ಬೆಂಗಳೂರು,ಮಾ.11- ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸೌದೆ ಒಲೆ ಇಡ್ಲಿ, ದಮ್ ಬಿರಿಯಾನಿ, ತಿಂಡಿ ಮನೆ ಎಂಬ ಹೋಟೆಲ್‌ಗಳು ಕೆಲವು ಕಡೆ ನಡೆಯುತ್ತಿದ್ದು, ಇದೀಗ ಎಲ್‌ಪಿಜಿ ವ್ಯತ್ಯಯ ಹಿನ್ನೆಲೆಯಲ್ಲಿ ಕೆಲ ಹೋಟೆಲ್‌ಗಳಲ್ಲಿ ಸೌದೆ ಒಲೆಯೇ ಗತಿಯಾದಂತಾಗಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದ್ದು, ಅದರ ಬಿಸಿ ಕರ್ನಾಟಕದ ಮೇಲೂ ತಟ್ಟಿದ್ದು, ಅಡುಗೆಮನೆಗೂ ಕೂಡ ಯುದ್ಧ ಪ್ರಾರಂಭವಾದಂತಾಗಿದೆ. ಈಗಾಗಲೇ ಗೃಹಬಳಕೆ ಹಾಗೂ ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳದಿಂದ ಗ್ರಾಹಕರಿಗೆ ಬರೆ ಎಳೆದಂತಾಗಿದೆ.
ಆರೋಗ್ಯದ ದೃಷ್ಟಿಯಿಂದ ಹಾಗೂ ಗ್ರಾಹಕರನ್ನು ಸೆಳೆಯುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಸೌದೆ ಒಲೆ ಹೋಟೆಲ್‌ಗಳು ಪ್ರಾರಂಭಗೊಂಡಿದ್ದವು. ಆದರೆ ಈಗ ಅನಿಲ ವ್ಯತ್ಯಯದಿಂದ ಸೌದೆ ಒಲೆ ಹಚ್ಚುವಂತಾಗಿದೆ.
ಸಣ್ಣಪುಟ್ಟ ಹೋಟೆಲ್‌ಗಳು ಇರಲಿ, ದೊಡ್ಡ ದೊಡ್ಡ ಹೋಟೆಲ್‌ಗಳಲ್ಲೂ ಸಹ ಸೌದೆಯನ್ನು ಬಳಸುವಂತಾಗಿದೆ. ಕಳೆದ ಕೆಲ ದಿನಗಳ ಹಿಂದೆ ಸಿಲಿಂಡರ್ ದರವನ್ನು ಹೆಚ್ಚಳ ಮಾಡಲಾಗಿತ್ತು. 1814 ರೂ.ಗಳಿದ್ದ ಒಂದು ಸಿಲಿಂಡರ್ ಈಗ 1929 ರೂ.ಗಳಾಗಿದ್ದು, ಗೃಹಬಳಕೆಯ 855 ರೂ.ಗಳಿಂದ 915 ರೂ.ಗಳಿಗೆ ಹೆಚ್ಚಿಸಲಾಗಿದೆ. ಈ ನಡುವೆ ದುಡ್ಡು ಕೊಟ್ಟರೂ ಸಿಲಿಂಡರ್‌ಗಳು ಸಿಗುತ್ತಿಲ್ಲ. ಗ್ಯಾಸ್ ಏಜೆನ್ಸಿಗಳ ಮುಂದೆ ಈಗಾಗಲೇ ನೋ ಸ್ಟಾಕ್ ನಾಮಫಲಕಗಳನ್ನು ಹಾಕಿದ್ದು, ಗ್ರಾಹಕರು ಮುಂಜಾಗ್ರತಾ ಕ್ರಮವಾಗಿ ಸಿಲಿಂಡರ್‌ಗಳನ್ನು ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ.
