ನವದೆಹಲಿ, ಏ. 29- ಪಶ್ಚಿಮ ಬಂಗಾಳದ ಎರಡನೇ ಹಂತದ ಮತದಾನ ಇಂದು ಸಂಜೆ 6 ಗಂಟೆಗೆ ಕೊನೆಗೊಳ್ಳಲಿದ್ದು, ಮೇ 4 ರಂದು ಪಂಚ ರಾಜ್ಯಗಳ ಚುನಾವಣಾ ಭವಿಷ್ಯ ಬಯಲಾಗಲಿದೆ.ಇಂದು ಸಂಜೆ ನಂತರ ಮತದಾನೋತ್ತರ ಸಮೀಕ್ಷೆ ನಡೆಯಲಿದ್ದು ಯಾವ ರಾಜ್ಯಗಳಲ್ಲಿ ಯಾವ ಪಕ್ಷಗಳು ಅಧಿಕಾರಕ್ಕೆ ಬರಲಿವೆ ಎಂಬ ಬಗ್ಗೆ ಭವಿಷ್ಯ ಹೇಳಲಾಗುವುದು.
ಕೇರಳದಲ್ಲಿ ಎಲ್‌ಡಿಎಫೋ, ಯುಡಿಎಫೋ, ತಮಿಳು
ನಾಡಿನಲ್ಲಿ ದಳಪತಿ ವಿಜಯ್ ಕಥೆ ಏನು? ಸ್ಟಾಲಿನ್ ಮತ್ತೆ ಸಿಎಂ ಆಗುವರೇ? ಇಲ್ಲ ಎಐಎಡಿಎಂಕೆ ಅಧಿಕಾರಕ್ಕೆ ಬರುತ್ತೋ ಅನ್ನೋ ಬಗ್ಗೆ ಸಮೀಕ್ಷೆಗಳು ನಡೆಯಲಿವೆ.ಅಸ್ಸಾಂ ಮತ್ತೆ ಬಿಜೆಪಿ ತೆಕ್ಕೆಗೆ ಬರುವುದೇ ಅಥವಾ ಅಧಿಕಾರ ಕಳೆದುಕೊಳ್ಳುವುದೇ ಹಾಗೂ ಬಂಗಾಳದಲ್ಲಿ ದಾಖಲೆ ಮತದಾನ ನಡೆದಿರುವುದರಿಂದ ದೀದಿ ಆಡಳಿತಕ್ಕೆ ಅಂತ್ಯವಾಡಿ ಬಿಜೆಪಿ ಇಲ್ಲಿ ಕೇಸರಿ ಬಾವುಟ ಹಾರಿಸುವುದೋ ಎನ್ನುವುದು ದೇಶದ ಗಮನ ಸೆಳೆಯುತ್ತಿದೆ.
ಹೀಗಾಗಿ ಇಡೀ ದೇಶದ ಚಿತ್ತ ಇದೀಗ ಮತದಾನೋತ್ತರ ಸಮೀಕ್ಷೆಗಳ ಕಡೆಗೆ ನೆಟ್ಟಿದೆ. ಕಳೆದೊಂದು ತಿಂಗಳಿಂದ ಐದು ರಾಜ್ಯಗಳ ನಡೆಯುತ್ತಿದ್ದ ಚುನಾವಣೆ ಇಂದಿಗೆ ಅಂತ್ಯವಾಗಲಿದೆ. ಚುನಾವಣೆ ಐದು ರಾಜ್ಯಗಳಲ್ಲಿ ನಡೆದರೂ ಈ ಚುನಾವಣೆ ಇಡೀ ದೇಶದ ಕುತೂಹಲಕ್ಕೆ ಕಾರಣವಾಗಿತ್ತು.
ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ, ಅಸ್ಸಾಂ, ಕೇರಳದಂತಹ ರಾಜ್ಯಗಳ ಹೈವೋಲ್ಟೇಜ್ ಚುನಾವಣೆ ಎಲ್ಲರ ಆಸಕ್ತಿಗೆ ಕಾರಣವಾಗಿತ್ತು. ಇಂದು ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ಮೂಲಕ ಚುನಾವಣಾ ಉತ್ಸವಕ್ಕೆ ತೆರೆ ಬೀಳುತ್ತಿದೆ.
ಇಂದು ಸಂಜೆ 7 ಗಂಟೆ ಬಳಿಕ ಎಕ್ಸಿಟ್ ಪೋಲ್ ಬಿಡುಗಡೆಯಾಗಲಿದ್ದು, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದಚೇರಿ ರಾಜ್ಯಗಳ ಜನರ ಮನಸ್ಸಿನಲ್ಲಿ ಯಾರಿದ್ದರು ಎನ್ನುವ ಬಗ್ಗೆ ಒಂದು ಸುಳಿವು ಸಿಗಲಿದೆ.
ಚುನಾವಣೋತ್ತರ ಸಮೀಕ್ಷೆ ಎನ್ನುವುದು ಮತದಾನ ಮುಗಿದ ನಂತರ ನಡೆಸುವ ಪ್ರಕ್ರಿಯೆಯಾಗಿದೆ. ಮತದಾರರು ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿ ಹೊರಬಂದ ತಕ್ಷಣ ಸಮೀಕ್ಷಕರು ಅವರನ್ನು ಭೇಟಿ ಮಾಡಿ ನೀವು ಯಾರಿಗೆ ಮತ ಹಾಕಿದ್ದೀರಿ? ಎಂದು ಕೇಳುತ್ತಾರೆ. ಇಲ್ಲಿ ವ್ಯಕ್ತಿ ಈಗಾಗಲೇ ಮತದಾನದ ಕ್ರಿಯೆಯನ್ನು ಮುಗಿಸಿರುವುದರಿಂದ, ಈ ಮಾಹಿತಿ ಹೆಚ್ಚು ನಿಖರವಾಗಿರುವ ಸಾಧ್ಯತೆ ಇರುತ್ತದೆ.
ಈ ಸಮೀಕ್ಷೆಗಳು ಮತದಾರರ ವಯಸ್ಸು, ಲಿಂಗ ಮತ್ತು ಜಾತಿಯಂತಹ ಜನಸಂಖ್ಯಾ ದತ್ತಾಂಶಗಳನ್ನು ಸಹ ಸಂಗ್ರಹಿಸುತ್ತವೆ. ಇದು ಯಾವ ವರ್ಗದ ಮತಗಳು ಯಾರ ಪರವಾಗಿ ಬಿದ್ದಿವೆ ಎಂದು ವಿಶ್ಲೇಷಿಸಲು ಸಹಾಯ ಮಾಡುತ್ತದೆ. ಹೀಗಾಗೀ ಈ ಸಮೀಕ್ಷೆಯೂ ಅಂತಿಮ ಫಲಿತಾಂಶಕ್ಕೆ ಹತ್ತಿರವಾಗಿರುತ್ತದೆ.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ಬಿಜೆಪಿ, ಕೇರಳದಲ್ಲಿ ಎಲ್‌ಡಿಎಫ್ ಮತ್ತು ಯುಡಿಎಫ್, ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಪೈಪೊಟಿ ಇದ್ದು, ತಮಿಳುನಾಡಿನಲ್ಲಿ ಡಿಎಂಕೆ, ಎಐಡಿಎಂಕೆ ಮತ್ತು ಟಿವಿಕೆ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
