ವೆಸ್ಟ್ ಪಾಮ್ ಬೀಚ್ (ಅಮೆರಿಕಾ), ಮಾ.15- ಅಮೆರಿಕಾ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ಆರಂಭಿಸಿದ ಬಳಿಕ ಕಳೆದ ಎರಡು ವಾರಗಳಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜಕೀಯವಾಗಿ ಒತ್ತಡಕ್ಕೆ ಸಿಲುಕುತ್ತಿರುವುದು ಕಂಡುಬರುತ್ತಿದೆ.
ಯುದ್ಧ ಆರಂಭಿಸಿದ ಕಾರಣ ಹಾಗೂ ಅದನ್ನು ಹೇಗೆ ಅಂತ್ಯಗೊಳಿಸುವುದು ಎಂಬುದನ್ನು ಜನತೆಗೆ ಸಮರ್ಪಕವಾಗಿ ವಿವರಿಸಲು ಟ್ರಂಪ್ ವಿಫಲರಾಗಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಯುದ್ಧದಲ್ಲಿ ಅಮೆರಿಕ ಸೈನಿಕರ ಸಾವು, ತೈಲ ಬೆಲೆ ಏರಿಕೆ ಮತ್ತು ಹಣಕಾಸು ಮಾರುಕಟ್ಟೆಗಳ ಕುಸಿತದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಅವರ ಬೆಂಬಲಿಗರಲ್ಲಿಯೂ ಅಸಮಾಧಾನಗಳು ಸೃಷ್ಟಿಯಾಗಿವೆ. ಜನಮತ ಸಮೀಕ್ಷೆಗಳಲ್ಲಿ ಟ್ರಂಪ್ ಜನಪ್ರಿಯತೆ ಕುಸಿಯುತ್ತಿದೆ.
ಇದರ ನಡುವೆ, ಕೆಲವು ರಷ್ಯಾ ತೈಲ ಸಾಗಣೆಗಳ ಮೇಲಿನ ನಿರ್ಬಂಧಗಳನ್ನು ಟ್ರಂಪ್ ಸಡಿಲಿಸಿದ ಹಿನ್ನೆಲೆಯಲ್ಲಿ ಮಾಸ್ಕೋಗೆ ಲಾಭವಾಗುತ್ತಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ತೈಲ ಬೆಲೆ ಏರಿಕೆಯು ಉಕ್ರೇನ್ ಯುದ್ಧ ನಡೆಸುವಲ್ಲಿ ರಷ್ಯಾ ಅಧ್ಯಕ್ಷ ವ್‌ಲಾದಿಮಿರ್ ಪುಟಿನ್ ಅವರಿಗೆ ಆರ್ಥಿಕವಾಗಿ ನೆರವಾಗುತ್ತಿದೆ ಎನ್ನಲಾಗಿದೆ.
2024ರ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಡೆಮಾಕ್ರಾಟ್ ಪಕ್ಷ ಈಗ ಟ್ರಂಪ್ ಅವರ ಇರಾನ್ ನೀತಿಯನ್ನು ತೀವ್ರವಾಗಿ ವಿರೋಧಿಸುತ್ತಿದೆ. ಆರ್ಥಿಕ ಅಸ್ಥಿರತೆಯನ್ನು ರಿಪಬ್ಲಿಕನ್ ಸರ್ಕಾರದ ವೈಫಲ್ಯವೆಂದು ಪ್ರಚಾರ ಮಾಡುತ್ತಿದೆ.
ಡೆಮಾಕ್ರಾಟ್ ತರಬೇತಿ ಸಮಿತಿಯ ಸಿಇಒ ಕೆಲ್ಲಿ ಡೈಟ್ರಿಚ್, ಮುಂದಿನ ಮಧ್ಯಾವಧಿ ಚುನಾವಣೆಗೆ ಡೆಮಾಕ್ರಾಟ್‌ಗಳು ಉತ್ತಮ ಸ್ಥಿತಿಯಲ್ಲಿ ಇದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.ನಿನ್ನೆ ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನ ತಮ ಗಾಲ್‌್ಫ ಕ್ಲಬ್‌ನಲ್ಲಿ ಸಮಯ ಕಳೆದ ಟ್ರಂಪ್, ನಂತರ ಮಾರಾ-ಲಾಗೋ ನಿವಾಸದಲ್ಲಿ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಹಾರ್ಮುಜ್ ಸಮುದ್ರ ಮಾರ್ಗದಲ್ಲಿ ತೈಲ ಸಾಗಣೆ ತೀವ್ರವಾಗಿ ವ್ಯತ್ಯಯಗೊಂಡಿರುವ ಹಿನ್ನೆಲೆಯಲ್ಲಿ, ಅಂತಾರಾಷ್ಟ್ರೀಯ ಸಮುದಾಯದ ಸಹಾಯ ಅಗತ್ಯವಿದೆ ಎಂದು ಟ್ರಂಪ್ ಮೊದಲ ಬಾರಿಗೆ ಹೇಳಿದರು. ವಿಶ್ವದ ಸುಮಾರು ಐದನೇ ಭಾಗದ ತೈಲ ಸಾಗಣೆ ಈ ಮಾರ್ಗದ ಮೂಲಕ ನಡೆಯುತ್ತದೆ.
