Tuesday, May 5, 2026
Homeರಾಷ್ಟ್ರೀಯಫಲಿತಾಂಶದ ಬೆನ್ನಲ್ಲೇ ಸರ್ಕಾರ ರಚನೆಗೆ ವಿಜೇತರ ಕಸರತ್ತು

ಫಲಿತಾಂಶದ ಬೆನ್ನಲ್ಲೇ ಸರ್ಕಾರ ರಚನೆಗೆ ವಿಜೇತರ ಕಸರತ್ತು

Winners' exercise to form government after results

ನವದೆಹಲಿ,ಮೇ 5- ತೀವ್ರ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಸರ್ಕಾರ ರಚನೆಗೆ ಕಸರತ್ತು ಆರಂಭವಾಗಿದೆ.ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಐದು ರಾಜ್ಯಗಳಲ್ಲಿ ಸರ್ಕಾರ ರಚನಗೆ ಜನಾದೇಶ ಪಡೆದಿರುವ ರಾಜಕೀಯ ಪಕ್ಷಗಳು ಹೊಸ ಸರ್ಕಾರ ಸ್ಥಾಪನೆ ಮಾಡಲು, ಹಕ್ಕು ಮಂಡಿಸಲು ಮುಂದಾಗಿವೆ.

ಅದರಲ್ಲೂ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ಬುಡಮೇಲು ಮಾಡಿರುವ ದ್ರಾವಿಡರ ನಾಡು ತಮಿಳುನಾಡಿನಲ್ಲಿ ಟಿವಿಕೆ ಪಕ್ಷದ ಮುಖಂಡ ವಿಜಯ್‌ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.ತಮಿಳುನಾಡಿನ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್‌ ಅರ್ಲೆಕರ್‌ ಅವರಿಗೆ ಪತ್ರ ಬರೆದಿರುವ ಅವರು ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಡಬೇಕು. ತಮನ್ನು ಭೇಟಿಯಾಗಲು ಸಮಯ ನಿಗದಿಪಡಿಸಬೇಕೆಂದು ಮನವಿ ಮಾಡಿದ್ದಾರೆ.

ರಾಜ್ಯಪಾಲರು ಯಾವುದೇ ಸಂದರ್ಭದಲ್ಲೂ ಸರ್ಕಾರ ರಚನೆಗೆ ವಿಜಯ್‌ ಅವರನ್ನು ಆಹ್ವಾನಿಸುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಚನ್ನೈನಲ್ಲಿರುವ ಪಕ್ಷದ ಕಚೇರಿಯಲ್ಲಿ ನೂತನವಾಗಿ ಆಯ್ಕೆಗೊಂಡ ಶಾಸಕರು, ಪದಾಧಿಕಾರಿಗಳು ಸೇರಿದಂತೆ ಪ್ರಮುಖರ ಜೊತೆ ಸಭೆ ನಡೆಸಿದರು.

ಸಭೆಯಲ್ಲಿ ವಿಜಯ್‌ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಬಳಿಕ ರಾಜ್ಯಪಾಲರಿಗೆ ಸಮಯಾವಕಾಶ ಕೋರಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿ ಪತ್ರ ಬರೆದಿದ್ದಾರೆ. ರಾಜ್ಯದ ಒಟ್ಟು 234 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ್‌ ನೇತೃತ್ವದ ಟಿವಿಕೆ 108 ಸ್ಥಾನಗಳನ್ನು ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮಿದೆ.

ಸರ್ಕಾರ ರಚನೆ ಮಾಡಲು ಇನ್ನೂ ಹತ್ತು ಶಾಸಕರ ಬೆಂಬಲದ ಅಗತ್ಯವಿದೆ. ವಿಜಯ್‌ ಅವರಿಗೆ ಕಾಂಗ್ರೆಸ್‌‍ ಬೆಂಬಲ ನೀಡಲು ಮುಂದೆ ಬಂದಿದೆಯಾದರೂ ಇದುವರೆಗೂ ಅಧಿಕೃತಗೊಂಡಿಲ್ಲ. ಕೆಲವು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳು ಮತ್ತು ಇತರರ ಬೆಂಬಲ ಪಡೆದು ಸರ್ಕಾರ ರಚನೆ ಮಾಡಲು ವಿಜಯ್‌ ಮುಂದಾಗಿದ್ದಾರೆ.

ಮುಂದುವರೆದ ಹಗ್ಗಜಗ್ಗಾಟ :
ಒಂದು ದಶಕದ ನಂತರ ಅಧಿಕಾರಕ್ಕೆ ಬಂದಿರುವ ಕೇರಳದಲ್ಲಿ ಕಾಂಗ್ರೆಸ್‌‍ ನೇತೃತ್ವದ ಯುಡಿಎಫ್‌ ಸರ್ಕಾರ ರಚನೆಗೆ ಸರ್ಕಾರ ಕಸರತ್ತು ಆರಂಭಿಸಿದೆ.ರಾಜ್ಯದ ಒಟ್ಟು 140 ಕ್ಷೇತ್ರಗಳ ಪೈಕಿ ಯುಡಿಎಫ್‌ 89 ಸ್ಥಾನ ಪಡೆದು ಸ್ಪಷ್ಟ ಬಹುಮತ ಪಡೆದಿದೆ. ಫಲಿತಾಂಶ ಹೊರಬಿದ್ದು 24 ಗಂಟೆ ಕಳೆದರೂ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಈಗಲೂ ನಿಗೂಢವಾಗಿದೆ.

