ಬೆಂಗಳೂರು, ಮಾ.11- ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 81 ಆಸ್ತಿಗಳನ್ನು ಮಾ.13ರಂದು ಹರಾಜು ಹಾಕಲು ಬೆಂಗಳೂರು ಉತ್ತರ ನಗರ ಪಾಲಿಕೆ ತೀರ್ಮಾನಿಸಿದೆ. ವಲಯ-1 ಮತ್ತು ವಲಯ-2 ವ್ಯಾಪ್ತಿಯಲ್ಲಿ ಒಟ್ಟಾರೆ 81 ಆಸ್ತಿಗಳನ್ನು ಹರಾಜು ಮಾಡಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ವಲಯ-1ರಲ್ಲಿ 47 ಆಸ್ತಿಗಳಿಂದ 1,32,18,421 ಹಾಗೂ ವಲಯ-2ರಲ್ಲಿ 34 ಆಸ್ತಿಗಳಿಂದ 62,18,279 ಸೇರಿ ಒಟ್ಟು 1,94,36,700 ರೂ.ಗಳ ತೆರಿಗೆ ಬಾಕಿ ಉಳಿದಿದೆ. ಇದರಿಂದ ಬಾಕಿದಾರರ ಆಸ್ತಿಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗುತ್ತಿದೆ.ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ-2025 ಅನ್ವಯ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ಸ್ವತ್ತುಗಳ ಮಾಲೀಕರು ಪ್ರತಿ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಪಾವತಿಸಬೇಕು. ತೆರಿಗೆ ಪಾವತಿಸದಿದ್ದಲ್ಲಿ ಆಸ್ತಿ ತೆರಿಗೆ ನಿರ್ಧಾರ, ವಸೂಲಾತಿ ಮತ್ತು ನಿರ್ವಹಣೆ ನಿಯಮಗಳು-2024ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಸ್ತಿದಾರರ ವಿವರಗಳನ್ನು ಪಾಲಿಕೆಯ ಅಧಿಕೃತ ಜಾಲತಾಣದಲ್ಲಿ ವೀಕ್ಷಿಸಿ ತೆರಿಗೆ ಪಾವತಿಸುವ ಅವಕಾಶವಿದೆ.ಈ ಮೊದಲು ಮಾರ್ಚ್ 6ರಂದು ಹರಾಜು ಪ್ರಕ್ರಿಯೆ ನಡೆಸಲಾಗಿದ್ದರೂ ಬಿಡ್ ದಾರರು ಮುಂದೆ ಬಾರದ ಕಾರಣ ಆಸ್ತಿಗಳನ್ನು ಪಾಲಿಕೆಯ ವಶದಲ್ಲಿರಿಸಲಾಗಿತ್ತು. ಇದೀಗ ಇದೇ ಆಸ್ತಿಗಳನ್ನು ಮತ್ತೆ ಹರಾಜಿಗೆ ಇಡಲಾಗುತ್ತಿದೆ.ಮಾರ್ಚ್ 13ರಂದು ಮಧ್ಯಾಹ್ನ 3 ಗಂಟೆಗೆ ಯಲಹಂಕದ ಎನ್.ಇ.ಎಸ್. ಬಳಿ ಇರುವ ಮಿನಿ ವಿಧಾನಸೌಧದ ಮೂರನೇ ಮಹಡಿಯ ಸಭಾಂಗಣದಲ್ಲಿ ವಲಯ-1 ಮತ್ತು ವಲಯ-2ರ ಜಂಟಿ ಆಯುಕ್ತರ ಸಮ್ಮುಖದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಆಸಕ್ತ ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸುವಂತೆ ಪಾಲಿಕೆ ಮನವಿ ಮಾಡಿದೆ.ಹರಾಜು ಪ್ರಕ್ರಿಯೆಗೆ ಮುನ್ನ ಬಾಕಿ ಇರುವ ಆಸ್ತಿ ತೆರಿಗೆ ಪಾವತಿಸಿದರೆ ಆ ಆಸ್ತಿಯನ್ನು ಹರಾಜಿನಿಂದ ಕೈಬಿಡಲಾಗುತ್ತದೆ. ಅಲ್ಲದೆ ಆಸ್ತಿಯ ಮಾಲೀಕರು ತಮ್ಮ ಆಕ್ಷೇಪಣೆಗಳನ್ನು ಸಂಬಂಧಪಟ್ಟ ಜಂಟಿ ಆಯುಕ್ತರ ಕಚೇರಿಗೆ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದರು.
