ಬೆಂಗಳೂರು,ಏ.7- ಐಪಿಎಲ್ ಪಂದ್ಯಗಳ ಟಿಕೆಟ್ ಕಾಳಸಂತೆ ಮಾರಾಟ ತಪ್ಪಿಸಲು ಕೆಎಸ್ಸಿಎ ಅಧಿಕಾರಿಗಳು ಚಾಪೆ ಕೆಳಗೆ ತೂರಿದರೆ ವಂಚಕರು ರಂಗೋಲಿ ಕೆಳಗೆ ತೂರುವ ಮೂಲಕ ತಮ ಕೈಚಳಕ ಪ್ರದರ್ಶಿಸಿರುವುದನ್ನು ಸಿಸಿಬಿ ಪೊಲೀಸರು ಬಯಲಿ ಗೆಳೆದಿದ್ದಾರೆ.
ಕಳೆದ ಭಾನುವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳ ನಡುವಿನ ಪಂದ್ಯದ ಟಿಕೆಟ್ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಮಧ್ಯಪ್ರದೇಶ ಮೂಲದ ವ್ಯಕ್ತಿ ಸೇರಿದಂತೆ 11 ಕಾಳಸಂತೆಕೋರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 4.50 ಲಕ್ಷ ರೂ. ಮೌಲ್ಯದ ಟಾಟಾ ಐಪಿಎಲ್ ಟಿ20 ಕ್ರಿಕೆಟ್ ಪಂದ್ಯದ 28 ಟಿಕೆಟ್ಗಳು, 8 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರ್ಸಿಬಿ-ಸಿಎಸ್ಕೆ ಕ್ರಿಕೆಟ್ ಪಂದ್ಯ ಆರಂಭಕ್ಕೂ ಮುನ್ನ ಕಬ್ಬನ್ಪಾರ್ಕ್ ಹಾಗೂ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪಂದ್ಯದ ಟಿಕೆಟ್ಗಳನ್ನು ಕಾಳಸಂತೆಯಲ್ಲಿ ಮೂಲ ಬೆಲೆಗಿಂತ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಬಂದ ಮಾಹಿತಿಯನ್ನಾಧರಿಸಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಒಟ್ಟು 7 ಪ್ರಕರಣಗಳನ್ನು ದಾಖಲಿಸಿ 11 ಕಾಳಸಂತೆಕೋರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಬ್ಬನ್ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ 10 ಮಂದಿಯನ್ನು ಬಂಧಿಸಿ, 7 ಮೊಬೈಲ್ಗಳು, ವಿವಿಧ ಬೆಲೆಯ 18 ಐಪಿಎಲ್ ಟಿಕೆಟ್ಗಳು, ಆನ್ಲೈನ್ ಟಿಕೆಟ್ಗಳನ್ನು ಮಾರಾಟ ಮಾಡಲು ಬಳಸುತ್ತಿದ್ದ ವಾಟ್ಸಪ್ ಸ್ಕ್ರೀನ್ಶಾಟ್ ಹಾಳೆಗಳನ್ನು ವಶಕ್ಕೆ ಪಡೆಯಲಾಗಿದೆ.ಇದೇ ರೀತಿ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಆತನಿಂದ 10 ಐಪಿಎಲ್ ಟಿಕೆಟ್ಗಳು, ಒಂದು ಮೊಬೈಲ್ ಹಾಗೂ ವಾಟ್ಸಾಪ್ ಸ್ಕ್ರೀನ್ಶಾಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಖತರ್ನಾಕ್ ಆರೋಪಿಗಳು: ದುಬಾರಿ ಬೆಲೆಗೆ ಐಪಿಎಲ್ ಟಿಕೆಟ್ಗಳನ್ನು ಮಾರಾಟವಾಗುವುದನ್ನು ತಪ್ಪಿಸಲು ಕೆಎಸ್ಸಿಎ ಅಧಿಕಾರಿಗಳು ಈ ಬಾರಿ ಇ-ಟಿಕೆಟ್ ಮೊರೆ ಹೋಗಿದ್ದರು.
ಆನ್ಲೈನ್ನಲ್ಲಿ ಇ-ಟಿಕೆಟ್ ಪಡೆಯುವ ವ್ಯಕ್ತಿಗಳು ಅವುಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ಅವರು ಭಾವಿಸಿದ್ದರು.
ಆದರೆ ಕೆಎಸ್ಸಿಎ ಅಧಿಕಾರಿಗಳು ಚಾಪೆ ಕೆಳಗೆ ತೂರಿದರೆ, ಕಾಳಸಂತೆಕೋರರು ರಂಗೋಲಿ ಕೆಳಗೆ ತೂರುವಂತಹ ಖತರ್ನಾಕ್ ಐಡಿಯಾ ಉಪಯೋಗಿಸಿರುವುದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.ಕಾಳಸಂತೆಕೋರರು ಆನ್ಲೈನ್ ಟಿಕೆಟ್ ಖರೀದಿಸಿ ತಕ್ಷಣವೇ ಅದರ ಸ್ಕ್ರೀನ್ಶಾಟ್ ತೆಗೆದುಕೊಂಡು ಟಿಕೆಟ್ಗಳನ್ನು ಮೂಲ ಬೆಲೆಗಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಿರುವುದು ಬಯಲಿಗೆ ಬಂದಿದೆ.
ತಾವು ಖರೀದಿಸಿದ ಟಿಕೆಟ್ನ್ನು ಆನ್ಲೈನ್ನಲ್ಲಿ ಐಪಿಎಲ್ ಟಿಕೆಟ್ ಮಾರಾಟಕ್ಕಿದೆ ಎಂದು ಪ್ರಚಾರ ಮಾಡಿ ಅವರು ಕೇಳಿದಷ್ಟು ಹಣ ನೀಡುವವರಿಗೆ ಇ-ಟಿಕೆಟ್ ಸ್ಕ್ರೀನ್ಶಾಟ್ ಜೊತೆಗೆ ಪಾಸ್ವರ್ಡ್ ನೀಡಿ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿದ್ದರು.
ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಮಾರ್ಗದರ್ಶನದಲ್ಲಿ ಅಪರ ಪೊಲೀಸ್ ಆಯುಕ್ತ ಅಜಯ್ಹಿಲೋರಿ, ಡಿಸಿಪಿ ಹರಿಬಾಬು ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಇಂತಹ ಖತರ್ನಾಕ್ ಕಾಳಸಂತೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