ಕೆಲವು ಹೋಟೆಲ್‌ಗಳ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದ್ದು, ಕೆಲ ಹೋಟೆಲ್‌ಗಳಲ್ಲಿ ದೋಸೆ ಮಾಡಲು ಹೆಚ್ಚು ಗ್ಯಾಸ್ ಬೇಕಾಗುತ್ತದೆ ಎಂಬ ದೃಷ್ಟಿಯಿಂದ 2-3 ಹೆಂಚುಗಳನ್ನು ಬಳಸುತ್ತಿದ್ದೆಡೆ ಒಂದಕ್ಕೆ ಬಂದಿದೆ. ಕೆಲವೆಡೆ ದೋಸೆ ಮಾಡುವುದನ್ನೇ ನಿಲ್ಲಿಸಲಾಗಿದೆ. ಹೆಚ್ಚು ಗ್ಯಾಸ್ ಬಳಕೆ ಮಾಡಿ ತಯಾರಾಗುವ ಗೋಬಿ ಮಂಚೂರಿ, ಪೂರಿ, ತಿಂಡಿ ತಿನಿಸುಗಳನ್ನು ಕಡಿಮೆ ಮಾಡಲಾಗಿದೆ.
ಎಲೆಕ್ಟ್ರಿಕ್ ಇಂಡೆಕ್ಷನ್ ಸ್ಟವ್‌ಗಳ ಮೊರೆ :
ಅನಿಲ ಸರಬರಾಜು ವ್ಯತ್ಯಯದಿಂದ ಹೋಟೆಲ್ ಮಾಲಿಕರು ಕಂಗಾಲಾಗಿದ್ದು, ಇದೀಗ ಎಲೆಕ್ಟ್ರಿಕ್ ಇಂಡಕ್ಷನ್ ಸ್ಟವ್ ಮತ್ತು ಪಾತ್ರೆಗಳ ಮೊರೆ ಹೋಗಿದ್ದಾರೆ. ಮೊದಲೆಲ್ಲಾ ಟೀ, ಕಾಫಿಯನ್ನು ಅಡುಗೆ ಅನಿಲದಲ್ಲಿ ಮಾಡಲಾಗುತ್ತಿತ್ತು. ಇದೀಗ ಟೀ, ಕಾಫಿ ತಯಾರಿಗೆ ಇಂಡಕ್ಷನ್ ಸ್ಟವ್‌ಗಳನ್ನು ಬಳಸಲಾಗುತ್ತಿದೆ ಎಂದು ಉಲ್ಲಾಳ ಮುಖ್ಯರಸ್ತೆಯ ಹೋಟೆಲ್ ಮಾಲೀಕರೊಬ್ಬರು ತಿಳಿಸಿದ್ದಾರೆ.
ಗ್ರಾಹಕರ ಸಂಖ್ಯೆ ಇಳಿಕೆ :
ಅನಿಲ ಬೆಲೆ ಏರಿಕೆ ಹಾಗೂ ಸರಬರಾಜು ವ್ಯತ್ಯಯ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮ ಕಷ್ಟವಾಗಿದ್ದು, ಸೀಮಿತ ಆಹಾರಗಳನ್ನು ಮಾತ್ರ ತಯಾರು ಮಾಡಲಾಗುತ್ತಿದೆ. ಜೊತೆಗೆ ಬೆಲೆಯೂ ಕೂಡ ಹೆಚ್ಚಳ ಮಾಡಿದ್ದರಿಂದ ಗ್ರಾಹಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.
ಪಿಜಿಗಳಲ್ಲಿ ಚಪಾತಿ, ಪೂರಿ ಬಂದ್ :
ನಗರದಲ್ಲಿ ಬಹುತೇಕ ಪಿಜಿಗಳಲ್ಲೂ ಸಹ ಊಟದ ಮೆನುವಿನಲ್ಲಿ ಬದಲಾವಣೆ ಮಾಡಲಾಗಿದ್ದು, ಚಪಾತಿ, ಪೂರಿ ಬಂದ್ ಮಾಡಲಾಗಿದೆ. ಪುಳಿಯೊಗ್ಗರೆ, ಉಪ್ಪಿಟ್ಟು, ಪಲಾವ್ ಮಾತ್ರ ನೀಡುವಂತಾಗಿದೆ.
ಬೆಂಗಳೂರಿನ ಪಿಜಿಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರ್‌ಗಳು, ವಿದ್ಯಾರ್ಥಿಗಳು, ಕಂಪನಿ, ಕಾರ್ಖಾನೆ ಉದ್ಯೋಗಿಗಳು ಆಶ್ರಯ ಪಡೆದಿದ್ದು, ದಿನಕ್ಕೆ ಮೂರು ಬಾರಿ ಆಹಾರ ಒದಗಿಸುವುದು ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ.
