ಸಚಿವರಾಗಿದ್ದು, ಅದೇ ಸಮುದಾಯದ ಮತ್ತೊಂದು ಉಪ ಪಂಗಡಕ್ಕೆ ಸೇರಿದ ಕೆ.ಎಸ್.ಬಸಂತಪ್ಪ ಅವಕಾಶ ಪಡೆದಿದ್ದಾರೆ. ಆರ್.ಬಿ.ತಿಮಾಪೂರ್, ಸುಧಾಮದಾಸ್ ಅವಕಾಶ ವಂಚಿತರಾಗಿದ್ದಾರೆ.ಬೋವಿ ಸಮುದಾಯದಿಂದ ಶಿವರಾಜ್ ತಂಗಡಗಿ, ಲಂಬಾಣಿ ಸಮುದಾಯದಿಂದ ರುದ್ರಪ್ಪ ಲಮಾಣಿ ಅವಕಾಶ ಪಡೆದಿದ್ದಾರೆ.
ಪರಿಶಿಷ್ಟ ಪಂಗಡದಿಂದ ಸತೀಶ್ ಜಾರಕಿಹೊಳಿ ಮೊದಲ ಸಚಿವರಾಗಿದ್ದರೆ ಬಿ.ನಾಗೇಂದ್ರ ವಾಲೀಕಿ ಹಗರಣದಲ್ಲಿ ರಾಜೀನಾಮೆ ನೀಡಿದ್ದರು. ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ.ಹೊಸಮುಖ ಟಿ.ರಘುಮೂರ್ತಿ ಅವರಿಗೆ ಮಣೆ ಹಾಕಲಾಗಿದೆ. ಮುಸ್ಲಿಂ ಸಮುದಾಯದಿಂದ ಯು.ಟಿ.ಖಾದರ್ ಸಚಿವರಾಗಿದ್ದು ಕೊನೇ ಕ್ಷಣದಲ್ಲಿ ಜಮೀರ್ ಅಹಮದ್ ಖಾನ್, ರಿಜ್ವಾನ್ ಅರ್ಷದ್ ಅವರೂ ಅವಕಾಶ ಪಡೆದಿದ್ದಾರೆ.
ಹಿಂದುಳಿದ ವರ್ಗಗಳಲ್ಲಿ ಪ್ರಮುಖ ಜಾತಿಯಾದ ಕುರುಬ ಸಮುದಾಯದಿಂದ ಬೈರತಿ ಸುರೇಶ್, ಯತೀಂದ್ರ ಸಿದ್ದರಾಮಯ್ಯ, ಗಾಯತ್ರಿ ಶಾಂತೇಗೌಡ, ಈಡಿಗ ಸಮುದಾಯದಿಂದ ಮಧು ಬಂಗಾರಪ್ಪ, ಉಪ್ಪಾರ ಸಮುದಾಯದಿಂದ ಪುಟ್ಟರಂಗಶೆಟ್ಟಿ, ಕ್ಷತ್ರಿಯಾ ಸಮುದಾಯದಿಂದ ಅಜಯ್ ಸಿಂಗ್, ಮರಾಠ ಸಮುದಾಯದಿಂದ ಸಂತೋಷ್‌ಲಾಡ್ ಸಚಿವರಾಗಿದ್ದಾರೆ.ಬೆಸ್ತ ಸಮುದಾಯದ ಮಂಕಾಳ ವೈದ್ಯ ಅವರ ಹೆಸರು ಮೊದಲ ಪಟ್ಟಿಯಲ್ಲಿತ್ತು. ಆದರೆ ಕೊನೇ ಕ್ಷಣದಲ್ಲಿ ಪ್ರಭಾವಿ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಪುತ್ರರೂ ಆಗಿರುವ ಎಸ್.ಎಸ್.ಮಲ್ಲಿಕಾರ್ಜುನ್ ಅವರಿಗೆ ಸ್ಥಾನ ಹೊಂದಿಸಲು ಮಂಕಾಳ ವೈದ್ಯ ಅವರನ್ನು ಕೈಬಿಡಲಾಗಿದೆ.
ಈ ಮೂಲಕ ಲಿಂಗಾಯತ ಸಮುದಾಯಕ್ಕೆ ಆರರ ಬದಲು ಏಳು ಸ್ಥಾನಗಳು ದೊರೆತಂತಾಗಿದೆ.ಕ್ರಿಶ್ಚಿಯನ್ ಸಮುದಾಯದಿಂದ ಹಿರಿಯರಾದ ಕೆ.ಜೆ.ಜಾರ್ಜ್ ಸಂಪುಟದಲ್ಲಿದ್ದಾರೆ.
ಭೌಗೋಳಿಕ ಆದ್ಯತೆ :
ಬೆಂಗಳೂರಿನಿಂದ ಆರು ಮಂದಿ ಸಚಿವರಾಗಿರುವುದರಿಂದ ಸಿಂಹಪಾಲು ದೊರೆತ್ತಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿಗೆ ಮೂರು ಸ್ಥಾನಗಳು ದೊರೆತ್ತಿವೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ತವರು ಜಿಲ್ಲೆ ಬೆಂಗಳೂರು ದಕ್ಷಿಣಕ್ಕೆ 2 ಸ್ಥಾನಗಳು ಸಿಕ್ಕಿವೆ. ಮೊದಲ ಪಟ್ಟಿಯಲ್ಲಿ ದಾವಣಗೆರೆಗೆ ಒಂದು ಮಂತ್ರಿ ಸ್ಥಾನ ಮಾತ್ರ ಸಿಕ್ಕಿತ್ತು. ಆದರೆ ಕೊನೆಯ ಕ್ಷಣದ ಬದಲಾವಣೆಯಲ್ಲಿ ಎಸ್.ಎಸ್.ಮಲ್ಲಿಕಾರ್ಜುನ್ ಸೇರ್ಪಡೆಯಿಂದ ಎರಡು ಸ್ಥಾನಗಳಾಗಿವೆ.
ಮಂಡ್ಯ, ಬೆಳಗಾವಿ, ಕೊಪ್ಪಳ ಜಿಲ್ಲೆಗಳಿಗೆ ತಲಾ 2, ಬಾಗಲಕೋಟೆ, ಹಾಸನ, ವಿಜಯಪುರ, ಬೀದರ್, ತುಮಕೂರು, ಹಾವೇರಿ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿತ್ರದುರ್ಗ, ದಕಿಣ ಕನ್ನಡ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಚಾಮರಾಜನಗರ, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ ಜಿಲ್ಲೆಗಳಿಗೆ ತಲಾ ಒಂದು ಸ್ಥಾನ ದೊರೆತ್ತಿದೆ.ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಗದಗ, ವಿಜಯನಗರ, ರಾಯಚೂರು, ಯಾದಗಿರಿ ಜಿಲ್ಲೆಗಳು ಸಂಪೂರ್ಣ ಅವಕಾಶ ವಂಚಿತವಾಗಿವೆ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಇಲ್ಲದೇ ಇರುವುದರಿಂದ ಅವಕಾಶ ಸಿಕ್ಕಿಲ್ಲ.
