ಹಾವೇರಿ,ಮೇ.5-ಬೆಂಗಳೂರಿನಿಂದ ಗದಗ ನಗರಕ್ಕೆ ಹೋಗುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಪಲ್ಲಕ್ಕಿ ಬಸ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರಾಗಿದ್ದು, ಬಸ್ ಸುಟ್ಟು ಕರಕಲಾದ ಘಟನೆ ರಾಜ್ಯಹೆದ್ದಾರಿಯ ರಾಣೇಬೆನ್ನೂರು ತಾಲ್ಲೂಕಿನ ದೇವರಗುಡ್ಡ ಗ್ರಾಮದ ಬಳಿ ನಡೆದಿದೆ.
ಬೆಂಗಳೂರಿನಿಂದ ಗದಗ ನಗರಕ್ಕೆ ಹೊರಟಿದ್ದ ಈ ಸಾರಿಗೆ ಬಸ್‌ನಲ್ಲಿ ಸುಮಾರು 17 ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಬ್ರೇಕ್ ಲೈನ್ ದೋಷದಿಂದ ಬೆಂಕಿ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಬಸ್‌ನಲ್ಲಿ ಹೊಗೆ ಕಾಣಿಸುತ್ತಿದಂತೆ ಚಾಲಕ ಪಕ್ಕೀರಪ್ಪ ಅವರು ತಕ್ಷಣ ರಸ್ತೆ ಬದಿ ವಾಹನ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿ ನಂತರ ಬೆಂಕಿ ನಂದಿಸಲು ಹರಸಹಾಸ ಪಟ್ಟಿರೂ ಪ್ರಯೋಜನವಾಗಲಿಲ್ಲ, ನೋಡ ನೋಡುತ್ತಿದ್ದಂತೆ ಬೆಂಕಿ ಬಸ್ ಪೂರ್ತಿ ಆವರಿಸಿ ಹೊತ್ತಿ ಉರಿಯಲಾರಂಭಿಸಿದೆ.
ತಕ್ಷಣ ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ. ಮಾಹಿತಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ವಾಹನದೊಂದಿಗೆ ಸ್ಥಳಕ್ಕೆ ದಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಈ ಬಗ್ಗೆ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
