Sunday, April 26, 2026
Homeಜಿಲ್ಲಾ ಸುದ್ದಿಗಳುಕುಡಿದು ಕಿರಿಕ್ ಮಾಡುತ್ತಿದ್ದ ಮಗನನ್ನು ಕೊಂದ ತಾಯಿಯ ಬಂಧನ

ಕುಡಿದು ಕಿರಿಕ್ ಮಾಡುತ್ತಿದ್ದ ಮಗನನ್ನು ಕೊಂದ ತಾಯಿಯ ಬಂಧನ

Mother arrested for killing drunken son

ಮೈಸೂರು, ಏ. 26- ಮದ್ಯ ಸೇವಿಸಿ ಮನೆಗೆ ಬರುತ್ತಿದ್ದ ಮಗ ಕಿರುಕುಳ ನೀಡುತ್ತಿದ್ದರಿಂದ ಆತನ ಕಾಟ ತಾಳಲಾರದೆ ದೊಣ್ಣೆ ಮತ್ತು ಕಲ್ಲಿನಿಂದ ತಲೆಗೆ ಬಡಿದು ತಾಯಿಯೇ ಕೊಲೆ ಮಾಡಿರುವ ಘಟನೆ ನಜರಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ರಾಜೇಂದ್ರನಗರ ನಿವಾಸಿ ಮಂಜುಳಾ ಮಗ ರಮೇಶ್‌ನನ್ನು ಕೊಲೆ ಮಾಡಿರುವ ತಾಯಿ. ಏ.14ರಂದು ಚಾಮುಂಡಿ ಬೆಟ್ಟದ ಬಳಿಯ ತಾವರೆಕಟ್ಟೆ ರಸ್ತೆಯ ಪಕ್ಕದ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬನ ಕೊಲೆಯಾಗಿರುವ ಸಂಬಂಧ ನಜರಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕೊಲೆ ಪ್ರಕರಣ ಅಕ್ಷರಶಃ ಪೊಲೀಸರ ನಿದ್ದೆಗೆಡಿಸಿತ್ತು. ಕೊಲೆಯಾದ ವ್ಯಕ್ತಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಗುರುತು ಸಿಗದಂತೆ ಹತ್ಯೆ ಮಾಡಲಾಗಿತ್ತು. ಮೃತ ವ್ಯಕ್ತಿಯ ಬಳಿ ಯಾವುದೇ ಗುರುತಿನ ಚೀಟಿ, ವಿಳಾಸದ ಕುರುಹುಗಳು ಸಿಕ್ಕಿರಲಿಲ್ಲ.

ಈ ಸಂಬಂಧ ಸೂಕ್ತ ತನಿಖೆಗಾಗಿ ದೇವರಾಜ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೆ.ರಾಜೇಂದ್ರ ಅವರ ಉಸ್ತುವಾರಿಯಲ್ಲಿ ಹಾಗೂ ನಿರೀಕ್ಷಕರಾದ ಎಂ. ಮಹದೇವಸ್ವಾಮಿ ನೇತೃತ್ವದಲ್ಲಿ 4 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮಾತ್ರ ಪ್ರಕರಣವನ್ನು ಭೇದಿಸಲೇಬೇಕು ಎಂದು ತಂಡಕ್ಕೆ ಸೂಚನೆ ನೀಡಿದ್ದರು.

ಕಾರ್ಯಾಚರಣೆಗೆ ಮುಂದಾದ ತನಿಖಾ ತಂಡಗಳು ಬೆಟ್ಟದ ಮಾರ್ಗದಲ್ಲಿನ ಸಿಸಿಟಿವಿಗಳ ಫೂಟೇಜ್‌ಗಳು ಹಾಗೂ ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ಅಳವಡಿಸಿದ್ದ ಸುಮಾರು 200ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ರಮೇಶ್ ಮತ್ತು ತಾಯಿ ಮಂಜುಳಾ ಅವರ ಚಲನವಲನಗಳು ಸೆರೆಯಾಗಿದ್ದವು.

ಸಿಸಿಟಿವಿಯಲ್ಲಿ ಸಿಕ್ಕ ದೃಶ್ಯಗಳನ್ನಾಧರಿಸಿ ಆರೋಪಿ ತಾಯಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ, ನನ್ನ ಎರಡನೇ ಮಗ ರಮೇಶ್ ವಿವಾಹವಾಗದೆ, ವಿಪರೀತ ಕುಡುಕನಾಗಿದ್ದ. ಮದ್ಯ ಸೇವಿಸಲು ಹಣ ನೀಡುವಂತೆ ವಿಪರೀತ ಪೀಡಿಸುತ್ತಿದ್ದನು. ಪ್ರತಿನಿತ್ಯ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ದಲ್ಲದೆ ನನ್ನ ಮೇಲೆ ದೈಹಿಕ, ಮಾನಸಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಕೊಲ್ಲಲು ನಿರ್ಧರಿಸಿದೆ ಎಂದು ಬಾಯಿಬಿಟ್ಟಿದ್ದಾಳೆ.

ಏ.14ರಂದು ರಮೇಶ್‌ರನ್ನು ಆಟೋದಲ್ಲಿ ಬೆಟ್ಟಕ್ಕೆ ಕರೆದುಕೊಂಡು ಹೋಗಿ, ಬೆಳಿಗ್ಗೆ ಸುಮಾರು 8.30ರ ಸಮಯದಲ್ಲಿ ತಾವರೆಕಟ್ಟೆಯ ಬಳಿ ಆಟೋದಿಂದ ಇಳಿದು ರಮೇಶ್‌ ನನ್ನು ಖಾಲಿ ಜಾಗಕ್ಕೆ ಕರೆದುಕೊಂಡು ಹೋದೆ. ಅಲ್ಲಿ ದೊಣ್ಣೆ ಹಾಗೂ ಕಲ್ಲಿನಿಂದ ತಲೆಗೆ ಹೊಡೆದು ಸಾಯಿಸಿದೆ ಎಂದು ವಿವರಿಸಿದ್ದಾಳೆ.

ನಂತರ ಆರೋಪಿ ಮಂಜುಳಾ ಅವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಪನಿರೀಕ್ಷಕರಾದ ಪಿ.ನಟರಾಜು, ಎನ್.ಅನಿಲ್ ಕುಮಾರ್, ರಂಗಸ್ವಾಮಿ, ಎಂ.ಎಲ್.ಸಿದ್ದೇಶ್, ಸಿಬ್ಬಂದಿಗಳಾದ ಬಿ.ವಿ.ಪ್ರಕಾಶ್, ಪುರುಷೋತ್ತಮ, ಎಸ್. ಸತೀಶ್ ಕುಮಾರ್, ಗೋಪಾಲ್, ಪ್ರವೀಣ್ ಕುಮಾರ್, ಸಂಜು, ಸಂದೇಶ್ ಕುಮಾರ್, ವೆಂಕಟೇಶ್, ಮೊಹಮ್ಮದ್ ಇಸ್ಮಾಯಿಲ್, ಕೃಷ್ಣ, ಪರಶುರಾಮ್, ನಂದಿನಿ ಹಾಗೂ ಸಿಡಿಆರ್ ಘಟಕದ ಕುಮಾರ್ ಅವರು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

RELATED ARTICLES

Latest News