ಬೆಂಗಳೂರು, ಮಾ.23- ಮಹಿಳೆಯರ ಮೇಲೆ ಮೂಡುಬಿದರೆ ಪೊಲೀಸ್ ಇನ್‌ಸ್ಪೆಕ್ಟರ್ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡುಬಿದರೆ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ ಚೌಧರಿ ಅವರು ಸಂತ್ರಸ್ತೆಯ ಭೇಟಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಡಿಜಿಪಿ ಅವರಿಗೆ ಸೂಚಿಸಿದ್ದೇನೆ ಎಂದರು.
ಮೂಡುಬಿದರೆ ಪೊಲೀಸ್ ಇನ್‌ಸ್ಪೆಕ್ಟರ್ ಮೇಲೆ ಆರೋಪ ಬಂದ ಬಳಿಕ ಅಮಾನತು ಗೊಳಿಸಿ, ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳಿಗೂ ವರದಿ ಕೊಡುತ್ತಾರೆ. ಇನ್ನೂ ಅನೇಕ ವಿಚಾರಗಳನ್ನು ಕೇಳಿದ ಮೇಲೆ ಹೆಚ್ಚಿನ ತನಿಖೆ ಮಾಡಬೇಕೆಂದು ಸಿಐಡಿ ತನಿಖೆಗೆ ವಹಿಸಲಾಗಿದೆ. ತನಿಖೆ ಬಳಿಕ ಸತ್ಯಾಂಶ ಹೊರಬರುತ್ತದೆ. ಇನ್ನು ಎಷ್ಟು ಜನ ಸಂತ್ರಸ್ತರಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಲಿದೆ. ಇದಕ್ಕಾಗಿಯೇ ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಹೇಳಿದರು.
ಪ್ರಣವಾನಂದ ಸ್ವಾಮೀಜಿ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಐಸಿಸಿ ವ್ಯಾಂಡೇಟ್ ಬೇರೆ ಇರುತ್ತದೆ. ಜನಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಮಾಡುತ್ತಾರೆ. ಭೇಟಿ ಮಾಡಿ, ಅನಿಸಿಕೆಗಳನ್ನು ಕೇಳಿಕೊಂಡು ತೀರ್ಮಾನ ಮಾಡುವುದನ್ನು ನಾನು ಎಲ್ಲೂ ನೋಡಿಲ್ಲ. ಎಐಸಿಸಿ ಅವರ್ದೆ ಆದ ವರದಿ ತೆಗೆದುಕೊಂಡು ತೀರ್ಮಾನಗಳನ್ನು ಮಾಡುತ್ತಾರೆ. ಸ್ವಾಮೀಜಿಗಳ ಹೇಳಿಕೆಗಳು ಸಾರ್ವಜನಿಕವಾಗಿ ಬರುವ ಅನಿಸಿಕೆಗಳು ಎಂದರು.
