Sunday, April 26, 2026
Homeಅಂತಾರಾಷ್ಟ್ರೀಯಟ್ರಂಪ್ ಆಯೋಜಿಸಿದ್ದ ಔತಣಕೂಟದಲ್ಲಿ ಗುಂಡಿನ ಸದ್ದು, ಭಾರೀ ಆತಂಕ ಸೃಷ್ಟಿ

ಟ್ರಂಪ್ ಆಯೋಜಿಸಿದ್ದ ಔತಣಕೂಟದಲ್ಲಿ ಗುಂಡಿನ ಸದ್ದು, ಭಾರೀ ಆತಂಕ ಸೃಷ್ಟಿ

Trump unharmed after security incident at White House Correspondents' Dinner

ವಾಷಿಂಗ್ಟನ್, ಏ.26: ಅಮೆರಿಕದ ರಾಜಧಾನಿಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ರಕರ್ತರಿಗಾಗಿ ಆಯೋಜಿಸಿದ್ದ ಔತಣಕೂಟದ ವೇಳೆ ಶಸ್ತ್ರ ಸಜ್ಜಿತ ವ್ಯಕ್ತಿಯೊಬ್ಬ ಒಳ ನುಗ್ಗಿ ದಾಳಿ ಎಸಗುವ ಪ್ರಯತ್ನ ನಡೆಸಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಘಟನೆಯಲ್ಲಿ ಅಧ್ಯಕ್ಷರೂ ಸೇರಿದಂತೆ ಯಾರಿಗೂ ಹಾನಿಯಾಗಿಲ್ಲ.

ಬಂದೂಕು ಮತ್ತು ಚಾಕುಗಳನ್ನು ಹೊಂದಿದ್ದ ವ್ಯಕ್ತಿಯೊಬ್ಬ ವಾಷಿಂಗ್ಟನ್ ಹಿಲ್ಟನ್ ಹೋಟೆಲ್ ಲಾಬಿಯಿಂದ ಔತಣಕೂಟ ನಡೆಯುತ್ತಿದ್ದ ಸಭಾಂಗಣದತ್ತ ನುಗ್ಗಲು ಧಾವಿಸಿದ್ದು, ತಕ್ಷಣವೇ ಸೀಕ್ರೆಟ್ ಸರ್ವಿಸ್ ಅಧಿಕಾರಿಗಳು ಅವನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಆತ ಗುಂಡು ಹಾರಿಸಿದ್ದು, ಅದು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿದ್ದ ಅಧಿಕಾರಿಯೊಬ್ಬರಿಗೆ ಬಡಿದಿದೆ. ಆದರೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

ಗುಂಡಿನ ಸದ್ದು ಕೇಳಿದ ತಕ್ಷಣ ರಕ್ಷಣಾ ಸಿಬ್ಬಂದಿಗಳು ಟ್ರಂಪ್ ಅವರ ಮುಂದೆ ನಿಂತು ರಕ್ಷಾ ಕವಚ ನಿರ್ಮಿಸಿದರು. ಟ್ರಂಪ್ ವೇದಿಕೆಯಲ್ಲಿ ತಾವು ಕುಳಿತಿದ್ದ ಮೇಜಿನ ಹಿಂದೆ ಅಡಗಿ ಪ್ರಾಣ ರಕ್ಷಿಸಿಕೊಳ್ಳುವ ಪ್ರಯತ್ನ ನಡೆಸಿದರು. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಮೊದಲು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಅವರನ್ನೂ ಸಹ ಭದ್ರತಾ ಸಿಬ್ಬಂದಿಗಳು ಸುರಕ್ಷಿತವಾಗಿ ಹೊರ ಕರೆತಂದರು.

ಶಂಕಿತ ದಾಳಿಕೋರನನ್ನು ಕ್ಯಾಲಿಫೋರ್ನಿಯಾದ ಟೋರೆನ್ಸ್ ಮೂಲದ 31 ವರ್ಷದ ಕೋಲ್ ಥಾಮಸ್ ಅಲೆನ್ ಎಂದು ಗುರುತಿಸಲಾಗಿದೆ. ಅಮೆರಿಕ ಫೆಡರಲ್ ತನಿಖಾ ಸಂಸ್ಥೆಗಳು ಆರೋಪಿಯ ಮನೆ ಶೋಧ ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಿವೆ.

