Wednesday, April 29, 2026
Homeರಾಜ್ಯಮಕ್ಕಳ ಮೊಬೈಲ್‌ ಬಳಕೆ ನಿಷೇಧಕ್ಕೆ ಮಾರ್ಗಸೂಚಿ

ಮಕ್ಕಳ ಮೊಬೈಲ್‌ ಬಳಕೆ ನಿಷೇಧಕ್ಕೆ ಮಾರ್ಗಸೂಚಿ

Guidelines for banning children's mobile phone use

ಬೆಂಗಳೂರು,ಮಾ.23- ಶಾಲಾಕಾಲೇಜುಗಳಲ್ಲಿ 16 ವರ್ಷದೊಳಗಿನ ಮಕ್ಕಳು ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸುವ ಕುರಿತು ಮುಂದಿನ ಅಧಿವೇಶನದಲ್ಲಿ ವಿಶೇಷ ಮಾರ್ಗಸೂಚಿಗಳನ್ನು ರಚಿಸಿ ಸದನದಲ್ಲಿ ಮಂಡನೆ ಮಾಡಲಿದ್ದೇವೆ ಎಂದು ಶಾಲಾ ಸಾಕ್ಷರತಾ, ಪ್ರಾಥಮಿಕ ಶಿಕ್ಷಣ ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.

ಸದಸ್ಯರಾದ ಪ್ರತಾಪ್‌ ಸಿಂಹ ನಾಯಕ್‌, ಜವರಾಯಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಜೆಟ್‌ನಲ್ಲಿ 16 ವರ್ಷದೊಳಗಿನ ಮಕ್ಕಳು ಶಾಲಾ ಮತ್ತು ಕಾಲೇಜುಗಳಲ್ಲಿ ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣ ಬಳಕೆ ಮಾಡುವುದನ್ನು ನಿಷೇಧ ಮಾಡುವುದಾಗಿ ಘೋಷಿಸಿದ್ದಾರೆ. ಇಡೀ ರಾಷ್ಟ್ರದಲ್ಲೇ ಇಂಥ ದಿಟ್ಟ ಕ್ರಮ ತೆಗೆದುಕೊಂಡಿರುವ ಮೊದಲ ರಾಜ್ಯ ಕರ್ನಾಟಕ ಎಂದು ಪ್ರಶಂಸಿಸಿದರು.

ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣ ಬಳಕೆ ಮಾಡಬಾರದೆಂಬ ನಿಯಮವಿದೆ. ಇದರಿಂದ ಅನುಕೂಲವೂ ಇದೆ, ಅನಾನುಕೂಲವೂ ಇದೆ. ನಾವು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಇವುಗಳು ಅವಲಂಬಿತವಾಗಿದೆ ಎಂದು ಹೇಳಿದರು.

ಮೊಬೈಲ್‌ ಬಳಕೆಯಿಂದ ಒಳ್ಳೆಯದನ್ನು ಕಲಿತರೆ ಸಮಸ್ಯೆ ಇಲ್ಲ. ಆದರೆ ಬಹುತೇಕ ಮಕ್ಕಳು ಬೇಡವಾದ ವಿಷಯಗಳನ್ನು ಕಲಿಯುತ್ತಾರೆ. ಇದು ಅವರ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಬಹುತೇಕರು ನಿಷೇಧ ಮಾಡಬೇಕೆಂದು ಹೇಳುತ್ತಿರುವುದು ಸರಿಯಾಗಿಯೇ ಇದೆ ಎಂದರು.

ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣ ಬಳಸುವುದನ್ನು ಯಾವ ರೀತಿ ನಿರ್ಬಂಧ ಹಾಕಬೇಕು ಎಂಬುದರ ಬಗ್ಗೆ ಇಲಾಖೆ ಅಧಿಕಾರಿಗಳು, ಪೋಷಕರು, ಶಿಕ್ಷಣ ತಜ್ಞರು, ಸಂಘಸಂಸ್ಥೆಗಳು ಸೇರಿದಂತೆ ಸಮಾಜದ ವಿವಿಧ ಗಣ್ಯರಿಂದ ಅಭಿಪ್ರಾಯಗಳನ್ನು ಸಂಗ್ರಹಿಸುತ್ತದೆ. ಅಂತಿಮವಾಗಿ ಎಲ್ಲರೊಂದಿಗೆ ಚರ್ಚಿಸಿದ ಬಳಿಕ ಮಾರ್ಗಸೂಚಿಗಳನ್ನು ಗುರುತಿಸಲಿದ್ದೇವೆ ಎಂದು ವಿವರಿಸಿದರು.