ಇರಾನ್ ಈ ಮಾರ್ಗದ ಮೇಲೆ ಒತ್ತಡ ಮುಂದುವರಿಸುವುದಾಗಿ ಹೇಳಿದ್ದು, ತೈಲ ಮೂಲಸೌಕರ್ಯಗಳ ಮೇಲೆ ದಾಳಿಯನ್ನು ಮುಂದುವರಿಸುವ ಎಚ್ಚರಿಕೆ ನೀಡಿದೆ. ಹಾರ್ಮುಜ್ ಕಣಿವೆಯನ್ನು ಸುರಕ್ಷಿತವಾಗಿಡಲು ಹಲವು ದೇಶಗಳು ಅಮೆರಿಕದ ಜೊತೆ ಯುದ್ಧ ನೌಕೆಗಳನ್ನು ಕಳುಹಿಸಲಿವೆ ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ. ಆದರೆ ಈ ಯೋಜನೆ ಯಾವಾಗ ಆರಂಭವಾಗಲಿದೆ ಎಂಬುದು ಸ್ಪಷ್ಟವಾಗಿಲ್ಲ.
ಬ್ರಿಟನ್ ರಕ್ಷಣಾ ಸಚಿವಾಲಯವು ಮಿತ್ರ ರಾಷ್ಟ್ರಗಳೊಂದಿಗೆ ಸಮಾಲೋಚನೆ ನಡೆಯುತ್ತಿದೆ ಎಂದು ತಿಳಿಸಿದೆ.ಇರಾನ್ ಯುದ್ಧದಿಂದ ಉಂಟಾದ ತೈಲ ಕೊರತೆಯನ್ನು ತಗ್ಗಿಸಲು ಅಮೆರಿಕಾ ಖಜಾನೆ ಇಲಾಖೆ ರಷ್ಯಾ ತೈಲದ ಮೇಲೆ 30 ದಿನಗಳ ನಿರ್ಬಂಧ ಸಡಿಲಿಕೆ ಘೋಷಿಸಿದೆ. ಇದನ್ನು ಕೆಲವು ಮಿತ್ರ ರಾಷ್ಟ್ರಗಳು ಟೀಕಿಸಿವೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ, ಈ ನಿರ್ಧಾರ ರಷ್ಯಾದ ಸ್ಥಿತಿಯನ್ನು ಬಲಪಡಿಸುತ್ತದೆ ಎಂದು ಹೇಳಿದ್ದಾರೆ.ಇಂಧನ ಬೆಲೆ ಏರಿಕೆಯಿಂದ ಅಮೆರಿಕಾದ ಮತದಾರರ ಅಸಮಾಧಾನ ಹೆಚ್ಚುವ ಸಾಧ್ಯತೆ ಇದೆ. ಗ್ಯಾಸೋಲಿನ್ ಬೆಲೆ ಇಳಿಕೆಯಾಗಲಿದೆ ಎಂದು ಟ್ರಂಪ್ ಭರವಸೆ ನೀಡಿದರೂ, ಯುದ್ಧ ಮುಂದುವರಿದಷ್ಟು ರಾಜಕೀಯ ಪ್ರಶ್ನೆಗಳು ಹೆಚ್ಚಾಗಲಿವೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ರಿಪಬ್ಲಿಕನ್ ಸೆನೆಟರ್ ರ್ಯಾಂಡ್ ಪಾಲ್ ಕೂಡ, ತೈಲ ಬೆಲೆ ಹೆಚ್ಚಾದರೆ ಪಕ್ಷಕ್ಕೆ ಚುನಾವಣೆಯಲ್ಲಿ ದೊಡ್ಡ ಹಿನ್ನಡೆ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ.ಇರಾನ್ ಯುದ್ಧವು ಟ್ರಂಪ್ ಅವರ ಮೇಕ್ ಅಮೆರಿಕಾ ಗ್ರೇಟ್ ಅಗೇನ್ ಬೆಂಬಲಿಗರಲ್ಲಿಯೂ ಭಿನ್ನಾಭಿಪ್ರಾಯ ಉಂಟುಮಾಡಿದೆ. ಕೆಲವರು ಯುದ್ಧ ಬೆಂಬಲಿಸಿದರೆ, ಇನ್ನೂ ಕೆಲವರು ಯುದ್ಧಗಳನ್ನು ಅಂತ್ಯಗೊಳಿಸುವ ಭರವಸೆಯೊಂದಿಗೆ ಟ್ರಂಪ್ ಪ್ರಚಾರ ನಡೆಸಿದ್ದರು ಎಂದು ಟೀಕಿಸುತ್ತಿದ್ದಾರೆ.
ಡೆಮಾಕ್ರಾಟ್ ತಂತ್ರಜ್ಞ ಬ್ರಾಡ್ ಬ್ಯಾನನ್, ಬೆಲೆ ಇಳಿಸುತ್ತೇವೆ ಎಂಬ ಭರವಸೆ ನೀಡಿದ್ದರೂ ಬೆಲೆಗಳು ಏರುತ್ತಿವೆ ಎಂಬುದನ್ನು ಜನರಿಗೆ ನೆನಪಿಸುತ್ತಿದ್ದರೆ ಸಾಕು ಎಂದು ಹೇಳಿದ್ದಾರೆ.
