ಬೆಂಗಳೂರು,ಮಾ.11- ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾಜಿ ಸೈನಿಕರ ಕುಟುಂಬಗಳಿಗೆ ನಿವೇಶನ ಮಂಜೂರು ಮಾಡಲು ಅವಕಾಶವಿಲ್ಲ. ಆದರೆ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಿವೇಶನಗಳನ್ನು ನೀಡಲು ಅವಕಾಶವಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನಪರಿಷತ್‌ಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಡಿ.ಟಿ.ಶ್ರೀನಿವಾಸ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲ್ಲೂಕು ಗಂಟಿಗಾನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ 38 ಎಕರೆ 33 ಗುಂಟೆ ಜಮೀನನ್ನು ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣ ಮಾಡಿ ಫಲಾನುಭವಿಗಳಿಗೆ ಹಂಚಿಕೆ ಮಾಡಲು ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಹಸ್ತಾಂತರಿಸಲಾಗಿತ್ತು.
ಜಿಲ್ಲಾಧಿಕಾರಿಗಳಿಗೆ ಅಧಿಕಾರ ಇಲ್ಲದಿದ್ದರೂ. ವಸತಿ ಉದ್ದೇಶಕ್ಕೆ ಜಮೀನು ಕಾಯ್ದಿರಿಸಿದ್ದರು. ರಾಜೀವ್ ಗಾಂಧಿ ವಸತಿ ನಿಗಮವು ಈಗಾಗಲೇ ಮಾಜಿ ಸೈನಿಕರಿಗೆ ಹಂಚಿಕೆ ಮಾಡಲು ಮಂಜೂರಾಗಿದ್ದ 15 ಎಕರೆ 15 ಗುಂಟೆ ಜಮೀನಿನಲ್ಲಿ ಗುಂಪು ಮನೆ ನಿರ್ಮಾಣ ಮಾಡಿ ಹಸ್ತಾಂತರಿಸಿದೆ.
ಅಲ್ಲಿ ಸಶಾನಗಳೂ ಇವೆ. 4.4 ಎಕರೆ 18 ಗುಂಟೆ ಜಮೀನು ಮಾತ್ರ ಉಳಿದಿದ್ದು, ಇದರಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ಮೂಸಲಕ ಬಹುಮಹಡಿ ಸಮುಚ್ಚಯ ನಿರ್ಮಿಸಿ ಮಾಜಿ ಸೈನಿಕರಿಗೆ ಮನೆಗಳನ್ನು ಹಂಚಿಕೆ ಮಾಡಲು ಸಲಹೆ ಮಾಡಬಹುದಷ್ಟೆ ಎಂದು ಹೇಳಿದರು.
ಇದುವರೆಗೂ ಯಲಹಂಕ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಯಾವುದೇ ನಿವೇಶನಗಳನ್ನು ವಿಂಗಡಿಸಿ ಬಡಾವಣೆ ರಚಿಸಿಲ್ಲ. ಸೈನಿಕ ಕಲ್ಯಾಣ ಮತ್ತು ಪುನರ್‌ವಸತಿ ಇಲಾಖೆಯ ಮೂಲಕ ಒಟ್ಟು 253 ಅರ್ಜಿಗಳನ್ನು ಸಲ್ಲಿಸಲಾಗಿದೆ. ಆದರೂ ಯಾವುದೇ ಮಾಜಿ ಸೈನಿಕ ಫಲಾನುಭವಿಗೆ ನಿವೇಶನ ವಿತರಿಸಿಲ್ಲ ಎಂದು ಅವರು ಮಾಹಿತಿ ನೀಡಿದರು.