ಹಲವು ರಾಷ್ಟ್ರಗಳಲ್ಲಿ ಇದನ್ನು ನಿಷೇಧ ಮಾಡಿದ್ದಾರೆ. ವಿಶ್ವಸಂಸ್ಥೆಯ ವಿಶ್ವ ಮಕ್ಕಳ ಸಂಘಟನೆಯೂ ಕೂಡ ಇದರ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸದ್ಯ ಶಾಲಾಕಾಲೇಜುಗಳಲ್ಲಿ ಮೊಬೈಲ್‌ ಬಳಸಬಾರದೆಂಬ ನಿಯಮವಿದೆ. ಆದರೆ ಹೊರಗೆ ಬಂದ ನಂತರ ಬಳಸುತ್ತಾರೆ. ಇದನ್ನು ಯಾವ ರೀತಿ ತಡೆ ಹಿಡಿಯಬೇಕೆಂಬುದರ ಬಗ್ಗೆ ಸೂಕ್ತ ನಿಯಮಗಳನ್ನು ರೂಪಿಸಲಾಗುವುದು ಎಂದರು.

ಕಳೆದ ವರ್ಷವೇ ನಾವು ಮಕ್ಕಳಿಗೆ ನೈತಿಕ ಶಿಕ್ಷಣದ ಬೋಧನೆ ಮಾಡುವ ಬಗ್ಗೆ ಶಿಕ್ಷಕರಿಗೆ ಸೂಚನೆ ನೀಡಿದ್ದೆವು. ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣ ಬಳಕೆ ಮಾಡುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡುವಂತೆ ಸಲಹೆ ಮಾಡಲಾಗಿತ್ತು. ಮುಂಬರುವ ಶೈಕ್ಷಣಿಕ ವರ್ಷದಿಂದ ಇದನ್ನು ಇನಷ್ಟು ಪರಿಣಾಮಕಾರಿಯಾಗಿ ಬೋಧನೆ ಮಾಡಲು ಸೂಚಿಸುವುದಾಗಿ ತಿಳಿಸಿದರು.

ಕರ್ನಾಟಕ ಸರ್ಕಾರ ತರುವ ಮಾರ್ಗಸೂಚಿಗಳು ಎಲ್ಲಾ ರಾಜ್ಯಗಳಿಗೂ ಮಾದರಿಯಾಗಬೇಕು. ಸ್ವಲ್ಪ ವಿಳಂಬವಾದರೂ ಉತ್ತಮ ನಿಯಮಗಳನ್ನು ರೂಪಿಸುತ್ತೇವೆ. ಸದನದಲ್ಲಿ ಕಾನೂನು ಮಂಡನೆ ಮಾಡುವಾಗ ಸದಸ್ಯರು ತಮ ಸಲಹೆಗಳನ್ನು ನೀಡಿದರೆ ಸರ್ಕಾರ ಮುಕ್ತವಾಗಿ ಸ್ವೀಕಾರ ಮಾಡಲಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಸದಸ್ಯ ಪ್ರತಾಪ್‌ ಸಿಂಹ ನಾಯಕ್‌, ಇತ್ತೀಚೆಗೆ ಮೊಬೈಲ್‌ ಬಳಕೆ ಮಕ್ಕಳಿಗೆ ಒಂದು ರೀತಿ ಚಟವಾಗಿ ಪರಿಣಮಿಸಿದೆ. ಇದು ಯಾವ ಹಂತಕ್ಕೆ ಬಂದಿದೆ ಎಂದರೆ ಮೊಬೈಲ್‌ ಕೊಡದಿದ್ದರೆ ಮಕ್ಕಳು ಆತಹತ್ಯೆ ಮಾಡಿಕೊಳ್ಳುವ ಹಂತಕ್ಕೆ ಬಂದಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಜವರಾಯಿ ಗೌಡ ಕೂಡ ಸರ್ಕಾರ ಆದಷ್ಟು ಶೀಘ್ರವಾಗಿ ಮಕ್ಕಳು ಮೊಬೈಲ್‌ ಮತ್ತು ಸಾಮಾಜಿಕ ಜಾಲತಾಣ ಬಳಸುವುದನ್ನು ನಿಷೇಧಿಸಿ ಎಂದು ಆಗ್ರಹಿಸಿದರು.

RELATED ARTICLES

Latest News