ಬೆಂಗಳೂರು, ಏ.6- ಗ್ಯಾಸ್ ಸಮಸ್ಯೆಯಿಂದ ಬೇಸತ್ತ ಆಟೋ ಚಾಲಕರು ಇಂದು ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಅವರ ಮನೆಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು.
ಮುಂಜಾನೆ 4 ಗಂಟೆಯಿಂದಲೂ ಕಾದು ಕುಳಿತಿದ್ದರೂ ಗ್ಯಾಸ್ ಲಭ್ಯವಾಗುತ್ತಿಲ್ಲ. 10 ಲೀ. ಬದಲಾಗಿ 5 ಲೀ. ಭರ್ತಿ ಮಾಡಲಾಗುತ್ತಿದೆ. ಅದರಲ್ಲೂ ಖಾಸಗಿ ಬಂಕ್ಗಳು ದರವನ್ನು ಹೆಚ್ಚಿಸಿವೆ ಎಂದು ಆಟೋ ಚಾಲಕರು ಆಕ್ರೋಶಗೊಂಡಿದ್ದು, ಸಮಸ್ಯೆ ಬಗೆ ಹರಿಸುವಂತೆ ಇಂದು ಸಚಿವ ಮುನಿಯಪ್ಪ ಅವರ ಮನೆಯ ಮುಂದೆ ಜಮಾಯಿಸಿದರು. ನೂರಾರು ಆಟೋಗಳು ಸಚಿವರ ಮನೆ ಎದುರು ಸಾಲುಗಟ್ಟಿ ನಿಂತಿದ್ದವು.
ಈ ವೇಳೆ ಆಟೋ ಚಾಲಕರನ್ನು ಭೇಟಿ ಮಾಡಿದ ಸಚಿವ ಮುನಿಯಪ್ಪ, ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯ ಜವಾಬ್ದಾರಿ ಸಂಪೂರ್ಣ ಕೇಂದ್ರ ಸರ್ಕಾರದ್ದಾಗಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಅಸಹಾಯಕವಾಗಿದೆ. ನಾವು ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಸಲಹೆ ನೀಡಬಹುದಷ್ಟೆ. ಯಾವುದೇ ರೀತಿಯ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಸಮರ್ಪಕ ಪೂರೈಕೆಯಾದರೆ ಅದನ್ನು ಗ್ರಾಹಕರಿಗೆ ಸರಬರಾಜು ಮಾಡುವ ನೋಡಲ್ ಏಜನ್ಸಿಯಂತೆ ಮಾತ್ರ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ ಎಂದು ವಿವರಣೆ ನೀಡಿದ್ದಾರೆ.
ಆಟೋ ಚಾಲಕರು ಪ್ರತಿಭಟನೆ ಮಾಡುವುದಾದರೆ, ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಮನೆಗೆ ಹೋಗಿ ಪ್ರತಿಭಟಿಸಬೇಕು. ನಮ ಬಳಿ ಅಧಿಕಾರದ ವ್ಯಾಪ್ತಿ ಸೀಮಿತವಾಗಿದೆ ಎಂದು ಹೇಳಿದ್ದಾರೆ. ಆದರೆ ಇದಕ್ಕೆ ಸಮಾಧಾನಗೊಳ್ಳದ ಆಟೋಚಾಲಕರು, ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಬೇಕು. ಆಟೋ ಚಾಲಕರ ಕಷ್ಟಕ್ಕೆ ಸ್ಪಂದಿಸಬೇಕು. ಅವೈಜ್ಞಾನಿಕವಾದ ದರ ಏರಿಕೆಗೆ ಕಡಿವಾಣ ಹಾಕಬೇಕು, ಸಮರ್ಪಕ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದಿದ್ದಾರೆ.
ಪೆಟ್ರೋಲ್ ಬಂಕ್, ಗ್ಯಾಸ್ ಬಂಕ್ಗಳಿಗೆ ಲೈಸೆನ್ಸ್ ನೀಡುವುದು ಕೇಂದ್ರ ಸರ್ಕಾರ. ಅವುಗಳಿಗೆ ಪೆಟ್ರೋಲ್, ಡೀಸೆಲ್, ಗ್ಯಾಸ್ ಪೂರೈಕೆ ಕೂಡ ಕೇಂದ್ರ ಸರ್ಕಾರ ಅಧೀನದಲ್ಲಿದೆ. ರಾಜ್ಯ ಸರ್ಕಾರ ಕೇವಲ ಉಸ್ತುವಾರಿ ಮಾತ್ರ ನೋಡಿಕೊಳ್ಳುತ್ತದೆ ಎಂದು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ.
ಆಟೋ ಚಾಲಕರು ತಮ ಕಷ್ಟಗಳಿಗೆ ಸ್ಪಂದಿಸುವಂತೆ ಪದೇ ಪದೇ ಮನವಿ ಮಾಡಿದಾಗ, ದರ ಹೆಚ್ಚಳ ಮಾಡಿರುವ ಬಗ್ಗೆ ಖಾಸಗಿ ಗ್ಯಾಸ್ ಏಜೆನ್ಸಿಗಳ ಜೊತೆ ಚರ್ಚೆ ಮಾಡಿ ಬಗೆ ಹರಿಸುವ ನಿಟ್ಟಿನಲ್ಲಿ ಇಂದು ಮಧ್ಯಾಹ್ನ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಸದ್ಯಕ್ಕೆ ಉಪಚುನಾವಣೆ ನಡೆಯುತ್ತಿದ್ದು, ಅದು ಮುಗಿದ ಬಳಿಕ ಏಪ್ರಿಲ್ 10 ರಂದು ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ತೈಲ ಕಂಪನಿಗಳ ಅಧಿಕಾರಿಗಳು, ಸಮನ್ವಯಕಾರರ ಜೊತೆ ಚರ್ಚೆ ಮಾಡಿ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ.
