ಬೆಂಗಳೂರು, ಮಾ.24- ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇ-ಖಾತಾ ಆಂದೋಲನದಲ್ಲಿ ಲಂಚದ ವಹಿವಾಟು ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸೂಕ್ತ ದಾಖಲೆಗಳನ್ನು ನೀಡುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪ್ರತಿ ಸವಾಲು ಹಾಕಿದ್ದಾರೆ.
ಬೆಂಗಳೂರು ಅಭಿವೃದ್ಧಿ ಕುರಿತಂತೆ ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿದ ಅವರು, ಇ-ಖಾತಾ ಆಂದೋಲನದಲ್ಲಿ ಯಾರಾದರೂ ಲಂಚ ಪಡೆದಿರುವುದನ್ನು ತೋರಿಸಿದರೆ, ತಕ್ಷಣವೇ ಅಮಾನತುಗೊಳಿಸುವುದಾಗಿ ಇದೇ ಅಧಿವೇಶನದಲ್ಲಿ ಡಿ.ಕೆ.ಶಿವಕುಮಾರ್ ಅವರು ನನಗೆ ಸವಾಲು ಹಾಕಿದ್ದರು. ನಾನು ಕೇವಲ ಬಾಯಿ ಮಾತಿನ ಆರೋಪ ಮಾಡುತ್ತಿಲ್ಲ. ದಾಖಲೆಗಳ ಸಹಿತ ಸಾಬೀತು ಮಾಡುತ್ತಿದ್ದೇನೆ ಎಂದು ಹೇಳಿದರು.
ಹೆಚ್‌ಬಿಆರ್ ಲೇಔಟ್ ಅನ್ನು ಬಿಡಿಎ ನಿರ್ಮಾಣ ಮಾಡಿದೆ. ಅಲ್ಲಿ ವಿದೇಶದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ನಿವೇಶನ ಖರೀದಿ ಮಾಡಿದ್ದರು. ಎಲ್ಲಾ ಶುಲ್ಕಗಳನ್ನು ಪಾವತಿಸಿ ಕ್ರಮಬದ್ಧವಾದ ದಾಖಲೆಗಳನ್ನು ಇಟ್ಟುಕೊಂಡಿದ್ದಾರೆ. ಆದರೆ ಖಾಲಿನಿವೇಶನ ಎಂದು ಹೇಳಿ ಬಿ-ಖಾತ ಆಗಿದೆ. ಇ-ಖಾತಾ ಮಾಡಿಕೊಳ್ಳಲು ಬರುವುದಿಲ್ಲ ಎಂದು ಹೇಳಿ ಬಿಬಿಎಂಪಿಯ ಆರ್‌ಒ ರಮೇಶ್ ಬಾಬು ಎಂಬವರು 30 ಸಾವಿರ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದಾರೆ.
ನಂತರ ಚರ್ಚೆ, ಒಪ್ಪಂದವಾದ ಮೇಲೆ ಫೋನ್ ಪೇ ಮೂಲಕ ಹದಿನೈದು ಸಾವಿರ ರೂಪಾಯಿ ಪಾವತಿಸಿದ್ದಾರೆ. ಲಂಚ ಸ್ವೀಕರಿಸಿರುವ ದಾಖಲೆ ತಮ ಬಳಿ ಇದೆ ಎಂದು ಫೋನ್ ಪೇ ವಹಿವಾಟಿನ ಸ್ಕ್ರೀನ್ ಶಾಟ್ ಪ್ರತಿಯನ್ನು ಸದನದಲ್ಲಿ ಪ್ರದರ್ಶಿಸಿದರು.
