ಮಂಡ್ಯ/ಮಳವಳ್ಳಿ,ಏ.6- ತಾಲೂಕಿನ ಒಂಟಿ ಮನೆ ಮೇಲೆ ಮುಂಜಾನೆ ದಾಳಿ ಮಾಡಿರುವ ಡಕಾಯಿತರ ತಂಡ ಮನೆಯ ಮುಂದೆ ಕಟ್ಟಿ ಹಾಕಿದ್ದ ನಾಯಿಯನ್ನು ಗುಂಡು ಹಾರಿಸಿ ಹತ್ಯೆಗೈದು , ಆತಂಕ ಸೃಷ್ಟಿಸಿ ಪರಾರಿಯಾಗಿರುವ ಆತಂಕಕಾರಿ ಘಟನೆ ಮಳವಳ್ಳಿ ಪಟ್ಟಣಕ್ಕೆ ಸಮೀಪದ ಶೆಟ್ಟಹಳ್ಳಿ ಗ್ರಾಮದಲ್ಲಿ ಜರುಗಿದೆ.
ಈ ಗ್ರಾಮದ ಮೈಸೂರು ರಸ್ತೆಯಲ್ಲಿ ಇರುವ ರಾಚಯ್ಯ ಎಂಬುವರ ಮಗ ಶಿವಕುಮಾರ್ ಅವರ ಮನೆಯ ಮೇಲೆ ಸೋಮವಾರ ಮುಂಜಾನೆ ಎರಡು ಗಂಟೆ ಸಮಯದಲ್ಲಿ ಒಂದೇ ಬೈಕ್ನಲ್ಲಿ ಬಂದು ದಾಳಿ ಮಾಡಿರುವ ಮೂವರ ಡಕಾಯಿತರ ತಂಡ ಮೊದಲಿಗೆ ಬಾಗಿಲು ತೆಗೆಯುವಂತೆ ಮನೆಯವರನ್ನು ಬೆದರಿಸಿದ್ದಾರೆ.
ಬಾಗಿಲು ತೆಗೆಯದಿದ್ದಾಗ ಮನೆಯ ಮುಂದೆ ಕಟ್ಟಿ ಹಾಕಿದ್ದ ಸಾಕುನಾಯಿಯನ್ನು ಗುಂಡು ಹಾರಿಸಿ ಕೊಂದಿದ್ದಾರೆ. ನಂತರ ಹೊರಟು ಹೋದವರಂತೆ ನಾಟಕವಾಡಿ ಸ್ವಲ್ಪ ದೂರ ಬೈಕ್ನಲ್ಲಿ ತೆರಳಿದ ದುಷ್ಕರ್ಮಿಗಳು ಮತ್ತೆ ವಾಪಸ್ ಬಂದಿದ್ದು ಅಷ್ಟರಲ್ಲಿ ನಾಯಿ ನೋಡಲು ಹೊರಗೆ ಬಂದಿದ್ದ ಕುಟುಂಬದವರು ಡಕಾಯಿತರು ವಾಪಸ್ ಬರುವುದನ್ನು ಕಂಡು ಕೂಡಲೇ ಮನೆ ಸೇರಿಕೊಂಡು ಬಾಗಿಲು ಹಾಕಿಕೊಂಡಿದ್ದಾರೆ.
ಮತ್ತೆ ಮನೆ ಬಳಿ ಬಂದ ಆರೋಪಿಗಳು ಬಾಗಿಲು ತೆಗೆಯುವಂತೆ ಬೆದರಿಕೆ ಹಾಕಿದ್ದು ಬಾಗಿಲು ತೆಗೆದಿದ್ದಾಗ ಕಿಟಕಿ ಮೂಲಕ ಎರಡು ಸುತ್ತು ಗುಂಡು ಹಾರಿಸಿ ಬೆದರಿಸಿದ್ದಾರೆ. ಇದರಿಂದ ಕಿಟಕಿಯ ಗಾಜುಗಳು ಪುಡಿಪುಡಿಯಾಗಿದ್ದು ಇದರಿಂದ ಭಯಗ್ರಸ್ಥರಾದ ಮನೆಯವರು ರಕ್ಷಣೆಗಾಗಿ ಜೋರಾಗಿ ಕಿರಿಚಾಡುತ್ತಿದ್ದಂತೆ ಆಕ್ರೋಶಿತರಾದ ದುಷ್ಕರ್ಮಿಗಳು ಮನೆಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಸುಮಾರು 25 ರಿಂದ 30 ವರ್ಷ ವಯಸ್ಸಿನ ಮೂವರು ದುಷ್ಕರ್ಮಿಗಳು ಒಂದೇ ಬೈಕ್ನಲ್ಲಿ ಬಂದಿದ್ದು ಮುಖಕ್ಕೆ ಬ್ಯಾಟರಿ ಚಾಲಿತ ಹೆಲೆಟ್ ಹಾಕಿಕೊಂಡಿದ್ದರು ಮತ್ತು ಸ್ಥಳೀಯ ಕನ್ನಡ ಭಾಷೆಯಲ್ಲಿ ಮಾತನಾಡುತ್ತಾ ನಮನ್ನು ಬೈಯ್ಯುತ್ತಿದ್ದರು ಎಂದು ಮನೆಯ ಮಾಲೀಕ ಶಿವಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ನಡೆದ ಕೂಡಲೇ ಎಮರ್ಜೆನ್ಸಿ ಹೆಲ್್ಪಲೈನ್ ನಂಬರ್ 112 ಪೊಲೀಸರಿಗೆ ಹಾಗೂ ಮಂಡ್ಯ ಎಸ್ಪಿ ಅವರಿಗೆ ಶಿವಕುಮಾರ ಅವರು ಮಾಹಿತಿ ನೀಡಿದ್ದು ತಕ್ಷಣ ಪೊಲೀಸರು ಸುತ್ತುವರಿದು ಆರೋಪಿಗಳಿಗಾಗಿ ಶೋಧ ನಡೆಸಿದರಾದರೂ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸುದ್ದಿ ತಿಳಿದು ರಾತ್ರಿಯೇ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಡಿವೈಎಸ್ಪಿ ಯಶವಂತ್ ಕುಮಾರ್, ಇನ್ಸ್ಪೆಕ್ಟರ್ ಬಸವರಾಜು ಅವರುಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
