Saturday, May 2, 2026
Homeರಾಜ್ಯಬಡ್ತಿಗಾಗಿ ನಕಲಿ ನಕಲಿ ಡಿಪ್ಲೋಮಾ ಪ್ರಮಾಣ ಪತ್ರ ಆರೋಪ : ನಿವೃತ್ತ ನ್ಯಾಯಾಧೀಶರಿಂದ ತನಿಖೆ

ಬಡ್ತಿಗಾಗಿ ನಕಲಿ ನಕಲಿ ಡಿಪ್ಲೋಮಾ ಪ್ರಮಾಣ ಪತ್ರ ಆರೋಪ : ನಿವೃತ್ತ ನ್ಯಾಯಾಧೀಶರಿಂದ ತನಿಖೆ

Allegation of fake diploma certificate for promotion: Investigation by retired judge

ಬೆಂಗಳೂರು,ಮಾ.11- ಸಾರಿಗೆ ಇಲಾಖೆಯಲ್ಲಿ ಲಿಪಿಕ ವರ್ಗದವರು ಬಡ್ತಿ ಪಡೆಯಲು ನಕಲಿ ಡಿಪ್ಲೋಮಾ ಪ್ರಮಾಣ ಪತ್ರ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ವಿಧಾನಪರಿಷತ್‌ಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್‌‍ ಶಾಸಕಾಂಗ ಪಕ್ಷದ ಉಪನಾಯಕ ಟಿ.ಎ.ಶರವಣ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ವಿಚಾರ ತಾಂತ್ರಿಕ ಶಿಕ್ಷಣ ಇಲಾಖೆಯನ್ನು ಒಳಗೊಂಡಿರುವುದರಿಂದ ನಿವೃತ್ತ ಜಿಲ್ಲಾ ಸತ್ರ ನ್ಯಾಯಾಧೀಶರಾದ ನಾರಾಯಣ್‌ ಎಂಬುವರಿಂದ ತನಿಖೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದೆ ಎಂದರು.

ಈ ವಿಚಾರದಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದ ಅವರು, ಗ್ರೂಪ್‌ ಸಿ ವೃಂದದಿಂದ ಮೋಟಾರು ವಾಹನ ನಿರೀಕ್ಷಕರ ಹುದ್ದೆಗೆ ಬಡ್ತಿ ನೀಡಲು ಸರ್ಕಾರ 2022ರ ಅ.12 ರಂದು ಅಧಿಸೂಚನೆ ಹೊರಡಿಸಿ ಅವಕಾಶ ನೀಡಿತ್ತು.

ಸಾರಿಗೆ ಇಲಾಖೆಯ ಗ್ರೂಪ್‌ ಸಿ ನೌಕರರಿಗೆ ಡಿಪ್ಲೋಮಾ ಆಟೋಮೊಬೈಲ್‌ ಸಂಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಸಾರಿಗೆ ಇಲಾಖೆಯಿಂದ ಆಕ್ಷೇಪಣಾ ರಹಿತ ಪತ್ರವನ್ನು 2022-23 ರಲ್ಲಿ 17 ನೌಕರರಿಗೆ, 2023-24 ರಲ್ಲಿ 24 ನೌಕರರಿಗೆ ಹಾಗೂ 2024-25 ರಲ್ಲಿ 15 ನೌಕರರಿಗೆ ನೀಡಲಾಗಿತ್ತು. ತಾಂತ್ರಿಕ ಶಿಕ್ಷಣ ಇಲಾಖೆಯಡಿ ಬರುವ ಕಾಲೇಜುಗಳಲ್ಲಿ ಡಿಪ್ಲೋಮಾ ಪದವಿ ಸಂಬಂಧ ಪ್ರವೇಶಾತಿ ಪಡೆದಿರುವ ಅಭ್ಯರ್ಥಿಗಳು ಸಲ್ಲಿಸಿರುವ ಸೇವಾನುಭವ ಪ್ರಮಾಣಪತ್ರಗಳ ನೈಜತೆ ಕುರಿತು ವರದಿ ಸಲ್ಲಿಸುವಂತೆ ಸಾರಿಗೆ ಆಯುಕ್ತರು ಕೋರಿದ್ದರು.

2020 ರ ಫೆ.9ರವರೆಗೆ ನೈಜತೆ ಕುರಿತ ಯಾವುದೇ ಪ್ರಸ್ತಾಪ ಬಂದಿಲ್ಲ. ಸರ್ಕಾರಿ ಕೆಲಸದೊಂದಿಗೆ ವಿವಿಧ ಖಾಸಗಿ ಕಂಪನಿ ಅಥವಾ ಕೈಗಾರಿಕೆಗಳಲ್ಲಿ ತಾಂತ್ರಿಕ ಹುದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿರುವುದಾಗಿ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರು ಸಲ್ಲಿಸಿರುವ ವರದಿ ಹಾಗೂ ದಾಖಲೆಗಳನ್ನು ಆಧರಿಸಿ ಸಂಬಂಧಿಸಿದ ನೌಕರರಿಗೆ ಮಾ.3 ರಂದು ಕಾರಣ ಕೇಳಿ ನೋಟೀಸ್‌‍ ಜಾರಿ ಮಾಡಲಾಗಿದೆ. ಅವರಿಂದ ಸಮಜಾಯಿಷಿ ಸ್ವೀಕೃತವಾದ ನಂತರ ಪರಿಶೀಲಿಸಿ ನಿಯಮಾನುಸಾರ ಸಾರಿಗೆ ಆಯುಕ್ತರು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಸಚಿವರು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಶರವಣ, ಬೆಳಗಾವಿ ಅಧಿವೇಶನದ ಸಂದರ್ಭದಲ್ಲೂ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು. ಆಗ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆಯನ್ನು ಸಚಿವರು ನೀಡಿದ್ದರು. ಆದರೆ ಇದುವರೆಗೂ ಭರವಸೆ ಈಡೇರಿಲ್ಲ. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಜಾರಿಯಾಗಬೇಕೆಂದು ಆಗ್ರಹಿಸಿದರು.

RELATED ARTICLES

Latest News