Thursday, April 30, 2026
Homeಮನರಂಜನೆಕಲಾಸಂತ ನಮ್ಮ ರಾಜಣ್ಣ

ಕಲಾಸಂತ ನಮ್ಮ ರಾಜಣ್ಣ

S Narayan On Dr Rajkumar

-ನಿರ್ದೇಶಕ ಎಸ್‌.ನಾರಾಯಣ್‌
ನಾವು ಏನಾದರೂ ಮಾತನಾ ಡುವ ಮೊದಲು ಮನಸ್ಸನ್ನು ಶುದ್ಧಿ ಮಾಡಿಕೊಳ್ಳಬೇಕು. ಮನಸನ್ನು ಕೊಳಕಾಗಿಟ್ಟುಕೊಂಡು ಏನೇ ಮಾತನಾಡಿದರೂ ಅದು ಕೊಳಕಾಗಿಯೇ ಇರುತ್ತದೆ. ಅಂತಹ ವಿಷಯಗಳನ್ನು ತಿದ್ದಲೂ ಆಗದು, ಶುದ್ಧಿಪಡಿಸಲೂ ಆಗದು. ನಾನು ಏಕೆ ಹೀಗೆ ಈ ರೀತಿಯಾಗಿ ಪ್ರಾರಂಭಿಸಿದ್ದೇನೆಂದರೆ, ಇದೀಗ ಎದ್ದಿರುವ ಡಾ.ರಾಜ್‌ಕುಮಾರ್‌ ರವರ ಸಾರಕ್ಕಕ್ಕೆ 2.5 ಎಕರೆ ಜಾಗವನ್ನು ಏಕೆ ಕೊಡಬೇಕು ಎಂಬ ಅನವಶ್ಯಕ ವಿವಾದ.

ಈ ಜಾಗವನ್ನು ಸಾರಕಕ್ಕೆ ಸರಕಾರ ನೀಡಿ ಸರಿಯಾಗಿ ಇಪ್ಪತ್ತು ವರ್ಷವಾಗಿದೆ. ಈ ಇಪ್ಪತ್ತು ವರ್ಷದಲ್ಲಿ ಯಾರಿಗೂ ಈ ಪ್ರಶ್ನೆ ಕೇಳಬೇಕೆಂದು ಅನಿಸಲಿಲ್ಲವೇ..? ಅಥವಾ ರಾಜ್ಯದಲ್ಲಿರುವವರೆಲ್ಲಾ ದಡ್ಡರೇ ಅಥವಾ ಚೇತನ್‌ರವರು ನಿದ್ದೆಯಿಂದ ಮೊನ್ನೆತ್ತಾನೆ ಎಚ್ಚರಗೊಂಡರೇ… ಇಷ್ಟು ದಿನ ಈ ಪ್ರಶ್ನೆ ಅವರಿಗೆ ಏಕೆ ಮೂಡಲಿಲ್ಲ..?

ಚೇತನ್‌ ರವರಿಗೆ ಗೊತ್ತಿರಲಿ ಈ ನಾಡಿನ ಜನ ಪ್ರ್ರಜ್ಞಾವಂತರು ಎಂಬುದು. ರಾಜಣ್ಣನವರಿಗೆ ಸರಕಾರ ನೀಡಿದ ಭೂಮಿಯನ್ನು ಕನ್ನಡ ನಾಡಿನ ಸಮಸ್ತ ನಾಗರಿಕರೂ ಸರ್ವಾನುಮತದಿಂದ ಸ್ವೀಕರಿಸಿರುತ್ತಾರೆ. ಆ ಮಹಾಪುರುಷನ ಸಾರಕಕ್ಕಾಗಿ ಎರಡೂವರೆ ಸಾವಿರ ಭೂಮಿಯನ್ನು ನೀಡಿದ್ದರೂ ಯಾರ ಅಭ್ಯಂತರವೂ ಇರುತ್ತಿರಲಿಲ್ಲ. ಕಾರಣ ಡಾ. ರಾಜ್‌ಕುಮಾರ್‌ ರವರು ಕಲಾಜಗತ್ತಿಗೆ ಮಾತ್ರ ಸೀಮಿತವಾಗಿರಲಿಲ್ಲ ಎಂಬುದು ನೆನಪಿರಲಿ.

