Homeರಾಜ್ಯನಾಳೆಯಿಂದ ಕರಗ ಉತ್ಸವಕ್ಕೆ ಚಾಲನೆ

ನಾಳೆಯಿಂದ ಕರಗ ಉತ್ಸವಕ್ಕೆ ಚಾಲನೆ

Karaga Utsav to begin tomorrow

ಬೆಂಗಳೂರು, ಮಾ.23- ಐತಿಹಾಸಿಕ ಕರಗ ಉತ್ಸವಕ್ಕೆ ನಾಳೆ ಚಾಲನೆ ಸಿಗಲಿದೆ. ನಗರದ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ಸಂಕೇತವಾಗಿರುವ ಬೆಂಗಳೂರು ಕರಗ ಶಕ್ತ್ಯೋತ್ಸವ ಈ ಬಾರಿ ಭಕ್ತರ ಭಕ್ತಿ-ಭಾವನೆಗೆ ಸಾಕ್ಷಿಯಾಗಲು ಸಜ್ಜಾಗಿದೆ.

ನಾಳೆ ಸಂಜೆ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಅಧಿಕೃತ ಚಾಲನೆ ದೊರೆಯಲಿದೆ.ಮಾರ್ಚ್‌ 24 ರಿಂದ ಆರಂಭವಾಗುವ ಈ ಮಹೋತ್ಸವವು ಒಟ್ಟು 11 ದಿನಗಳ ಕಾಲ ನಡೆಯಲಿದ್ದು, ಏಪ್ರಿಲ್‌ 1ರಂದು ಮಧ್ಯರಾತ್ರಿ ನಡೆಯುವ ಕರಗ ಉತ್ಸವವೇ ಪ್ರಮುಖ ಆಕರ್ಷಣೆಯಾಗಲಿದೆ.

ಆ ದಿನ ದ್ರೌಪದಿ ದೇವಿಯ ಹೂವಿನ ಕರಗವು ನಾಡಪ್ರಭು ಕೆಂಪೇಗೌಡ ನಿರ್ಮಿಸಿದ ಪೇಟೆಗಳ ಮೂಲಕ ಸಂಚರಿಸಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಲಿದೆ.ಈ ಬಾರಿಯೂ ಕರಗವನ್ನು ಹೊರುವ ಗೌರವವನ್ನು ಎ. ಜ್ಞಾನೇಂದ್ರ ಸ್ವಾಮಿ ಅವರಿಗೆ ಸಿಕ್ಕಿದ್ದು, ಇದು ಅವರ 16ನೇ ಬಾರಿ ಕರಗ ಹೊರುವ ವಿಶೇಷ ಸಂದರ್ಭವಾಗಿದೆ.

ಕಳೆದ ವರ್ಷ ಅವರು 15ನೇ ಬಾರಿ ಕರಗ ಹೊತ್ತಿದ್ದರು.ಮಾರ್ಚ್‌ 30ರಂದು ಹಸಿ ಕರಗ ನಡೆಯಲಿದ್ದು, ಇದಕ್ಕೂ ಭಕ್ತರಿಂದ ಅಪಾರ ಸ್ಪಂದನೆ ನಿರೀಕ್ಷಿಸಲಾಗಿದೆ. ತಿಗಳರಪೇಟೆಯ ಶ್ರೀ ಧರ್ಮರಾಯ ಸ್ವಾಮಿ ದೇವಾಲಯ ಈ ಉತ್ಸವದ ಕೇಂದ್ರಬಿಂದುವಾಗಿದ್ದು, ಸಕಲ ಸಿದ್ಧತೆಗಳು ಜೋರಾಗಿದೆ.

ಈ ಬಾರಿ ಮೈಸೂರು ದಸರಾ ಮಾದರಿಯಲ್ಲಿ ಭವ್ಯ ವಿದ್ಯುತ್‌ ದೀಪಾಲಂಕಾರ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಹಡ್ಸನ್‌ ಸರ್ಕಲ್‌‍, ಮೈಸೂರು ಬ್ಯಾಂಕ್‌ ಸರ್ಕಲ್‌ ಸೇರಿದಂತೆ ಪೇಟೆಗಳಾದ್ಯಂತ ಬೆಳಕಿನ ಕಂಗೊಳಿರಲಿದೆ. ಕರಗ ಹಾದಿಯುದ್ದಕ್ಕೂ ಸ್ವಚ್ಛತೆ, ಅಗಲೀಕರಣ, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಕಟ್ಟು ನಿಟ್ಟಿನ ಪೊಲೀಸ್‌‍ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗುತ್ತಿದೆ.

ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಎಲ್ಲಾ ಧರ್ಮದವರಿಗೂ ವ್ಯಾಪಾರ ಅವಕಾಶ ಕಲ್ಪಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಭಕ್ತಿ, ಪರಂಪರೆ ಮತ್ತು ವೈಭವದ ಸಂಗಮವಾಗಿರುವ ಬೆಂಗಳೂರು ಕರಗ ಶಕ್ತ್ಯೋತ್ಸವವನ್ನು ಕಣ್ತುಂಬಿಕೊಳ್ಳಲು ನಗರದ ಜನ ಕಾತರದಿಂದ ಕಾಯುತ್ತಿದ್ದಾರೆ.

RELATED ARTICLES
spot_img

Latest News