ಬೆಂಗಳೂರು,ಮೇ 2- ಕ್ಷುಲ್ಲಕ ಕಾರಣಕ್ಕೆ ಮಗನ ಜೊತೆ ಜಗಳವಾಡಿದ ತಂದೆಯೇ ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ತಂದೆಯ ಕೋಪಕ್ಕೆ ಒಳಗಾಗಿ ಸುಟ್ಟ ಗಾಯಗಳಿಂದ ಮಗ ಮಲ್ಲಿಕಾರ್ಜುನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಬನಶಂಕರಿ 2ನೇ ಹಂತ, ಪ್ರಗತಿಪುರ 8ನೇ ಅಡ್ಡ ರಸ್ತೆ ಓಂ ಶಕ್ತಿ ದೇವಸ್ಥಾನ ಸಮೀಪದ ನಿವಾಸಿ ಆನಂದ ದೊಡ್ಡಮನಿ, ಈರಮ ದಂಪತಿಗೆ ಮಲ್ಲಿಕಾರ್ಜುನ ಮತ್ತು ಪರಮೇಶ್ ಎಂಬ ಇಬ್ಬರು ಮಕ್ಕಳಿದ್ದಾರೆ.
ಆನಂದ ದೊಡ್ಡಮನಿ ಗಾರೆ ಕೆಲಸ ಮಾಡಿಕೊಂಡಿದ್ದು, ಮಗ ಮಲ್ಲಿಕಾರ್ಜುನ ಟೈಲ್‌್ಸ ಕೆಲಸ ಮಾಡುತ್ತಾರೆ. ಮತ್ತೊಬ್ಬ ಮಗ ಮನೆಯಲ್ಲಿಯೇ ಇರುತ್ತಾನೆ.ನಿನ್ನೆ ಕಾರ್ಮಿಕರ ದಿನಾಚರಣೆ ನಿಮಿತ್ತ ರಜೆ ಇದ್ದ ಕಾರಣ ಮಲ್ಲಿಕಾರ್ಜುನ ಅಪ್ಪನ ಬೈಕ್ ತೆಗೆದುಕೊಂಡು ಸಂಜೆ 4 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಹೋಗಿದ್ದಾನೆ.
ಮಗ ಹೊರಗೆ ಹೋಗಿರುವುದು ತಿಳಿದು ಅಪ್ಪ ಮಗನಿಗೆ ಕರೆ ಮಾಡಿ ಪೋಲಿ ಹುಡುಗರ ಜೊತೆ ಸುತ್ತಾಡಲು ಹೋಗಿದ್ದೀಯಾ ಎಂದು ಬೈದಿದ್ದಾರೆ. ನಾನು ದೇವಸ್ಥಾನಕ್ಕೆ ಬಂದಿದ್ದೇನೆಂದು ವಿಡಿಯೋ ಮಾಡಿ ತೋರಿಸಿದ್ದಾನೆ.
ರಾತ್ರಿ ದೇವಸ್ಥಾನದಿಂದ 7.30ರ ಸುಮಾರಿಗೆ ಮಲ್ಲಿಕಾರ್ಜುನ ಮನೆಗೆ ಬಂದು ಊಟ ಮಾಡಲು ಕುಳಿತಿದ್ದಾನೆ. ಆ ಸಂದರ್ಭದಲ್ಲಿ ಅಪ್ಪ ನನ್ನ ಬೈಕ್ ತೆಗೆದುಕೊಂಡು ಪೋಲಿ ಹುಡುಗರ ಜೊತೆ ಸುತ್ತಾಡಲು ಹೋಗಿದ್ದೀಯಾ ಎಂದು ಅವಾಚ್ಯ ಶಬ್ದಗಳಿಂದ ಬೈದು ಹೊಡೆದಿದ್ದಾರೆ.
ಇದರಿಂದ ಕೋಪಗೊಂಡ ಮಗ ಊಟ ಮಾಡುವುದನ್ನು ಬಿಟ್ಟು ಹೊರಗೆ ಹೋಗಿ ಬೈಕ್‌ನಲ್ಲಿ ಕುಳಿತಿದ್ದಾನೆ. ಅಷ್ಟಕ್ಕೆ ಸುಮನಾಗದ ಅಪ್ಪ 9.30 ರ ಸುಮಾರಿನಲ್ಲಿ ಹೊರಗೆ ಹೋಗಿ ನನ್ನ ಬೈಕ್ ಕೀ ಕೊಡು ಎಂದು ಮತ್ತೆ ಆತನ ಜೊತೆ ಜಗಳವಾಡಿ ತಲೆಗೆ ಕೈಗಳಿಂದ ಹೊಡೆದು ಕೀ ಕಿತ್ತುಕೊಂಡು ಒಳಗೆ ಹೋಗಿದ್ದಾನೆ.
ಮಗ ತನ್ನ ದುಡ್ಡಲ್ಲೇ ಪೆಟ್ರೋಲ್ ಹಾಕಿಸಿಕೊಂಡು ಹೊರಗೆ ಹೋಗಲು ಬೈಕ್ ಕೊಡುತ್ತಿದ್ದರು. ಬೈಕ್ ತೆಗೆದುಕೊಂಡು ಸುತ್ತಾಡುತ್ತಾನೆಂದು ಯಾವಾಗಲೂ ಆನಂದ ದೊಡ್ಡಮನಿ ತಮ ಬೈಕ್‌ನಿಂದ ಪೆಟ್ರೋಲ್ ತೆಗೆದು ಒಂದು ಬಾಟಲ್‌ನಲ್ಲಿ ತುಂಬಿಸಿಡುತ್ತಾರೆ.
ನಿನ್ನೆ ರಾತ್ರಿ ಮನೆಯಲ್ಲಿ ಬಾಟಲಿಯಲ್ಲಿ ತುಂಬಿಸಿಟ್ಟಿದ್ದ ಪೆಟ್ರೋಲ್‌ನನ್ನು ಮಗನ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆೆ. ಇದರಿಂದ ಮಲ್ಲಿಕಾರ್ಜುನ ಚೀರಾಡುತ್ತಿದ್ದಾಗ ಅಕ್ಕಪಕ್ಕದವರು ತಕ್ಷಣ ಸಹಾಯಕ್ಕೆ ಬಂದು ಬೆಂಕಿಯನ್ನು ನಂದಿಸಿ ಆಟೋದಲ್ಲಿ ಸಂಜಯ್‌ಗಾಂಧಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಬೆಂಕಿ ಹಚ್ಚಿದ ಸಂದರ್ಭದಲ್ಲಿ ಆನಂದ ದೊಡ್ಡಮನಿಯ ಕೈಗೆ ಸುಟ್ಟ ಗಾಯವಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆೆ.ಈ ಬಗ್ಗೆ ಮಲ್ಲಿಕಾರ್ಜುನ ಅವರ ತಾಯಿ ಪೊಲೀಸರಿಗೆ ತನ್ನ ಗಂಡನ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