ಲಂಚ ಪಡೆದು ಆರ್‌ಒ , ಇ-ಖಾತಾವನ್ನು ಅನುಮೋದಿಸಿದ್ದಾರೆ. ಆದರೆ ಉಪ ಆಯುಕ್ತರು ಮೂರು ಬಾರಿ ಇ-ಖಾತಾ ಅರ್ಜಿಯನ್ನು ತಿರಸ್ಕರಿಸಿದ್ದಾರೆ. ಬಳಿಕ ನಿವೇಶನದ ಮಾಲೀಕರು ತಾವು ನೀಡಿದ ಲಂಚವನ್ನು ವಾಪಸ್ ನೀಡುವಂತೆ ಪಟ್ಟು ಹಿಡಿದಾಗ 20 ಸಾವಿರ ರೂ.ಗಳನ್ನು ಮಾತ್ರ ವಾಪಸ್ ಕೊಟ್ಟು ಉಳಿದ ಹತ್ತು ಸಾವಿರ ರೂ.ಗಳನ್ನು ಕೆಳಹಂತದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಖರ್ಚು ಮಾಡಿರುವುದಾಗಿ ಉತ್ತರಿಸಿದ್ದಾರೆ.
ಈಗ ಡಿ.ಕೆ.ಶಿವಕುಮಾರ್ ಅವರು ಏನು ಹೇಳುತ್ತಾರೆ? ಲಂಚ ಇರುವುದನ್ನು ನಾನು ದಾಖಲೆ ಸಮೇತ ತೋರಿಸುತ್ತೇನೆ. ಕೆಳಹಂತದಲ್ಲಿ ನೀರು ಘಂಟಿಗಳನ್ನು ಅಮಾನತು ಮಾಡಿದರೆ ನಾನು ಒಪ್ಪುವುದಿಲ್ಲ. ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ನನಗೆ ಸವಾಲು ಹಾಕಿದ ಡಿ.ಕೆ. ಶಿವಕುಮಾರ್ ಅವರಿಗೆ ದಾಖಲೆ ಸಮೇತ ಲಂಚದ ವ್ಯವಹಾರಗಳನ್ನು ತೋರಿಸಿದ್ದೇನೆ.
ಇದು ಒಂದು ಪ್ರಕರಣ ಮಾತ್ರವಲ್ಲ ಬೇರೆ ಬೇರೆ ಕಡೆ, ಬೆಂಗಳೂರು ಹಾಗೂ ರಾಜ್ಯಾದ್ಯಂತ ಲಂಚ ವಸೂಲಿ ಮಾಡುತ್ತಿರುವ ದಾಖಲೆಗಳು ತಮ ಬಳಿ ಇವೆ ಎಂದು ಕಾಗದಪತ್ರಗಳನ್ನು ಪ್ರದರ್ಶನ ಮಾಡಿದರು. ಎಲ್ಲವನ್ನೂ ತಾಳೆಯಿಂದ ಕೇಳಿಸಿಕೊಂಡ ಡಿ.ಕೆ.ಶಿವಕುಮಾರ್ ಸರ್ಕಾರದ ಪರವಾಗಿ ಉತ್ತರ ನೀಡುವಾಗ ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.
ಆಡಳಿತ ಪಕ್ಷದ ಶಾಸಕ ಬಸವರಾಜ ರಾಯರೆಡ್ಡಿ ಖಾತೆ ಬದಲಾವಣೆಯ ವೇಳೆ ಲಂಚ ಪಡೆಯುವುದು ಹಳೆಯ ವಿಷಯ. ಹೊಸದೇನೂ ಇಲ್ಲ ಎಂದು ತಿರುಗೇಟು ನೀಡಿದರು. ಈ ರೀತಿ ಮಾತನಾಡಿದರೆ ನಾನು ಇನ್ನೇನೆಂದು ಹೇಳಲು ಸಾಧ್ಯ? ಕುಳಿತುಕೊಂಡು ಬಿಡುತ್ತೇನೆ ಎಂದು ಅಶೋಕ್ ಅಸಹಾಯಕತೆ ವ್ಯಕ್ತಪಡಿಸಿದರು. ಫೋನ್ ಪೇ ಮೂಲಕ ರಾಜಾರೋಷವಾಗಿ ಲಂಚ ಪಡೆಯುತ್ತಿರುವುದು ವಿಧಾನಸಭೆಯಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಯಿತು.
