Sunday, April 26, 2026
Homeಮನರಂಜನೆಕರ್ನಾಟಕ ರತ್ನ ಡಾ.ರಾಜ್‌ ಸ್ಮಾರಕದ ಬಗ್ಗೆ ಅವಹೇಳನ ಅಕ್ಷಮ್ಯಅಪರಾಧ : ಎಸ್‌.ನಾರಾಯಣ್‌

ಕರ್ನಾಟಕ ರತ್ನ ಡಾ.ರಾಜ್‌ ಸ್ಮಾರಕದ ಬಗ್ಗೆ ಅವಹೇಳನ ಅಕ್ಷಮ್ಯಅಪರಾಧ : ಎಸ್‌.ನಾರಾಯಣ್‌

Desecration of Dr. Raj's memorial is an unforgivable crime: S. Narayan

ಶನಿವಾರ ಸಂಜೆ, ಸಹಜವಾಗಿ ನಾನು ನನ್ನ ದಿನಚರಿಯನ್ನು ಮುಗಿಸಿಕೊಂಡು ಮನೆಗೆ ಬಂದು ಟಿವಿಯ ಮುಂದೆ ಕುಳಿತೆ. ಸುದ್ದಿವಾಹಿನಿಯೊಂದರಲ್ಲಿ ಶ್ರೀ ಸಾ.ರಾ.ಗೋವಿಂದುರವರ ಆಕ್ರೋಶಭರಿತ ಮುಖವನ್ನು ಕಂಡು ನನಗೆ ತುಸು ಅಚ್ಚರಿಯಾಯಿತು. ಅವರು ಇತ್ತೀಚಿನ ದಿನಗಳಲ್ಲಿ ಅಷ್ಟೊಂದು ಕೋಪಗೊಂಡಿದ್ದನ್ನು ನಾನು ನೋಡಿರಲಿಲ್ಲ.

ಗೋವಿಂದುರವರು ನನ್ನ ಆತ್ಮೀಯರೂ ಆಗಿರುವುದರಿಂದ ಅವರ ಬಗ್ಗೆ ನಾನು ಬಲ್ಲವನಾಗಿದ್ದೆ. ವಯಸ್ಸಿಗೆ, ಅನುಭವಕ್ಕೆ ತಕ್ಕ ಹಾಗೆ ಅವರ ನಡೆ- ನುಡಿ, ವ್ಯಕ್ತಿತ್ವ ಕೂಡಾ ಪರಿಪಕ್ವವಾಗಿತ್ತು. ಇತ್ತೀಚಿನ ದಿನಗಳಲ್ಲಿ ಯಾರೊಂದಿಗೂ ಅವರು ಗಟ್ಟಿ ದನಿಯಲ್ಲಿ ಮಾತನಾಡಿದವರಲ್ಲ. ಹಾಗೇನಾದರೂ ಮಾತನಾಡಿದ್ದರೆ ಅದು ಖಂಡಿತವಾಗಿಯೂ ನಾಡು ನುಡಿಗಾಗಿ ನೆಲ ಜಲಕ್ಕಾಗಿ ಆಗಿರುತ್ತಿತ್ತು. ಅಂತಹ ವಾತಾವರಣ ಯಾವುದೂ ಈಗ ಇರಲಿಲ್ಲ. ಹಾಗಾದರೆ ಇದು ಏನಾಗಿರಬಹುದು ಎಂದು ಯೊಚಿಸುತ್ತಿರುವಾಗಲೇ ಅವರೆದೆರು ಇದ್ದವರು ನಮ್ಮದೇ ಚಿತ್ರರಂಗದವರಾದ ನಟ ಚೇತನ್‌ರವರು. ಆಗ ನನಗನ್ನಿಸಿತು ಏನೋ ಎಡವಟ್ಟಾಗಿದೆ ಎಂದರು.

ಚೇತನ್‌ರವರು ವಿದ್ಯಾವಂತರು, ಬುದ್ಧಿವಂತರು, ಸಾಮಾಜಿಕ ಕಳಕಳಿ ಇರುವವರು, ಆಗಾಗ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದರು. ಅದು ನಾಡಿಗೇ ತಿಳಿದ ವಿಷಯ. ಈಗ ಇಲ್ಲೇನೋ ನಡೆದಿದೆ, ಸಾ.ರಾ.ಗೋವಿಂದುರವರನ್ನು ರೊಚ್ಚಿಗೆಬ್ಬಿಸಿರಬೇಕಾದರೆ ಅವರ ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಯಾವುದೋ ಘಟನೆ ಖಂಡಿತವಾಗಿಯೂ ಸಂಭವಿಸಿದೆ. ಸ್ಥಳ ಚೇತನ್‌ರವರ ಮನೆ ಮುಂದೆ ಪೊಲೀಸರಿದ್ದಾರೆ. ಜೊತೆಗೆ ಡಾ.ರಾಜ್‌ಕುಮಾರ್‌ರವರ ಅಭಿಮಾನಿಗಳೂ ಇದ್ದಾರೆ. ಆಗ ತುಸು ಆತಂಕವಾಯಿತು. ಈ ಚೇತನ್‌ ಅಣ್ಣಾವರ ಬಗ್ಗೆ ಏನಾದರೂ ಅವಹೇಳನಕಾರಿಯಾಗಿ ಮಾತನಾಡಿರಬೇಕು ಎಂದುಕೊಂಡೆ.

