ಬೆಂಗಳೂರು, ಮಾ.22- ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆಯ ವಿಡಿಯೋ ಆಧಾರದ ಮೇಲೆ ಇಲಾಖಾ ತನಿಖೆ ನಡೆಯಲಿದ್ದು, ವರದಿ ನಂತರ ಸೂಕ್ತಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈರಲ್ ವಿಡಿಯೋಗಳು ಅಸಲಿ ಎಂದು ಫೊರೆನ್ಸಿಕ್ ಸೈನ್ಸ್ ಲ್ಯಾಬ್ (ಎಫ್‌ಎಸ್‌ಎಲ್) ವರದಿ ಕುರಿತಾಗಿ ಪ್ರತಿಕ್ರಿಯಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಬೆಳಕಿಗೆ ಬಂದ ವಿಡಿಯೋಗಳು ಎಐ ಸೃಷ್ಟಿಯೆಂದು ರಾಮಚಂದ್ರರಾವ್ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ವಿಡಿಯೋಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿತ್ತು. ಇನ್ನೂ ಮುಂದೆ ಇಲಾಖಾ ವಿಚಾರಣೆ ನಡೆಯಲಿದೆ. ರಾಮಚಂದ್ರ ರಾವ್ ಏನು ಹೇಳುತ್ತಾರೆ ಎಂದು ಕೇಳಬೇಕಾಗುತ್ತದೆ. ಇಲಾಖಾ ವಿಚಾರಣಾ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ಬಳಿಕ ಅದನ್ನು ಆಧರಿಸಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಪಾವಗಡದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯ ಆತಹತ್ಯೆ ಪ್ರಕರಣ ಕುರಿತು ಮಾತನಾಡಿದ ಸಚಿವರು, ಇಲಾಖಾ ಮಟ್ಟದಲ್ಲಿ ಸಂಪೂರ್ಣ ಪರಿಶೀಲನೆ ನಡೆಯಲಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು.
ಮೃತಪಟ್ಟವರು ಜಂಟಿ ನಿರ್ದೇಶಕರ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ಇದರ ಹಿಂದೆ ಬೇರೆ ಕಾರಣಗಳಿವೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತದೆ. ಹಿರಿಯ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿಗಳು ತಪ್ಪು ಮಾಡಿದಾಗ ನೋಟಿಸ್ ನೀಡುವುದು ಸಾಮಾನ್ಯ. ತಪ್ಪು ದೃಢಪಟ್ಟರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಇದು ತುಂಬಾ ಕಷ್ಟದ ಕೆಲಸವಾಗಿತ್ತು ಎಂದು ಹೇಳಿದರು. ನಾನು ಪಕ್ಷದ ಅಧ್ಯಕ್ಷನಾಗಿದ್ದಾಗಲೂ ಅಭ್ಯರ್ಥಿಗಳ ಆಯ್ಕೆ ವೇಳೆ ಇಂತಹ ಸಮಸ್ಯೆಗಳು ಎದುರಾಗಿದ್ದವು. ಅವುಗಳನ್ನು ಬಗೆಹರಿಸಲಾಗಿತ್ತು. ಅಂತಿಮವಾಗಿ ಯಾರಾದರು ಒಬ್ಬರಿಗೆ ಟಿಕೆಟ್ ನೀಡಲೇಬೇಕು. ಸಾಧಕ-ಬಾಧಕಗಳನ್ನು ಪರಿಶೀಲಿಸಿ ಹೈಕಮಾಂಡ್ ತೀರ್ಮಾನ ಮಾಡಿದೆ ಎಂದರು.
ಎಚ್.ವೈ. ಮೇಟಿ ಕುಟುಂಬ ಹಾಗೂ ಇತರರು ಎಂಬ ಪರಿಸ್ಥಿತಿ ಬಾಗಲಕೋಟೆಯಲ್ಲಿ ನಿರ್ಮಾಣವಾಗಿತ್ತು. ಉಸ್ತುವಾರಿಗಳು, ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸೇರಿದಂತೆ ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಎಲ್ಲಾ ಸಮಸ್ಯೆಗಳು ಬಗೆ ಹರಿದಿವೆ. ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
ಕುಟುಂಬ ರಾಜಕೀಯ ಎಂಬ ಆರೋಪವನ್ನು ಹೈಕಮಾಂಡ್ ಗಮನಿಸಿತ್ತು. ಎಲ್ಲಾ ಮಾನದಂಡಗಳನ್ನು ಪರಿಗಣಿಸಿಯೇ ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಮಲ್ಲಿಕಾರ್ಜುನ್‌ಗೆ ಬಾಗಲಕೋಟೆಯಲ್ಲಿ ಉಮೇಶ್‌ಮೇಟಿಗೆ ಟಿಕೆಟ್ ನೀಡಿದೆ ಎಂದರು.
ಪಕ್ಷ ಗೆದ್ದಿರುವ ಸ್ಥಾನವನ್ನು ಉಳಿಸಿಕೊಳ್ಳುವುದು ಮುಖ್ಯ. ಈ ಬಾರಿ ಕೂಡ ಗೆಲ್ಲುವುದು ಮುಖ್ಯ. ಎರಡೂ ಕಡೆ ಕುಟುಂಬದವರು ಟಿಕೆಟ್ ಕೇಳಿದ್ದರು. ಮತ್ತೊಂದೆಡೆ ಕಾರ್ಯಕರ್ತರು ಬೇರೆ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದರು. ಎಲ್ಲಾ ವಿಚಾರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಹೈಕಮಾಂಡ್ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.
ಹೈಕಮಾಂಡ್ ತೀರ್ಮಾನಕ್ಕೆ ನಾವು ಎಲ್ಲರೂ ಬದ್ಧರಾಗಿದ್ದು, ಅಭ್ಯರ್ಥಿಗಳನ್ನು ಗೆಲ್ಲಿಸಲು ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಚುನಾವಣೆ ನಡೆಸಿ ಜಯ ಸಾಧಿಸಬೇಕು ಎಂದು ಕರೆ ನೀಡಿದರು.