ಕಾಂಗ್ರೆಸ್‌‍ನಲ್ಲಿ ಮುಖ್ಯಮಂತ್ರಿ ಹುದ್ದೆಗೆ ಹಲವಾರು ಹೆಸರುಗಳು ಕೇಳಿಬರುತ್ತಿವೆ. ಅದರಲ್ಲಿ ಮುಖ್ಯವಾಗಿ ಗಾಂಧಿ ಕುಟುಂಬಕ್ಕೆ ಅತ್ಯಂತ ನಿಷ್ಠರಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌, ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿದ್ದ ಸತೀಶನ್‌ ಹಾಗೂ ಮಾಜಿ ಕಾಂಗ್ರೆಸ್‌‍ ಅಧ್ಯಕ್ಷ ರಮೇಶ್‌ ಚೆನ್ನಿತ್ತಲ ಸೇರಿದಂತೆ ಕೆಲವರ ಹೆಸರುಗಳು ಮುಂಚೂಣಿಯಲ್ಲಿವೆ.
ತಿರುವಂತನಪುರದಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಒಂದು ಕಡೆ ವೇಣುಗೋಪಾಲ್‌, ಮತ್ತೊಂದು ಕಡೆ ಸತೀಶನ್‌ ಅವರುಗಳ ಫ್ಲೆಕ್‌್ಸಗಳನ್ನು ಹಾಕಿ ಮುಂದಿನ ಮುಖ್ಯಮಂತ್ರಿ ಎಂದು ಬರೆಯಲಾಗಿದೆ.

ನಾಳೆ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಂಭವವಿದ್ದು, ನೂತನ ನಾಯಕರನ್ನು ಶಾಸಕರು ಆಯ್ಕೆ ಮಾಡಿದ ಬಳಿಕ ಸರ್ಕಾರ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಲಿದ್ದಾರೆ.

ಬಂಗಾಳಕ್ಕೆ ಯಾರು ? :
ದೀದಿ ನಾಡಿನಲ್ಲಿ ಇತಿಹಾಸ ಸೃಷ್ಟಿಸಿರುವ ಬಿಜೆಪಿ ಪ.ಬಂಗಾಳದಲ್ಲಿ ಸರ್ಕಾರ ರಚನೆಗೆ ಸಿದ್ಧತೆಯನ್ನು ಆರಂಭಿಸಿದೆ. ರಾಜ್ಯದ ಒಟ್ಟು 294 ವಿಧಾನಸಭಾ ಕ್ಷೇತ್ರಗಳ ಪೈಕಿ 206 ಕ್ಷೇತ್ರಗಳನ್ನು ಗೆದ್ದಿರುವ ಬಿಜೆಪಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ.

ಪ್ರಮುಖವಾಗಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ಹಾಗೂ ಮಮತಾ ಬ್ಯಾನರ್ಜಿಯನ್ನು ಮಣಿಸಿರುವ ಸುವೇಂದು ಅಧಿಕಾರಿ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜೊತೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸಮೀಕ್‌ ಭಟ್ಟಾಚಾರ್ಯ, ಉಪಾಧ್ಯಕ್ಷ ಅಗ್ನಿಮಿತ್ರ ಪೌಲ್‌, ಸ್ವಪನ್‌ದಾಸ್‌‍ ಗುಪ್ತ, ರೂಪಾ ಗಂಗೂಲಿ ಸೇರಿದಂತೆ ಹಲವರ ಹೆಸರುಗಳು ಕೇಳಿಬರುತ್ತಿವೆ.

ಇಂದು ಅಥವಾ ನಾಳೆ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ನಂತರ ಬಂಗಾಳಕ್ಕೆ ವೀಕ್ಷಕರನ್ನು ಕಳುಹಿಸಿಕೊಡಲಿದೆ. ನಂತರವೇ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಸರ್ಕಾರ ರಚನೆಗೆ ಯಾವುದೇ ಅಡ್ಡಿ ಇಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವುದರಿಂದ ಹಿಮಂತ್‌ ಬಿಶ್ವಾಸ್‌‍ ಶರ್ಮ ಯಾವುದೇ ಕ್ಷಣದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲೂ ಬಿಜೆಪಿ – ಎಐಎನ್‌ಆರ್‌ಸಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬಂದಿರುವುದರಿಂದ ಉಸ್ತುವಾರಿ ಸಿಎಂ ರಂಗಸ್ವಾಮಿ ಸರ್ಕಾರ ರಚನೆಗೆ ಲೆಫ್ಟಿನೆಂಟ್‌ ಗವರ್ನರ್‌ ಜನರಲ್‌ ಅವರನ್ನು ಭೇಟಿ ಮಾಡಲಿದ್ದಾರೆ.

RELATED ARTICLES

Latest News