ಆದರೆ ಆಟೋ ಚಾಲಕರು ಸಚಿವರ ಉತ್ತರದಿಂದ ಸಮಾಧಾನಗೊಂಡಿಲ್ಲ. ಸಾವಿರಾರು ಜನ ಆಟೋ ಚಾಲಕರು ರಸ್ತೆಯಲ್ಲಿದ್ದು, ಸಮಸ್ಯೆಗೆ ಸಿಲುಕಿದ್ದಾರೆ. ದಿನದ ದುಡಿಮೆಗೆ ಪರದಾಡುವ ಪರಿಸ್ಥಿತಿ ಇದೆ. ಜನರ ಕಷ್ಟಕ್ಕೆ ಸ್ಪಂದಿಸುವ ಬದಲು ಸಚಿವರು ಉಪಚುನಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೋದಿಯನ್ನು ಭೇಟಿ ಮಾಡಿ ಎಂದು ಸಚಿವರು ಉದ್ಧಟತನದಿಂದ ಮಾತನಾಡುತ್ತಿದ್ದು, ಆಟೋ ಚಾಲಕರು ಪ್ರಧಾನಿಯವರನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆಯೇ? ಸಮಸ್ಯೆ ಎಂದು ಹೇಳಿಕೊಂಡು ಬಂದರೆ ಈ ರೀತಿ ಸಚಿವರು ವರ್ತಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಚಿವರು ತಮ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದರೆ ಏ.10ರಂದು ವಿವಿಧ ಸಂಘಟನೆಗಳ ಜೊತೆಗೂಡಿ ಆಟೋ ಚಾಲಕರು ತಮ ತಾಕತ್ತು ಏನು ಎಂದು ತೋರಿಸಬೇಕಾಗುತ್ತದೆ ಎಂದು ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಗ್ಯಾಸ್ ಟ್ರಬಲ್ಗೆ ಕೇಂದ್ರ ಕಾರಣ :
ಬೆಂಗಳೂರು, ಏ.6- ಕೇಂದ್ರ ಸರ್ಕಾರ ಈಗ ರಷ್ಯಾದಿಂದ ತೈಲೋತ್ಪನ್ನಗಳನ್ನು ಖರೀದಿಸಲು ಪ್ರಯತ್ನಿಸುತ್ತಿದೆ. ಒಂದು ತಿಂಗಳ ಮೊದಲೇ ಮುಂಜಾಗ್ರತೆಯಾಗಿ ಈ ಕ್ರಮ ಕೈಗೊಂಡಿದ್ದರೆ ದೇಶದಲ್ಲಿ ಆಟೋ ಗ್ಯಾಸ್ ಸಮಸ್ಯೆ ಇಷ್ಟು ಗಂಭೀರವಾಗುತ್ತಿರಲಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ತಮನ್ನು ಭೇಟಿ ಮಾಡಿದ ಆಟೋ ಚಾಲಕರ ನಿಯೋಗದ ಜೊತೆಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ನಡೆಯುತ್ತಿದೆ. ಜಗತ್ತಿನ್ನೆಲ್ಲೆಡೆ ಸಮಸ್ಯೆ ಸೃಷ್ಟಿಯಾಗಿದೆ ಎಂದರು.
ದೇಶದಲ್ಲಿ ಗ್ಯಾಸ್ ಅಭಾವ ಹೆಚ್ಚಾಗಿ ಜನ ತೊಂದರೆಗೆ ಸಿಲುಕಿದ ಬಳಿಕ ಭಾರತ, ರಷ್ಯಾ ಮೂಲಕ ಇಂಧನ ಖರೀದಿಗೆ ಮುಂದಾಗಿದೆ. ಇದನ್ನು ಆರಂಭದಲ್ಲೇ ಮಾಡಬಹುದಿತ್ತು. ಆಗ ಸಮಸ್ಯೆಗಳ ಪ್ರಮಾಣ ಕಡಿಮೆಯಾಗುತ್ತಿತ್ತು ಎಂದು ಸಚಿವರು ಹೇಳಿದ್ದಾರೆ.
ಆಟೋ ಚಾಲಕರ ಗ್ಯಾಸ್ ಕೊರತೆಯನ್ನು ಬಗೆ ಹರಿಸಲು ಆದ್ಯತೆಯ ಮೇರೆಗೆ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತೇನೆ. ಶೇ.100 ರಷ್ಟು ಆಟೋ ಗ್ಯಾಸ್ ಪೂರೈಕೆಗೆ ಕೇಂದ್ರ ಸರ್ಕಾರದ ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.
ಇಂದು ಮಧ್ಯಾಹ್ನ ಖಾಸಗಿ ಬಂಕ್ಗಳ ಮಾಲಿಕರ ಜೊತೆ ಚರ್ಚೆ ಮಾಡಿ, ಬೆಲೆ ಏರಿಕೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಆಟೋ ಚಾಲಕರು ತಮ ಬಳಿ ಬಂದಿದ್ದು, ಅವರಿಗೆ ವಾಸ್ತವ ಸ್ಥಿತಿಗಳನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದು ಹೇಳಿದರು.
ಈಗಾಗಲೇ ಗೃಹ ಬಳಕೆಯ ಸಿಲಿಂಡರ್ಗಳನ್ನು ಸಮರ್ಪಕವಾಗಿ ಪೂರೈಸಲಾಗುತ್ತಿದೆ. ಆಟೋ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.
