Thursday, April 16, 2026
Homeರಾಜ್ಯಮೈಸೂರಲ್ಲಿ ಏ. 19 ರಿಂದ 27 ರವರೆಗೆ ಅಗ್ನಿವೀರ್‌ ರ‍್ಯಾಲಿ

ಮೈಸೂರಲ್ಲಿ ಏ. 19 ರಿಂದ 27 ರವರೆಗೆ ಅಗ್ನಿವೀರ್‌ ರ‍್ಯಾಲಿ

Mysuru: 6,235 candidates to take part in Agniveer rally from April 19

ಮೈಸೂರು,ಏ.7- ನಗರದ ನಜರಬಾದ್‌ನಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಏ.19 ರಿಂದ 27 ರವರೆಗೆ ಅಗ್ನಿವೀರ್‌ ರ್ಯಾಲಿ ನಡೆಯಲಿದೆ ಎಂದು ಬೆಂಗಳೂರಿನ ಭಾರತೀಯ ಸೇನೆ ನೇಮಕಾತಿ ಅಧಿಕಾರಿ ಕರ್ನಲ್‌ ವಿವೇಕ್‌ ಜಮದರ್‌ ಅವರು ತಿಳಿಸಿದರು.

ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಅಗ್ನಿವೀರ್‌ ರ್ಯಾಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಳೆದ ಸಾಲಿನ ಜೂನ್‌ ಮಾಹೆಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗಿದ್ದು, ಎರಡನೇ ಹಂತದ (ಸ್ಕ್ರೀನಿಂಗ್‌ ಪರೀಕ್ಷೆ) ಅಗ್ನಿ ವೀರ್‌ ರ್ಯಾಲಿ ಪರೀಕ್ಷೆ ಏ.19 ರಿಂದ ನಡೆಯಲಿದೆ ಎಂದು ತಿಳಿಸಿದರು.

ರ್ಯಾಲಿಯಲ್ಲಿ 6043 ಪುರುಷ ಹಾಗೂ 192 ಮಹಿಳಾ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಪ್ರತಿ ದಿನ 800 ಅಭ್ಯರ್ಥಿಗಳ ದೈಹಿಕ ಸೇರಿದಂತೆ ಇತರೆ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಏ.27 ರಂದು ಮಹಿಳಾ ಅಭ್ಯರ್ಥಿಗಳ ರ್ಯಾಲಿ ನಡೆಯಲಿದೆ ಎಂದು ಹೇಳಿದರು.

ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ನಂಜರಾಜ ಬಹದ್ದೂರ್‌ ಛತ್ರದಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ. ರ್ಯಾಲಿಯಲ್ಲಿ ಭಾಗವಹಿಸಿ ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾದವರು ಮಾತ್ರ ವೈದ್ಯಕೀಯ ಪರೀಕ್ಷೆಗೆ ಹಾಜರಾಗುತ್ತಾರೆ. ಒಬ್ಬ ಅಭ್ಯರ್ಥಿಯು ಒಂದರಿಂದ ಎರಡು ದಿನಗಳು ಮಾತ್ರ ವಾಸ್ತವ್ಯ ಮಾಡಲಿದ್ದಾರೆ ಎಂದರು.

ರ್ಯಾಲಿ ನಡೆಯುವ ದಿನದಂದು ಆರೋಗ್ಯ ಇಲಾಖೆಯಿಂದ ಅಂಬ್ಯೂಲೆನ್ಸ್ , ಅಗತ್ಯ ವೈದ್ಯರು, ಸಿಬ್ಬಂದಿ ಹಾಗೂ ಔಷಧಿಗಳ ವ್ಯವಸ್ಥೆ ಮಾಡಿಕೊಡುವಂತೆ ತಿಳಿಸಿದರು. ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಕುಡಿಯುವ ನೀರು, ತಾತ್ಕಲಿಕ ಶೌಚಾಲಯ, ಸ್ವಚ್ಛತಾ ವ್ಯವಸ್ಥೆ, ಪೊಲೀಸ್‌‍ ಇಲಾಖೆಯಿಂದ ಬಂದೋಬಸ್ತ್‌ ವ್ಯವಸ್ಥೆ, ನಿರ್ಮಿತಿ ಕೇಂದ್ರದ ವತಿಯಿಂದ ಅಗತ್ಯ ಟೆಂಟ್‌ಗಳು ಹಾಗೂ ಸಿ.ಸಿ.ಟಿ.ವಿ ವ್ಯವಸ್ಥೆ ಮಾಡುವಂತೆ ಸೂಚಿಸಿದರು.

ಭಾರತೀಯ ಸೇನೆಯಲ್ಲಿ ಅಂದಾಜು 2030 ನೇ ಸಾಲಿನವರೆಗೆ ಹೆಚ್ಚಿನ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದರು.

ಸಭೆಯಲ್ಲಿ ಬೆಂಗಳೂರು ಭಾರತೀಯ ಸೇನೆಯ ನೇಮಕಾತಿ ವಿಭಾಗದ ವೈದ್ಯಕೀಯ ಅಧಿಕಾರಿ ಮೇಜರ್‌ ಕಪಿಲ್‌ ಕುಮಾರ್‌ ಶರ್ಮ, ಉಪ ನೇಮಕಾತಿ ಅಧಿಕಾರಿ ಸುಬೇದಾರ್‌ ಮೇಜರ್‌ ಶಾಮ್‌ ಸಿಂಗ್‌, ಸೈನಿಕ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಂಜುನಾಥ್‌ ರೆಡ್ಡಿ, ಆರೋಗ್ಯ ಇಲಾಖೆಯ ಡಾ.ಗೋಪಿನಾಥ್‌, ಯುವಜನ ಸೇವ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಾಸ್ಕರ್‌ ಸೇರಿದಂತೆ ಅನೇಕ ಅಧಿಕಾರಿಗಳು ಪಾಲ್ಗೊಂಡಿದ್ದರು.

RELATED ARTICLES

Latest News