ಬೆಂಗಳೂರು,ಏ.5- ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಎಲ್ಲಾ ವಲಯಗಳ ಮೇಲೂ ಬೀರಿದ್ದು, ವಾಣಿಜ್ಯ ಸಿಲಿಂಡರ್, ಆಟೋ ಎಲ್‌ಪಿಜಿ ಸಿಗುತ್ತಿಲ್ಲ. ಹೋಟೆಲ್, ಪಿಜಿ, ಕ್ಯಾಂಟೀನ್‌ಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಪಾತಾಳ ತಲುಪಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಾಣಿಜ್ಯ ಬಳಕೆ ಸಿಲಿಂಡರ್ ಅಭಾವದಿಂದ ಬಹುತೇಕ ಹೋಟೆಲ್‌ಗಳು, ಪಿಜಿಗಳು, ಕ್ಯಾಂಟೀನ್‌ಗಳು ಬಾಗಿಲು ಮುಚ್ಚಿದ್ದು, ಮಾರುಕಟ್ಟೆಗಳಲ್ಲಿ ತರಕಾರಿ ಕೇಳುವವರಿಲ್ಲದೆ ವ್ಯಾಪಾರಿಗಳು ಹಾಗೂ ರೈತರು ತೀವ್ರ ಕಂಗಾಲಾಗಿದ್ದಾರೆ.
ದಿನದಿಂದ ದಿನಕ್ಕೆ ರಂಗೇರುತ್ತಿರುವ ಬಿಸಿಲಿನ ತಾಪ ಹಾಗೂ ನೀರು, ವಿದ್ಯುತ್ ಅಭಾವದ ನಡುವೆಯೂ ಕಷ್ಟಪಟ್ಟು ಬೆಳೆದ ಬೆಳೆಗೆ ಬೆಲೆ ಸಿಗದೆ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.ತರಕಾರಿ ವ್ಯಾಪಾರ ಶೇ.70 ರಷ್ಟು ಕುಸಿದಿದ್ದು, ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಕಣ್ಣೀರು ಹಾಕುವಂತಾಗಿದೆ.
ಬಹುತೇಕ ತರಕಾರಿಗಳ ಬೆಲೆ ಕುಸಿದಿದೆ. ತರಕಾರಿಗಳ ಬೆಲೆ ನೋಡುವುದಾದರೆ ಕ್ಯಾರೆಟ್ ಕೆಜಿಗೆ 30 ರೂ., ನವಿಲುಕೋಸು 30 ರೂ., ಬೀಟರೂಟ್ 30 ರೂ., ಬದನೆಕಾಯಿ 25 ರೂ., ಆಲೂಗಡ್ಡೆ 20 ರೂ., ಟೊಮ್ಯಾಟೊ 10 ರೂ., ಈರುಳ್ಳಿ 20 ರೂ., ಹುರಳಿಕಾಯಿ 40 ರೂ., ಕ್ಯಾಪ್ಸಿಕಂ 50 ರೂ., ನುಗ್ಗೆಕಾಯಿ 50 ರೂ., ಬೆಂಡೆಕಾಯಿ 30 ರೂ., ಎಲೆಕೋಸು 30 ರೂ, ಸೌತೆಕಾಯಿ 30 ರೂ., ಹಸಿಮೆಣಸಿನಕಾಯಿ 80 ರೂ.ಗೆ ಚಿಲ್ಲರೆಯಾಗಿ ಮಾರಾಟವಾಗುತ್ತಿದ್ದರೆ, ಮಾರುಕಟ್ಟೆಗಳಲ್ಲಿ ಇನ್ನೂ ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು ಕಟಾವು ಮಾಡಿ ಮಾರುಕಟ್ಟೆಗೆ ತಂದ ಕೂಲಿ ಸಾಗಾಟದ ವೆಚ್ಚವೂ ಕೂಡ ಬಾರದಂತಾಗಿದ್ದು, ಬಹುತೇಕ ರೈತರು ತರಕಾರಿ ಕಟಾವು ಮಾಡದೇ ಹಾಗೆಯೇ ಬಿಟ್ಟಿದ್ದಾರೆ.
ತುಮಕೂರು ತರಕಾರಿ ಮಾರುಕಟ್ಟೆಯಿಂದ ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರರಾಜ್ಯಗಳಿಗೂ ಸರಬರಾಜಾಗುತ್ತಿತ್ತು. ಆದರೆ ಕಳೆದ ಒಂದು ತಿಂಗಳಿನಿಂದ ವ್ಯಾಪಾರಿಗಳು ಇತ್ತ ಕಾಲಿಡುತ್ತಿಲ್ಲ.
ಇದರಿಂದ ವರ್ತಕರು, ದಲ್ಲಾಳಿಗಳು, ಹಮಾಲಿಗಳು ಮತ್ತು ರೈತರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಒಂದು ರೀತಿಯಲ್ಲಿ ಲಾಕ್‌ಡೌನ್ ಪರಿಸ್ಥಿತಿ ನಿರ್ಮಾಣವಾದಂತಾಗಿದೆ ಎಂದು ತುಮಕೂರಿನ ಶ್ರೀ ಸಿದ್ದಿ ವಿನಾಯಕ ತರಕಾರಿ ಮಾರುಕಟ್ಟೆಯ ವ್ಯಾಪಾರಿ ಬಸವಲಿಂಗಪ್ಪ ಅಳಲು ತೋಡಿಕೊಂಡಿದ್ದಾರೆ.
ಇದು ಕೇವಲ ತುಮಕೂರು ಮಾರುಕಟ್ಟೆಯ ಚಿತ್ರಣವಲ್ಲ. ಬೆಂಗಳೂರು, ಕೋಲಾರ, ಮೈಸೂರು, ಹುಬ್ಬಳ್ಳಿ, ಧಾರವಾಡ, ಚಿತ್ರದುರ್ಗ, ದಾವಣಗೆರೆ, ರಾಮನಗರ, ಚಿಕ್ಕಬಳ್ಳಾಪುರ, ಬಳ್ಳಾರಿ, ರಾಯಚೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲೂ ತರಕಾರಿ ರಫ್ತು ವಹಿವಾಟು ಸ್ಥಗಿತಗೊಂಡಿದ್ದು ಭಾರೀ ತೊಂದರೆ ಎದುರಾಗಿದೆ.ಇದೇ ಪರಿಸ್ಥಿತಿ ಮುಂದುವರೆದರೆ ಮುಂದೇನು ಎಂಬ ಆತಂಕ ರೈತರು, ವ್ಯಾಪಾರಿಗಳಲ್ಲಿ ಮನೆಮಾಡಿದೆ.
