ತರೀಕೆರೆ,ಏ.3- ತಾಲೂಕಿನ ದೋರನಾಳು ಗ್ರಾಮದ ಬಳಿ ಇರುವ ಕಿತ್ತೂರು ರಾಣಿ ಚೆನ್ನಮ ವಸತಿ ಶಾಲೆ (ಹೆಚ್. ರಂಗಾಪುರ) ವಸತಿ ಶಾಲಾ ಆವರಣದಲ್ಲಿ ಸರ್ಕಾರ ವಿತರಿಸುವ ಗೋಧಿಯನ್ನು ಅಕ್ರಮವಾಗಿ ಹೂತು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮೂಟೆ ಮೂಟೆ ಗೋಧಿ ಚೀಲಗಳು ಪತ್ತೆಯಾಗಿದೆ.
ವಿಶ್ವಮಾನವ ಡಾ. ಭೀಮರಾವ್ ಅಂಬೇಡ್ಕರ್ ರಕ್ಷಣಾ ವೇಧಿಕೆ ರಾಜ್ಯ ಉಪಾಧ್ಯಕ್ಷ ಶಿವಮೂರ್ತಿ.ಎಸ್ ನೀಡಿದ ಸುಳಿವಿನ ಮೇರೆಗೆ ಹಾಗೂ ಜಿಲ್ಲಾ ಸಮನ್ವಯಾಧಿಕಾರಿಗಳ ಆದೇಶದ ಮೇರೆಗೆ ಪ್ರಾಂಶುಪಾಲರಾದ ಶೈಲಾ, ನಿಲಯಪಾಲಕ ಬಿ.ಎಂ.ರವಿ ಹಾಗೂ ವಸತಿ ಶಾಲಾ ಎಲ್ಲಾ ಸಿಬ್ಬಂದಿಗಳು ದೂರುದಾರನು ತೋರಿಸಿದ ಸ್ಥಳದಲ್ಲಿ ಸುಮಾರು ಮೂರು – ನಾಲ್ಕು ಅಡಿ ಆಳದಲ್ಲಿ ಗೋಧಿ ತುಂಬಿರುವ ಚೀಲಗಳು ಪತ್ತೆಯಾಗಿವೆ.
ಗುಂಡಿಯಲ್ಲಿ ಸುಮಾರು 70ರಿಂದ 80 ಗೋಧಿ ತುಂಬಿರುವ ಚೀಲಗಳು ಕಂಡುಬಂದಿವೆ. ಇದು ವಸತಿ ಶಾಲಾ ಆಡಳಿತದ ನಿರ್ಲಕ್ಷ್ಯ ಹಾಗೂ ದುರುದ್ದೇಶದ ಮೇಲೆ ಗಂಭೀರ ಅನುಮಾನಗಳನ್ನು ಹುಟ್ಟು ಹಾಕಿದೆ.
ಜಿಲ್ಲಾ ಸಮನ್ವಯಾಧಿಕಾರಿ (ಡಿಸಿಓ) ಅಜ್ಜಪ್ಪ ಅವರನ್ನು ತನಿಖಾಧಿಕಾರಿಯಾಗಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಾಲತಿ ರವರ ಆದೇಶದ ಮೇರೆಗೆ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಈ ಬಗ್ಗೆ ವಸತಿ ಶಾಲೆಯ ಎಲ್ಲಾ ಸಿಬ್ಬಂಧಿಗಳು ಎಲ್ಲಾ ನಿಲಯ ಪಾಲಕರನ್ನು ವಿಚಾರಿಸಲಾಗಿ ಯಾರೂ ಸಹ ತಮ ತಮ ಅವಧಿಯಲ್ಲಿ ಯಾವುದೇ ಆಹಾರ ಪಧಾರ್ಥಗಳನ್ನು ಹೂತು ಹಾಕಿಲ್ಲ ಎಂದು ತಿಳಿಸಿದ್ದಾರೆ.
ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದ್ದು ವಿದ್ಯಾರ್ಥಿಗಳ ಅನ್ನವನ್ನೇ ಕಬಳಿಸುವ ತಂತ್ರ ನಡೆದಿದೆ. ಈ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಸಮಾಜ ಕಲ್ಯಾಣ ಇಲಾಖೆ ಕ್ರೃಸ್ ವಸತಿ ಶಾಲೆಗಳಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಮಕ್ಕಳಲ್ಲಿ ಹೆಚ್ಚಿನದಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮಕ್ಕಳು ಓದುತ್ತಿದ್ದಾರೆ. ಇವರಿಗೆ ಆಹಾರಕ್ಕಾಗಿ ನೀಡಿದ ಪದಾರ್ಥಗಳನ್ನು ಹೀಗೆ ಮಣ್ಣುಪಾಲು ಮಾಡಿರುವುದು ಸರ್ಕಾರಕ್ಕೆ ಮತ್ತು ಮಕ್ಕಳಿಗೆ ಮಾಡಿದ ದ್ರೋಹ ಎಂದು ಶಿವಮೂರ್ತಿ.ಎಸ್ ಖಂಡಿಸಿದ್ದಾರೆ.
ಪ್ರಕರಣವನ್ನು ಮುಚ್ಚಿ ಹಾಕಲು ಇಲ್ಲಿವರೆಗೂ ಪ್ರಯತ್ನಿಸಿದವರಿಗೂ ಸೂಕ್ತ ಕ್ರಮ ಕೈಗೊಂಡು ಕೆಲಸದಿಂದ ವಜಾ ಮಾಡಬೇಕೆಂದು ಜಿಲ್ಲಾಧಿಕಾರಿಯವರಿಗೆ , ಸಿ.ಇ.ಓ ರವರಿಗೆ ಹಾಗೂ ಸಮಾಜ ಕಲ್ಯಾಣ ಉಪನಿರ್ದೇಶಕರಿಗೆ ದೂರು ನೀಡಿದ್ದರಿಂದ ಪ್ರಕರಣ ಹೊರಬಂದಿದ್ದು ತಪ್ಪಿತಸ್ಥ ಅಧಿಕಾರಿಗಳಿಗೆ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಉತ್ಖನನ ಸಂದರ್ಭದಲ್ಲಿ ದಲಿತಸಂಘಟನೆ ಮುಖಂಡರಾದ ಪ್ರದೀಪ್ ಹೆಚ್.ಈ., ರಮೇಶ್ ಕರಕುಚ್ಚಿ, ನಿಲಯಪಾಲಕ ಬಿ.ಎಂ. ರವಿ, ಶಿಕ್ಷಕರಾದ ಲಿಂಗರಾಜು, ಮಂಜುನಾಥ, ರಾಣಿ, ಶಶಿಕುಮಾರ್, ಶುಶ್ರೂಷಕಿ ಆಯಿಷಾ ಬೇಗಂ, ಕಾವ್ಯಾ, ಅನುಷಾ ಹಾಗೂ ಸಿಬ್ಬಂದಿ ವರ್ಗದವರು ವಸತಿ ಶಾಲಾ ಮಕ್ಕಳು ಉಪಸ್ಥಿತರಿದ್ದರೆಂದು ಶಿವಮೂರ್ತಿ ತಿಳಿಸಿದ್ದಾರೆ.
