ಗುರುಗ್ರಾಮ, ಮೇ 3 (ಪಿಟಿಐ):ಕೌಟುಂಬಿಕ ಕಲಹದಲ್ಲಿ ಮನೆಯಲ್ಲೇ ಪತ್ನಿ ಹಾಗೂ ನಾಲ್ಕು ಮಕ್ಕಳನ್ನು ಕೊಲೆ ಮಾಡಿದ ಬಳಿಕ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಭೀಕರ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ .
ವಾಜಿರ್ಪುರ ಗ್ರಾಮದಲ್ಲಿ ಕಳೆದ ರಾತ್ರಿ ಈ ಘಟನೆ ಸಂಭವಿಸಿದೆ. ರಾತ್ರಿ ಸುಮಾರು 9.30ಕ್ಕೆ ಮನೆಗೆ ಬಂದ ವ್ಯಕ್ತಿಯ ಸಹೋದರನು ಮೊದಲ ಮಹಡಿಯಲ್ಲಿ ಕುಟುಂಬದ ಸದಸ್ಯರು ಅಸ್ವಸ್ಥ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣ ಆಸ್ಪತ್ರೆಗೆ ಕರೆದೊಯ್ದನು. ಆದರೆ ವೈದ್ಯರು ಪತ್ನಿ ಹಾಗೂ ನಾಲ್ಕು ಮಕ್ಕಳನ್ನು ಮೃತಪಟ್ಟಿದ್ದಾರೆಂದು ಘೋಷಿಸಿದರು.
ಪೊಲೀಸರ ಪ್ರಕಾರ, ಆರೋಪಿಯನ್ನು ನಜೀಂ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶ ಮೂಲದ ಆತ ಕ್ಷೌರಿಕ ಅಂಗಡಿ ನಡೆಸುತ್ತಿದ್ದ. ಅತನ ಕೌರ್ಯಕ್ಕೆ ಪತ್ನಿ ನಜಾ (35) ಹಾಗೂ ಮಕ್ಕಳು ಇಕ್ರಾ (14), ಶಿಫಾ (11), ಆರಾಮ್ (9) ಮತ್ತು ಖತೀಜಾ (6) ಬಲಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ವಿಷ ನೀಡಿದೆಯೋ ಅಥವಾ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೋ ಎಂಬುದು ತನಿಖೆಯಲ್ಲಿ ಸ್ಪಷ್ಟವಾಗಬೇಕಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ ನವೀನ್ ಶರ್ಮಾ ತಿಳಿಸಿದ್ದಾರೆ.