ಕೆಲವೇ ಕ್ಷಣಗಳಲ್ಲಿ ನಾನು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ನಟ ಚೇತನ್‌ರವರು ಡಾ.ರಾಜ್‌ಕುಮಾರ್‌ರವರ ಸ್ಮಾರಕದ ಬಗ್ಗೆ ಅಸಡ್ಡೆಯ ನುಡಿಯನ್ನಾಡಿರುವುದು ಕಂಡು ನನಗೆ ಮೈಯ್ಯೆಲ್ಲಾ ಉರಿದು ಹೋಯ್ತು. ನಾನಷ್ಟೇ ಅಲ್ಲ. ಯಾರೆಲ್ಲಾ ವಾಹಿನಿಯನ್ನು ನೋಡುತ್ತಿರುವರೋ ಅವರಿಗೆಲ್ಲಾ ಚೇತನ್‌ರ ಅದ್ಭುತವಾಣಿಯನ್ನು ಕೇಳಿ ರಕ್ತ ಕುದಿಯದೇ ಇರಲು ಸಾಧ್ಯವಿಲ್ಲ. ಅದರಿಂದಾಗಿಯೇ ಸಾ.ರಾ.ಗೋವಿಂದುರವರು ಆ ಪರಿ ಘರ್ಜಿಸುತ್ತಿರುವುದು. ಅವರ ಕೋಪ ಅರ್ಥಪೂರ್ಣವಾಗಿತ್ತು. ಇದರಿಂದ ದೊಡ್ಡ ಅನಾಹುತ ಸಂಭವಿಸಬಹುದಾದ ಎಲ್ಲಾ ಲಕ್ಷಣಗಳು ಕಂಡುಬಂದಿತ್ತು. ಅಷ್ಟರಲ್ಲಾಗಲೇ ಚೇತನ್‌ರವರು ಕ್ಷಮೆ ಯಾಚಿಸಿದರು. ಅಲ್ಲಿಗೆ ಪರಿಸ್ಥಿತಿ ತಿಳಿಯಾಯಿತು.

ಆದರೆ ನನ್ನ ಮನಸ್ಸು ಸಮಾಧಾನವಾಗಲಿಲ್ಲ. ಚೇತನ್‌ರವರ ಮೊಬೈಲ್‌ ನಂಬರನ್ನೇ ಪತ್ತೆ ಹಚ್ಚಿ ಅವರೊಂದಿಗೆ ತುಸು ಮಾತನಾಡಬೇಕೆಂದೆನಿಸಿತು. ನಂತರ ಅನಿಸಿತು ಈ ಪರಿಸ್ಥಿತಿಯಲ್ಲಿ ಅದು ಸೂಕ್ತವಲ್ಲವೆಂದು. ನಾನು ಹೇಳುವ ವಿಷಯಕ್ಕೆ ಆತನಿಂದ ನಕಾರಾತ್ಮಕವಾದ ಪ್ರತಿಕ್ರಿಯೆ ಏನಾದರೂ ಬಂದರೆ ಅದರಿಂದ ಕೋಪಗೊಂಡು ನಾವೇನಾದರೂ ಒಂದು ಮಾತು ಹೆಚ್ಚು ಆಡಿ, ಅದರಿಂದ ಬೇರೆ ಯಾವುದಾದರೂ ತಿರುವು ಪಡೆದುಕೊಳ್ಳಬಹುದೇನೋ ಎಂದು ಸುಮ್ಮನಾದೆ.

