ಬೆಂಗಳೂರು,ಏ.29- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ಎಂಟೂವರೆ ತಿಂಗಳಿನಿಂದ ಪರಪ್ಪನ ಆಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತಮಗೆ ಜಾಮೀನು ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಕಳೆದ ಏ.14ರಂದು ದರ್ಶನ್ ಪರ ವಕೀಲರು ಜಾಮೀನು ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಮೇ 4ರಂದು ಅರ್ಜಿ ವಿಚಾರಣೆಗೆ ಬರಲಿದೆ.
ಕಳೆದ 2025 ಆಗಸ್ಟ್ 14 ರಂದು ಕರ್ನಾಟಕ ಹೈಕೋರ್ಟ್ ದರ್ಶನ್ ಹಾಗೂ ಇತರ ಆರೋಪಿಗಳಿಗೆ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ಸುಮಾರು ಎಂಟೂವರೆ ತಿಂಗಳ ಬಳಿಕ ಜಾಮೀನು ನೀಡುವಂತೆ ವಕೀಲ ರಂಜಿತ್ ರೋಹಟಗಿ ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ಸುಪ್ರೀಂಕೋರ್ಟ್ ಈಗ ವಿಚಾರಣೆಯನ್ನು ಕಾಯ್ದಿರಿಸಿದ್ದು ವಿಧಾನಸಭಾ ಚುನಾವಣಾ ಫಲಿತಾಂಶದ ದಿನವೇ ದರ್ಶನ್ ಜಾಮೀನು ಅರ್ಜಿ ವಿಚಾರಣೆಯೂ ನಡೆಯಲಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಬಳ್ಳಾರಿ ಜೈಲಿನಲ್ಲಿದ್ದಾಗ ದರ್ಶನ್‌ಗೆ ಜಾಮೀನು ಸಿಕ್ಕಿತ್ತು. ಇದಾದ ಬಳಿಕ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಮತ್ತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿತ್ತು. ಇದೀಗ ಜಾಮೀನಿಗಾಗಿ ವಕೀಲ ರಂಜಿತ್ ರೋಹಟಗಿ ಮೂಲಕ ಸುಪ್ರೀಂಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಲಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್, ಈ ತೀರ್ಪನ್ನು ಲ್ಯಾಂಡ್‌ಮಾರ್ಕ್ ಎಂದು ಘೋಷಿಸಿ, ಕರ್ನಾಟಕ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ರದ್ದುಪಡಿಸಿತ್ತು.
ಕರ್ನಾಟಕ ಹೈಕೋರ್ಟ್ 2024ರ ಡಿಸೆಂಬರ್ 13ರಂದು ನಟ ದರ್ಶನ್, ಪವಿತ್ರಾ ಗೌಡ, ಅನುಕುಮಾರ್, ಪವನ್, ಲಕ್ಷ್ಮಣ್, ಪ್ರದೋಶ್ ರಾವ್, ವಿನಯ್ ಅವರಿಗೆ ಮಂಜೂರು ಮಾಡಿದ್ದ ಜಾಮೀನು ಆದೇಶವನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರ ವಿಭಾಗೀಯ ಪೀಠವು ಬದಿಗೆ ಸರಿಸಿತ್ತು.
ತನ್ನ ತೀರ್ಪಿನಲ್ಲಿ ಪೀಠವು ದರ್ಶನ್ ಜಾಮೀನಿಗೆ ಅರ್ಹರಲ್ಲ ಎನ್ನುವುದನ್ನು ವಿಷಾದವಾಗಿ ಹೇಳಿ, ಹೈಕೋರ್ಟ್‌ನ ಆದೇಶವು ವಿಕ್ಷಿಪ್ತ ಹಾಗೂ ಅಸಮಂಜಸವಾದ ದೋಷಗಳಿಂದ ಕೂಡಿದೆ ಎಂದು ಪಟ್ಟಿ ಮಾಡಿತ್ತು.
ಜೈಲಿನಲ್ಲಿದ್ದಾಗಲೇ ರಾಜಾತಿಥ್ಯ ಪಡೆದಿದ್ದ ದರ್ಶನ್‌ನ ಪ್ರಭಾವ, ಜನಪ್ರಿಯತೆ, ರಾಜಕೀಯ, ಹಣಕಾಸಿನ ಬಲದ ಬಗ್ಗೆ ತನ್ನ ತೀರ್ಪಿನಲ್ಲಿ ನಿಚ್ಚಳವಾಗಿ ಉಲ್ಲೇಖಿಸಿ, ಜೈಲು ವ್ಯವಸ್ಥೆಯನ್ನೇ ಒಬ್ಬ ವ್ಯಕ್ತಿ ಬುಡಮೇಲು ಮಾಡಬಹುದಾದರೆ, ಸಾಕ್ಷಿಗಳ ವಿಚಾರದಲ್ಲಿ ಮಧ್ಯಪ್ರವೇಶಿಸುವ, ಸಾಕ್ಷಿಗಳಿಗೆ ಬೆದರಿಕೆ ಹಾಕುವ ಅಥವಾ ಅವರನ್ನು ಪ್ರಭಾವಿಸುವ ಹಾಗೂ ನ್ಯಾಯದಾನದ ದಿಕ್ಕನ್ನು ತಿರುಚುವ ಅಪಾಯವು ನೈಜಮತ್ತು ಸನ್ನಿಹಿತವೂ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.
ಹೈಕೋರ್ಟ್‌ನ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಲಾಗಿದೆ ಎಂದು ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಆರೋಪಿ ಎಷ್ಟೇ ದೊಡ್ಡವರಾಗಿದ್ದರೂ ಕಾನೂನಿಗಿಂತ ದೊಡ್ಡವರಲ್ಲ. ಕಾನೂನು ಆಡಳಿತವನ್ನು ಎತ್ತಿ ಹಿಡಿಯಬೇಕು. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ ಎಂದು ಪೀಠ ಸ್ಪಷ್ಟಪಡಿಸಿತ್ತು.
ಜೈಲಿನಲ್ಲಿ ಆರೋಪಿಗಳಿಗೆ 5 ಸ್ಟಾರ್ ಅತಿಥ್ಯ ನೀಡಿರುವ ಬಗ್ಗೆ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜೈಲು ಸೂಪರಿಂಟೆಂಡೆಂಟ್‌ರನ್ನು ಸಸ್ಪೆಂಡ್ ಮಾಡಬೇಕಿತ್ತು. ಯಾರಿಗಾದರೂ ವಿಐಪಿ ಅತಿಥ್ಯ ನೀಡುತ್ತಿರುವ ಫೋಟೋ ಅಥವಾ ವೀಡಿಯೋ ಕಂಡುಬಂದರೆ, ಮೊದಲು ನಿಮನ್ನು ಸಮನ್‌್ಸ ಮಾಡಲಾಗುತ್ತದೆ ಎಂದು ನ್ಯಾ. ಪರ್ದಿವಾಲಾ ಎಚ್ಚರಿಸಿದ್ದರು.
