Saturday, May 2, 2026
Homeರಾಜ್ಯLPG ಕೊರತೆ : ಹೋಟೆಲ್‌ಗಳು ಬಂದ್‌, ಸಂಕಷ್ಟಕ್ಕೆ ಸಿಲುಕಿದ ತರಕಾರಿ ಬೆಳೆಗಾರರು

LPG ಕೊರತೆ : ಹೋಟೆಲ್‌ಗಳು ಬಂದ್‌, ಸಂಕಷ್ಟಕ್ಕೆ ಸಿಲುಕಿದ ತರಕಾರಿ ಬೆಳೆಗಾರರು

LPG shortage: Hotels closed, vegetable growers in trouble

ಮೈಸೂರು,ಮಾ.22- ವಾಣಿಜ್ಯ ಬಳಕೆಯ ಗ್ಯಾಸ್‌‍ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಹಿನ್ನೆಲೆಯಲ್ಲಿ ಬಹುತೇಕ ಹೋಟೆಲ್‌ಗಳು ಬಂದ್‌ ಆಗಿದ್ದು, ತರಕಾರಿಗಳ ಬೆಲೆ ಕುಸಿದಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಸಿಲಿಂಡರ್‌ ಕೊರತೆಯಿಂದ ಮಧ್ಯಮ ವರ್ಗದ ಹೋಟೆಲ್‌ಗಳು ಸರಿಯಾಗಿ ನಡೆಯದ ಕಾರಣ ಜಿಲ್ಲೆಯಲ್ಲಿ ತರಕಾರಿ ಬೆಳೆಗಳಿಗೆ ಬೇಡಿಕೆ ಕುಸಿಯಲು ಪ್ರಾರಂಭವಾಗಿದೆ. ಪರಿಸ್ಥಿತಿ ಇದೇ ರೀತಿ ಕೆಲವು ದಿನಗಳ ಕಾಲ ಮುಂದುವರಿದರೆ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆ ಇದೆ.

ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುತ್ತಾರೆ. ಈ ತರಕಾರಿ ಕೇವಲ ಜಿಲ್ಲೆಯ ಜನರು ಖರೀದಿಸುವುದು ಮಾತ್ರವಲ್ಲದೆ ಕೊಡಗು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ. ಆದರೆ, ಇರಾನ್‌ ಮೇಲೆ ಅಮೆರಿಕ ಮತ್ತು ಇಸ್ರೇಲ್‌ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗ್ಯಾಸ್‌‍ ಪೂರೈಕೆಯಲ್ಲಿ ದೊಡ್ಡ ಪ್ರಮಾಣದ ವ್ಯತ್ಯಯ ಉಂಟಾಗಿದೆ.

ಹೀಗಾಗಿ ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಯ ಗ್ಯಾಸ್‌‍ ಸಿಲಿಂಡರ್‌ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಸಿಲಿಂಡರ್‌ ದೊರೆಯದ ಹಿನ್ನೆಲೆಯಲ್ಲಿ ಸಾಕಷ್ಟು ಹೋಟೆಲ್‌ಗಳು ಹಾಗೂ ರಸ್ತೆ ಬದಿ ವ್ಯಾಪಾರಿಗಳು ತರಕಾರಿಯ ಬಳಕೆ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ತರಕಾರಿಗೆ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ಬೆಲೆ ಕುಸಿತ ಕಾಣಲು ಪ್ರಾರಂಭವಾಗಿದೆ.

ಜಿಲ್ಲೆಯ ರೈತರು ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಲ್ಲಿ ತರಕಾರಿ ಬೆಳೆಗಳನ್ನು ಬೆಳೆದಿದ್ದರು. ಆದರೆ, ಇದೀಗ ತರಕಾರಿಯ ಬೇಡಿಕೆ ಕುಸಿದಿರುವ ಹಿನ್ನೆಲೆಯಲ್ಲಿ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಲೆ ಕುಸಿತ : ಜಿಲ್ಲೆಯಲ್ಲಿ ಮಾ.10ರ ನಂತರ ವಾಣಿಜ್ಯ ಬಳಕೆಯ ಗ್ಯಾಸ್‌‍ ಸಿಲಿಂಡರ್‌ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಯಿತು. ನಂತರ, ರಾಜ್ಯ ಸರ್ಕಾರ ಶೇ.20ರಷ್ಟು ಕಮರ್ಷಿಯಲ್‌ ಸಿಲಿಂಡರ್‌ ಪೂರೈಸಲು ಅಗತ್ಯ ಕ್ರಮಕೈಗೊಂಡರೂ ಕೆಲವು ಹೋಟೆಲ್‌ಗಳಿಗೆ ಸಾಕಾಗದೆ ತಿಂಡಿ ಪದಾರ್ಥಗಳ ತಯಾರಿಯನ್ನು ಕಡಿಮೆ ಮಾಡಿವೆ.

ಮಾ.10 ರವರೆಗೆ ಜಿಲ್ಲೆಯಲ್ಲಿ ತರಕಾರಿಗೆ ಉತ್ತಮ ಬೆಲೆ ಇತ್ತು. ನಂತರ ಬೆಲೆ ಕುಸಿಯಲು ಪ್ರಾರಂಭವಾಗಿದ್ದು, ಮಾರಾಟಗಾರರು ಹಾಗೂ ಬೆಳೆಗಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

RELATED ARTICLES

Latest News