Sunday, April 26, 2026
Homeರಾಜಕೀಯನನಗೆ ನಂಬಿಕೆಯಿದೆ, ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ : ಡಿಕೆಶಿ

ನನಗೆ ನಂಬಿಕೆಯಿದೆ, ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ : ಡಿಕೆಶಿ

I have faith, the high command will take the right decision at the right time: DK Shivakumar

ಬೆಂಗಳೂರು, ಏ.26: ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸಮಸ್ಯೆಯಿಲ್ಲ. ಪಕ್ಷದ ಮೇಲೆ ನನಗೆ ನಂಬಿಕೆಯಿದೆ. ನಾಯಕತ್ವ ಸೇರಿದಂತೆ ಕೆಲ ವಿಚಾರಗಳಲ್ಲಿ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಮಾಧ್ಯಮಗಳ ಮುಂದೆ ರಾಜಕೀಯ ಕುರಿತು ಚರ್ಚೆ ಮಾಡುವುದಿಲ್ಲ. ಸಮಯ ಬಂದಾಗ ಎಲ್ಲವೂ ಗೊತ್ತಾಗಲಿದೆ. ನಮ್ಮಲ್ಲಿ ಯಾವುದೇ ಒಳ ರಾಜಕೀಯವಾಗಲಿ ಅಥವಾ ಸಮಸ್ಯೆಗಳಾಗಲಿ ಇಲ್ಲ. ಏನೇನು ತೀರ್ಮಾನ ಆಗಿದೆಯೋ, ಆಗಬೇಕೋ ಅದನ್ನು ಸಮಯ ಬಂದಾಗ ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.

ಕಾಂಗ್ರೆಸ್‌ನಲ್ಲಿ ಸಮಸ್ಯೆಗಳಿರುವುದು ನಿಜ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಮಯ ಬಂದಾಗ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ನಾಯಕತ್ವದ ವಿಚಾರವಾಗಿ ತಾವು ಯಾವತ್ತೂ ಚರ್ಚೆ ಮಾಡಿಲ್ಲ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಾವು ಈಗಾಗಲೇ ಹೇಳಿದ್ದೇವೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದರು.

ಫ್ಲೆಕ್ಸ್ ಹಾಕಿದರೆ ಭಾರಿ ದಂಡ:
ಮೇ 15ರಂದು ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಯಾರೂ ಜಾಹೀರಾತು ನೀಡುವುದು, ಫ್ಲೆಕ್ಸ್ ಹಾಕುವುದು ಮಾಡಬಾರದು. ರಸ್ತೆಯಲ್ಲಿ ಫ್ಲೆಕ್ಸ್ ಹಾಕಿ ತೊಂದರೆ ನೀಡಿದರೆ ಪ್ರಕರಣ ದಾಖಲಿಸಿ ಭಾರಿ ಪ್ರಮಾಣದ ದಂಡ ವಿಧಿಸುವಂತೆ ಈಗಾಗಲೇ ಪಾಲಿಕೆಯ ಆಯುಕ್ತರುಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಭಿನಂದನೋತ್ಸವ ಕುರಿತಂತೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, ಮಾಡಲಿ ಬಿಡಿ ಅವರು ಹೋರಾಟ ಮಾಡಿದ್ದಾರೆ. ರಾಜಕೀಯವಾಗಿ ಬಹುಶಃ ವಿದಾಯ ಹೇಳಲಿಕ್ಕೋ, ಶಕ್ತಿ ಪ್ರದರ್ಶನಕ್ಕೋ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಗುಡುಗು, ಸಿಡಿಲು ಎಂದೆಲ್ಲಾ ಬಿಂಬಿಸಿಕೊಳ್ಳುವ ತಯಾರಿಗಳಾಗಿವೆ ಎಂದರು.

ಬೆಂಗಳೂರು ಪಾಲಿಕೆಗಳಿಗೆ ಚುನಾವಣೆ ನಡೆಸಲು ನಾವು ಸಿದ್ಧರಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧಪಟ್ಟಂತೆ ನ್ಯಾಯಾಲಯ ನೀಡುವ ತೀರ್ಪನ್ನು ತಾವು ನಿರೀಕ್ಷಿಸುತ್ತಿರುವುದಾಗಿ ಹೇಳಿದರು.

ಕೊಟ್ಟ ಮಾತು ಈಡೇರಿಕೆ:
ಒಳ ಮೀಸಲಾತಿ ವಿಚಾರವಾಗಿ ಕೊಟ್ಟ ಮಾತಿನಂತೆ ನಮ್ಮ ಸರ್ಕಾರ ನಡೆದುಕೊಂಡಿದೆ. ಶೇ. 17ರಷ್ಟು ಮೀಸಲಾತಿ ಇದ್ದಾಗಲೂ ವರ್ಗೀಕರಣ ಮಾಡಲಾಗಿತ್ತು. ಶೇ. 15ರಷ್ಟು ಪ್ರಮಾಣದಲ್ಲೂ ಒಳ ಮೀಸಲಾತಿ ನಿಗದಿ ಪಡಿಸಲಾಗಿದೆ. 30-40 ವರ್ಷಗಳಿಂದ ನಡೆದಿದ್ದ ಹೋರಾಟಕ್ಕೆ ನ್ಯಾಯ ದೊರಕಿದೆ. ರೋಸ್ಟರ್ ಬಿಂದುವಿನ ಗೊಂದಲವನ್ನು ಬಗೆ ಹರಿಸಲಾಗಿದೆ. ಎಲ್ಲಾ ಸಮುದಾಯಗಳು ಒಟ್ಟಾಗಿ ಇರಬೇಕೆಂದು ಅವರು ಪ್ರತಿಪಾದಿಸಿದರು.

ಬೆಂಗಳೂರಿನಲ್ಲಿ ಟಿಸಿಎಸ್ ಸಂಸ್ಥೆ 18ನೇ ಮ್ಯಾರಾಥಾನ್ ಆಯೋಜಿಸಿತ್ತು. ಅದಕ್ಕೆ ಚಾಲನೆ ನೀಡಲು ತಾವು ಮುಂಜಾನೆ ದೆಹಲಿಯಿಂದ ಆಗಮಿಸಿದ್ದೇನೆ. 32 ಸಾವಿರ ಜನ ಮ್ಯಾರಾಥಾನ್‌ನಲ್ಲಿ ಭಾಗವಹಿಸಿದ್ದರು. ಅದರಲ್ಲಿ ಶೇ. 28 ರಷ್ಟು ಹೆಣ್ಣು ಮಕ್ಕಳಿದ್ದಾರೆ. 10 ಕಿ.ಮೀ. ದೂರದ ಈ ಮ್ಯಾರಾಥಾನ್‌ಗೆ ಐದಾರು ತಿಂಗಳ ಹಿಂದೆಯೇ ಟ್ರ್ಯಾಕ್ ಪರೀಕ್ಷೆಗಳು ನಡೆದಿದ್ದವು. ದೇಶ ವಿದೇಶಗಳಿಂದಲೂ ಮ್ಯಾರಾಥಾನ್ ಸ್ಪರ್ಧಿಗಳು ಭಾಗವಹಿಸಿದ್ದರು ಎಂದು ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಟೀಕೆ ಮಾಡುವುದನ್ನು ಬಿಟ್ಟು ಯಾವತ್ತಾದರೂ ಹೊಗಳಿದ್ದಾರೆಯೇ? ಅವರು ಇರುವುದೇ ಟೀಕೆ ಮಾಡಲಿಕ್ಕೆ ಎಂದು ಹೇಳಿದರು.

RELATED ARTICLES

Latest News