ನಾಡು, ನುಡಿ, ನೆಲ, ಜಲದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ, ಕನ್ನಡ ಭಾಷೆಗೆ ವಿಶ್ವಮಟ್ಟದ ಕೀರ್ತಿ ತಂದವರು ಡಾ. ರಾಜ್‌ಕುಮಾರ್‌ ರವರು. ಅದರಿಂದಾಗಿಯೇ ಹಿರಿಯ ಸಾಹಿತಿಗಳಾದ ಡಾ. ಯು.ಆರ್‌.ಅನಂತಮೂರ್ತಿ ಹೇಳುತ್ತಾರೆ. ರಾಜ್‌ಕುಮಾರ್‌ ರವರಿಂದ ನನ್ನ ತಾಯಿ ಭುವನೇಶ್ವರಿ ಸಂತೃಪ್ತಳಾಗಿದ್ದಾಳೆ. ಅವರು ಕನ್ನಡ ಭಾಷೆಗೆ ಹೊಸ ಭಾಷ್ಯ ಬರೆದಿದ್ದಾರೆಂದು ರಾಷ್ಟ್ರಕವಿ ಕುವೆಂಪು ರವರು ಹೇಳುತ್ತಾರೆ.

ಕನ್ನಡದ ಕಂಪಲ್ಲಿ ಶ್ರೀಗಂಧದ ಘಮ ಇದೆ ಎಂದು ನನಗೆ ತಿಳಿದಿದ್ದೇ ರಾಜ್‌ಕುಮಾರ್‌ ರವರ ಭಾಷಾ ಪ್ರೌಢಿಮೆಯಿಂದ ಎಂದು. ಅಂದಿನ ಬಂಗಾರಪ್ಪನವರ ಸರಕಾರವು ಕುವೆಂಪು ರವರಿಗೆ ಕರ್ನಾಟಕ ರತ್ನ' (ಈ ನಾಡಿನ ಅತ್ಯುನ್ನತ ಪ್ರಶಸ್ತಿ) ಯನ್ನು ನೀಡಲು ಮುಂದಾಗಿ ಅವರ ಬಳಿ ನಿಯೋಗವನ್ನು ಕಳುಹಿಸಿ ಸ್ವೀಕರಿಸಲು ಮನವಿಯನ್ನು ಮಾಡಿದಾಗ ಕುವೆಂಪು ರವರು ನಯವಾಗಿ ಅದನ್ನು ತಿರಸ್ಕರಿಸುತ್ತಾ, ಈ ಕನ್ನಡ ನಾಡಿನ ನಿಜವಾದ ರತ್ನ ರಾಜ್‌ಕುಮಾರ್‌ ರವರು. ನಾನು ಒಬ್ಬ ಸಾಹಿತಿ, ನನ್ನ ಪ್ರಯತ್ನ ಓದುಗರಿಗೆ ಮತ್ತು ಪ್ರ್ರಜ್ಞಾವಂತರಿಗಷ್ಟೇ ಸೀಮಿತ. ಆದರೆ ಸಾಮಾನ್ಯ ಜನರಿಗೂ ಭಾಷಾ ಜ್ಞಾನವನ್ನು ಪಸರಿಸಿ ಕನ್ನಡದ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದವರು ನಟಸಾರ್ವಭೌಮ ರಾಜ್‌ಕುಮಾರ್‌, ಅವರೇಕರ್ನಾಟಕ ರತ್ನ’. ಈ ಗೌರವವನ್ನು ಅವರಿಗೆ ನೀಡಿದರೆ ಅದು ನನಗೆ ಕೊಡುವ ಎನ್ನುತ್ತಾರೆ.

ನಿಯೋಗವು ಕುವೆಂಪು ರವರ ಮನವಿಯಂತೆ ರಾಜ್‌ಕುಮಾರ್‌ ರವರ ಮನೆಗೆ ಬರುತ್ತದೆ. ಕುವೆಂಪುರವರ ವಿನಂತಿಯನ್ನು ರಾಜ್‌ಕುಮಾರ್‌ ರವರಿಗೆ ತಿಳಿಸಿದಾಗ ಅಣ್ಣಾವರು ಆಶ್ಚರ್ಯದಿಂದ ನಾನು ಹೇಗೆ ಕರ್ನಾಟಕ ರತ್ನ' ಆಗೋಕೆ ಸಾಧ್ಯ? ನಿಮ ನಿರ್ಧಾರ ಸರಿಯಾಗಿದೆ.ಕರ್ನಾಟಕ ರತ್ನ’ ಎಂದರೆ ಅದು ನಮ ಕುವೆಂಪು ರವರು. ಅವರ ಸಾಹಿತ್ಯ ನಮ ಬದುಕಿಗೆ ಭೂಷಣ. ಅವರ ಸಾಹಿತ್ಯದಿಂದ ನನಗೆ ಪ್ರೇರಣೆಯಾಗಿದೆ. ಅವರ ಗೀತೆಗಳನ್ನು ನನ್ನ ಅಭಿನಯದ ಚಲನಚಿತ್ರಗಳಲ್ಲಿ ಅಳವಡಿಸಿಕೊಂಡಿರುವುದು ನನಗೆ ಹೆಮೆ.