ಪೊಲೀಸರ ಪ್ರಕಾರ, ಆರೋಪಿ ಏಕಾಂಗಿಯಾಗಿ ದಾಳಿ ನಡೆಸಿದ್ದಾನೆ. ಘಟನಾ ಸ್ಥಳದಿಂದ ಎರಡು ಬಂದೂಕುಗಳು ಹಾಗೂ ಹಲವು ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಸೀಕ್ರೆಟ್ ಸರ್ವಿಸ್ ಯೂನಿಫಾರ್ಮ್ಡ್ ಡಿವಿಷನ್ ಅಧಿಕಾರಿಯೊಬ್ಬರಿಗೆ ಗಾಯಗಳಾಗಿದ್ದು, ಅವರಿಗೆ ತಕ್ಷಣ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗಳು ಪ್ರಾಣಾಪಾಯದಿಂದ ಪಾರಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ಮೆಟ್ರೋಪಾಲಿಟನ್ ಪೊಲೀಸ್ ಡಿಪಾರ್ಟ್‌ಮೆಂಟ್ ತನಿಖಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ತನಿಖೆಯಲ್ಲಿ ಹಲವು ಕೇಂದ್ರ ಸಂಸ್ಥೆಗಳು ಸಹಕರಿಸುತ್ತಿವೆ. ಇವುಗಳಲ್ಲಿ ಎಫ್‌ಬಿಐ, ಯುಎಸ್ ಅಟಾನಿ ಕಚೇರಿ, ಡಿಸಿ ಮತ್ತು ಎಟಿಎಫ್ ಜಂಟಿಯಾಗಿ ಹೆಚ್ಚಿನ ತನಿಖೆ ಮುಂದುವರಿಸಿವೆ. ದಾಳಿಯ ಉದ್ದೇಶ ಮತ್ತು ಹಿನ್ನೆಲೆಯನ್ನು ತಿಳಿಯಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿಸಲಾಗಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್ ಅವರು, ಆರೋಪಿ ಮಾನಸಿಕ ಅಸ್ವಸ್ಥ ವ್ಯಕ್ತಿ ಎಂದು ಹೇಳಿದ್ದಾರೆ. ನಾವು ಯಾರನ್ನೂ ಸಮಾಜವನ್ನು ಕಬಳಿಸಲು ಬಿಡುವುದಿಲ್ಲ. ಈತನೊಬ್ಬ ಒಂಟಿ ತೋಳ (ಲೋನ್ ವುಲ್ಫ್) ಇರಬಹುದು. ನೀವು ಪ್ರಭಾವಶಾಲಿಯಾಗಿದ್ದರೆ, ಇಂತಹ ದಾಳಿಗಳು ನಡೆಯುತ್ತವೆ. ಇರಾನ್‌ನೊಂದಿಗೆ ಯುದ್ಧ ಪರಿಸ್ಥಿತಿಯಲ್ಲಿರುವ ಸಂದರ್ಭದಲ್ಲಿ ದೇಶದ ಭದ್ರತೆ ಅತ್ಯಂತ ಮುಖ್ಯವಾಗಿದೆ ಎಂದು ಒತ್ತಿ ಹೇಳಿರುವ ಟ್ರಂಪ್, ಈ ಘಟನೆ ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದ್ದು, ನಂತರದ ದಿನಾಂಕಕ್ಕೆ ಮುಂದೂಡಲಾಗಿದೆ.

ನೂರಾರು ಪತ್ರಕರ್ತರು, ಗಣ್ಯರು ಮತ್ತು ಸರ್ಕಾರದ ಉನ್ನತ ನಾಯಕರು ಉಪಸ್ಥಿತರಿದ್ದ ಸಭಾಂಗಣವನ್ನು ತಕ್ಷಣವೇ ಖಾಲಿ ಮಾಡಿಸಲಾಯಿತು. ಘಟನೆಯ ವೇಳೆ ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್, ಸ್ಥಳದಲ್ಲಿ ಪತ್ತೆಯಾದ ಶಸ್ತ್ರಾಸ್ತ್ರಗಳು ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಸಾಕ್ಷಿಗಳ ವಿಚಾರಣೆ ಮುಂದುವರಿದಿದೆ.

ಘಟನೆಯ ನಂತರ ಹೋಟೆಲ್ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದ್ದು, ನ್ಯಾಷನಲ್ ಗಾರ್ಡ್ ಪಡೆಗಳನ್ನು ನಿಯೋಜಿಸಲಾಗಿದೆ. ಬಳಿಕ ವಾಷಿಂಗ್ಟನ್ ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಸಾರ್ವಜನಿಕರಿಗೆ ಯಾವುದೇ ತಕ್ಷಣದ ಅಪಾಯವಿಲ್ಲ ಎಂದು ಮೇಯರ್ ಮುರಿಯಲ್ ಬೌಸರ್ ತಿಳಿಸಿದ್ದಾರೆ.

2024ರಿಂದ ಟ್ರಂಪ್ ಅವರ ಮೇಲೆ ನಡೆದ ಮೂರನೇ ದಾಳಿ ಪ್ರಯತ್ನ ಇದಾಗಿದ್ದು, ಪೆನ್ಸಿಲ್ವೇನಿಯಾದಲ್ಲಿ ನಡೆದ ಹತ್ಯೆ ಯತ್ನದಲ್ಲಿ ಅವರು ಗಾಯಗೊಂಡಿದ್ದರು. ಈ ವಾರ್ಷಿಕ ಭೋಜನ ಕೂಟವು ಸಾಮಾನ್ಯವಾಗಿ ಮಾಧ್ಯಮ ಮತ್ತು ಆಡಳಿತದ ನಡುವಿನ ಸಂಬಂಧವನ್ನು ಹಿರಿದಾಗಿಸುವ ಕಾರ್ಯಕ್ರಮವಾಗಿದ್ದು, ಈ ಬಾರಿ ಘಟನೆ ಹಿನ್ನೆಲೆಯಲ್ಲಿ ಅಸ್ತವ್ಯಸ್ತಗೊಂಡಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು, ಪತ್ರಕರ್ತರು ಹಾಗೂ ರಾಜಕೀಯ ನಾಯಕರು ಈ ಘಟನೆಗೆ ಆತಂಕ ವ್ಯಕ್ತಪಡಿಸಿದ್ದು, ಅಮೆರಿಕದಲ್ಲಿ ಹಿಂಸಾಚಾರ ಹೆಚ್ಚುತ್ತಿರುವುದನ್ನು ಖಂಡಿಸಿದ್ದಾರೆ.

RELATED ARTICLES

Latest News