ಮೈಸೂರು, ಎ.26- ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಇರುವೆ ಕಚ್ಚಿ ನವಜಾತ ಶಿಶು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಸಿಯುನ ಉಸ್ತುವಾರಿ ವೈದ್ಯರು ಸೇರಿದಂತೆ ಏಳು ಮಂದಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗಿದೆ.
ರಮಾಬಾಯಿನಗರದ ಸಿದ್ಧಾರ್ಥ ಎಂಬವರ ನವಜಾತ ಶಿಶು ಮೃತಪಟ್ಟಿದ್ದು, ಇರುವೆ ಕಚ್ಚಿ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆರೋಪ ಮಾಡಿ ಪ್ರತಿಭಟನೆ ನಡೆಸಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವೈದ್ಯಕೀಯ ಅಧೀಕ್ಷಕ ಲಕ್ಷ್ಮೀಕಾಂತ್ ಅವರು, 48 ಗಂಟೆಯೊಳಗೆ ಸೂಕ್ತ ಉತ್ತರ ನೀಡುವಂತೆ ಏಳು ಮಂದಿಗೆ ನೋಟಿಸ್ ನೀಡಿದ್ದಾರೆ.
ಎನ್‌ಐಸಿಯುನ ಕರ್ತವ್ಯನಿರತ ವೈದ್ಯರು, ವಾರ್ಡ್ ಇನ್-ಚಾರ್ಜ್ ವೈದ್ಯರು, ಶುಶ್ರೂಷಕಿ, ಸ್ವಚ್ಛತಾ ಸಿಬ್ಬಂದಿ ಅಲ್ಲದೆ, ಮೃತ ಮಗುವನ್ನು ಹಸ್ತಾಂತರ ಮಾಡುವಾಗ ಉದಾಸೀನತೆಯಿಂದ ವರ್ತಿಸಿದ ನರ್ಸ್, ಸಿಬ್ಬಂದಿಗೂ ನೋಟಿಸ್ ನೀಡಲಾಗಿದೆ.
ಮಗುವಿನ ಮರಣೋತ್ತರ ಪರೀಕ್ಷೆಯನ್ನು ಪೋಷಕರ ಸಮ್ಮುಖದಲ್ಲಿ ನಡೆಸಲಾಗಿದ್ದು, ಇರುವೆ ಕಚ್ಚಿದ್ದರಿಂದಲೇ ಮೃತಪಟ್ಟಿದೆಯೇ ಎಂಬುವುದರ ಬಗ್ಗೆ ವರದಿ ಪಡೆಯಲು ಮಧ್ಯಪ್ರದೇಶದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಪೊಲೀಸರು ತಾಯಿ, ತಂದೆ ಹಾಗೂ ಪೋಷಕರಿಂದ ಹೇಳಿಕೆ ಪಡೆದುಕೊಂಡರು. ಆಸ್ಪತ್ರೆಗೆ ದಾಖಲಾದ ದಿನದಿಂದ ಮಗು ಸಾವಿನ ಖಚಿತಪಡಿಸುವ ತನಕ ನಡೆದಿರುವ ಎಲ್ಲ ದಿನಗಳ ದಿನಚರಿ ಕುರಿತಂತೆ ಮಾಹಿತಿ ಪಡೆದುಕೊಂಡಿದ್ದಾರೆ.