ನಾನೊಬ್ಬ ಸಾಧಾರಣ ಕಲಾವಿದ. ಯಾರೋ ಬರೆದುಕೊಟ್ಟಿದ್ದನ್ನು ನಾನು ಅಭಿನಯಿಸ್ತೀನಿ ಅಷ್ಟೆ. ಹೀಗೆ ಅಣ್ಣಾವರು ಅಷ್ಟೇ ನಯವಾಗಿ ತಿರಸ್ಕರಿಸುತ್ತಾರೆ. ಕೊನೆಗೆ ಸರಕಾರ ಇಬ್ಬರಿಗೂ `ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡುವ ನಿರ್ಧಾರವನ್ನು ಮಾಡುತ್ತದೆ. ಆಗಲೂ ಕೂಡ ಮೊದಲು ರಾಜ್‌ಕುಮಾರ್‌ ರವರಿಗೆ ನೀಡಿ, ನಂತರ ನಾನು ಸ್ವೀಕರಿಸುತ್ತೇನೆ ಎಂದು ಕುವೆಂಪುರವರು ಮನವಿ ಮಾಡುತ್ತಾರೆ. ಅದೇ ರೀತಿ ಅಣ್ಣಾವರೂ ಕೂಡ… ಮೊದಲ ಗೌರವ ಸಲ್ಲಬೇಕಾದದ್ದು ಜ್ಞಾನಪೀಠಕ್ಕೆ ಅದಾದ ನಂತರ ಕಲಾವಿದರಿಗೆ ಎಂದರು.

ಮುಖ್ಯಮಂತ್ರಿಗಳಾದ ಶ್ರೀ ಬಂಗಾರಪ್ಪನವರು ಅಣ್ಣಾವರನ್ನು ಕರೆದುಕೊಂಡು ಕುವೆಂಪುರವರ ನಿವಾಸಕ್ಕೆ ತೆರಳುತ್ತಾರೆ. ಅಲ್ಲಿಯೇ ಎರಡೂ ರತ್ನಗಳನ್ನು ಒಗ್ಗೂಡಿಸಿ `ಕರ್ನಾಟಕ ರತ್ನ’ ಪ್ರಶಸ್ತಿಯನ್ನು ನೀಡುತ್ತಾರೆ. ರಾಜ್‌ಕುಮಾರ್‌ ರವರು ಕುವೆಂಪುರವರ ಪಾದಸ್ಪರ್ಶ ಮಾಡುತ್ತಾರೆ. ಭಾವುಕರಾದ ಕುವೆಂಪುರವರು ರಾಜ್‌ಕುಮಾರ್‌ ರವರು ಬದುಕಿ ಬಾಳಿದ ಕಾಲದಲ್ಲಿ ನಾವೂ ಇದ್ದೆವು ಎಂದು ನಾಳಿನ ಇತಿಹಾಸ ಹೇಳುತ್ತದಲ್ಲಾ. ಅದೇ ನಮ ಸುಯೋಗ ಎಂದು ಮನಸಾರೆ ನುಡಿಯುತ್ತಾರೆ.

ಇದನ್ನು ಓದಿದ ನಂತರ ಹೇಳಿ.. ಯಾರು ಹೆಚ್ಚು ಈ ಇಬ್ಬರೊಳಗೆ ಎನ್ನುವುದಕ್ಕಿಂತಲೂ ಯಾರು ಶ್ರೇಷ್ಠ ಈ ಇಬ್ಬರಲ್ಲಿ ಎಂದು? ಇಲ್ಲಿ ರಾಜ್‌ಕುಮಾರ್‌ ರವರು ಕುವೆಂಪುರವರಿಗೆ ಮನಸೋತಿದ್ದು ಅವರ ಶ್ರೇಷ್ಠ ಸಾಹಿತ್ಯಕ್ಕೆ. ಆದರೆ ರಾಜ್‌ಕುಮಾರ್‌ ರವರಿಗೆ ಮನಸೋತಿದ್ದು ಕಾರಣ ಅವರ ಅಭಿನಯಕ್ಕೋ…. ಅಭಿನಯಿಸಿದ ಪಾತ್ರಗಳಿಗೋ…. ಅಥವಾ ಸರಳವಾದ ವ್ಯಕ್ತಿತ್ವಕ್ಕೋ…. ಸುಂದರವಾದ ಭಾಷಾ ಪ್ರಜ್ಞೆಗೋ… ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವುದು ತುಂಬಾ ಕಷ್ಟ. ಒಂದೇ ಪದದಲ್ಲಿ ವಿವರಿಸುವುದಾದರೆ ರಾಜ್‌ಕುಮಾರ್‌ ರವರು ಸರಳರಲ್ಲಿ ಸರಳ. ಹಾಗಾಗಿಯೇ ಅವರು ಶ್ರೇಷ್ಠರಲ್ಲಿ ಶ್ರೇಷ್ಠರಾಗಿ ಉಳಿದರು.

RELATED ARTICLES

Latest News