ಆದರೂ ಮನಸ್ಸು ಯಾಕೋ ಚಡಪಡಿಸುತ್ತಿತ್ತು. ರಾತ್ರಿಯಿಡೀ ನಿದ್ದೆ ಬಾರದೆ ಒದ್ದಾಡುತ್ತಿದ್ದೆ. ಆಗಾಗ ನನಗೇ ತಿಳಿಯದೇ ಅವಡುಗಚ್ಚುತ್ತಿದ್ದೆ. ಏಕೆಂದರೆ ನಾನು ನನ್ನ ಬಾಲ್ಯವನ್ನು ನನಗರಿವಿಲ್ಲದೆಯೇ ರಾಜ್‌ಕುಮಾರ್‌ರವರೊಂದಿಗೆ ಬೆಸೆದುಕೊಂಡಿದ್ದೆ. ಕಲ್ಪನೆಗೂ ಮೀರಿದ ನಂಟು ಅದಾಗಿತ್ತು.
ಆ ನಂಟಿಗೆ ಯಾವ ಸಂಬಂಧ ಎಂದು ಅದುವರೆಗೂ ನನಗೆ ಅರ್ಥವಾಗಲಿಲ್ಲ. ಅವರ ಅಭಿನಯದ ಚಲನಚಿತ್ರವನ್ನು ನಿರ್ದೇಶನ ಮಾಡುವ ಅವಕಾಶ ನನಗೆ ದೊರಕಿತು. ಅದಕ್ಕಿಂತಲೂ ಹೆಚ್ಚಾಗಿ ಆಪ್ಯಾಯಮಾನವಾದಂತಹ ಒಡನಾಟ ನನಗೆ ಲಭಿಸಿತು. ಅದೆಲ್ಲವನ್ನು ಬದಿಗಿಟ್ಟು ನೋಡಿದಾಗ ಇದೆಲ್ಲಕ್ಕಿಂತಲೂ ಮಿಗಿಲಾದ ಸಂಬಂಧವೊಂದು ನನ್ನ ಅದರ ನಡುವೆ ಇತ್ತು. ಅದರಿಂದಾಗಿಯೇ ನನಗೆ ಆ ರೀತಿಯಾದ ನೋವಿನ ಯಾತನೆಯಾದದ್ದು.

ಬಹುಶಃ ನನ್ನ ಬಗ್ಗೆಯಾಗಲಿ ನನ್ನ ಕುಟುಂಬ ಸದಸ್ಯರ ಬಗ್ಗೆಯಾಗಲಿ ಯಾರಾದರೂ ಮಾತನಾಡಿದರೆ ಒಂದು ವೇಳೆ ಕ್ಷಮಿಸಿಬಿಡುವೆನೇನೋ ಗೊತ್ತಿಲ್ಲ. ಆದರೆ ಅಣ್ಣಾವರ ಬಗ್ಗೆ ಯಾರೇ ಮಾತನಾಡಿದರೂ ನನ್ನ ಮನೆ ದೇವರಾಣೆ ನಾನು ಸಹಿಸುವುದಿಲ್ಲ.
ಬೆಳಗಾಯಿತು. ಮನಸ್ಸಿನ ಭಾರವನ್ನು ಹೇಗಾದರೂ ಕೆಳಗಿಳಿಸಲು ಒಂದಷ್ಟು ಬರೆಯಬೇಕೆನಿಸಿತು.

ಪೆನ್ನು ಪೇಪರನ್ನು ಕೈಗೆತ್ತಿಕೊಂಡು ಕುಳಿತೆ. ಅಣ್ಣಾವರ ಬಗ್ಗೆ ತುಸು ಮಾಹಿತಿಯನ್ನು ಈಗಿನ ಪೀಳಿಗೆಗೆ ತಲುಪಿಸಬೇಕೆಂದೆನಿಸಿತು. ಅವರ ಬಗ್ಗೆ ಬರೆದು ಬಹಳ ವರ್ಷಗಳಾಯಿತು. ಈ ಹಿಂದೆ 2000 ದಲ್ಲಿ ನರಹಂತಕ ವೀರಪ್ಪನ್‌ ಅಣ್ಣಾವರನ್ನು ಅಪಹರಿಸಿದಾಗ ಅವರ ಬಗ್ಗೆ ಲೇಖನ ಬರೆಯುವ ಸುಂದರ ಅವಕಾಶ ನನಗೆ ದೊರೆಯಿತು. ನನ್ನ ಪರಮ ಆಪ್ತರು, ಅಭಿಮಾನಿ ಪ್ರಕಾಶನ ಸಂಪಾದಕರು, ಡಾ.ರಾಜ್‌ಕುಮಾರ್‌ರವರ ಹೆಸರನ್ನೇ ಉಸಿರಾಡುತ್ತಿರುವ ಸ್ನೇಹಜೀವಿ ಶ್ರೀ ಟಿ.ವೆಂಕಟೇಶ್‌ರವರ ಸಹಕಾರ ಮತ್ತು ಪ್ರೋತ್ಸಾಹದೊಂದಿಗೆ ಬರೆಯಲು ಪ್ರಾರಂಭಿಸಿದೆ. ಅದು ನಮ್ಮ ಕರ್ನಾಟಕ ರಾಜ್ಯ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಜನಪ್ರಿಯಗೊಂಡು ಸಂಚಲನ ಮೂಡಿಸಿದ್ದು ಇತಿಹಾಸ. ಅಣ್ಣಾವರ ವ್ಯಕ್ತಿತ್ವವನ್ನು ಮತ್ತೊಮ್ಮೆ ಈಗಿನ ಪೀಳಿಗೆಗೆ ತಿಳಿಸುವ ಇಂಗಿತ ನನಗೆ.

RELATED ARTICLES

Latest News