ಚಿಕ್ಕಮಗಳೂರು,ಏ.8- ಪ್ರವಾಸಕ್ಕೆ ಬಂದಿದ್ದ ಕೇರಳದ ಪಾಲಕ್ಕಾಡ್ ಮೂಲದ ಬಾಲಕಿ ಚಂದ್ರದ್ರೋಣ ಪರ್ವತ ಶ್ರೀಣಿಯ ಮಾಣಿಕ್ಯಧಾರ ಜಲಪಾತದ ಬಳಿ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಕೇರಳದಿಂದ ಸುಮಾರು 40 ಜನರ ತಂಡದೊಂದಿಗೆ ಬಾಲಕಿ ಶ್ರೀನಂದನಾ ಪ್ರವಾಸಕ್ಕೆ ಬಂದಿದ್ದು ಸಂಜೆ 5.20ರ ಸುಮಾರಿಗೆ ತನ್ನ ಕುಟುಂಬ ಸದಸ್ಯರೊಡನೆ ಜಲಪಾತ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಗುಂಪಿನಿಂದ ಬೇರ್ಪಟ್ಟು ನಾಪತ್ತೆಯಾಗಿದ್ದಾಳೆ.
ಈ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿ ಶಾಮಕ ಸಿಬ್ಬಂದಿ, ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳೀಯರ ಸಹಾಯದೊಂದಿಗೆ ರಾತ್ರಿಯಿಡೀ ತ್ರೀವ ಶೋಧ ನಡೆಸಿದರಾದರೂ ಬಾಲಕಿಯ ಸುಳಿವು ಸಿಕ್ಕಿಲ್ಲ .
ದಟ್ಟವಾದ ಅರಣ್ಯ ಮತ್ತು ಕಡಿದಾದ ಬೆಟ್ಟಗುಡ್ಡಗಳಿಂದ ಕೂಡಿದ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುವುದು ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಪಶ್ಚಿಮ ಘಟ್ಟಗಳ ಮಂಜು ಮುಸುಕಿದ ವಾತಾವರಣ ಮತ್ತು ಕತ್ತಲು ಆವರಿಸುತ್ತಿರುವುದು ಶೋಧ ಕಾರ್ಯಕ್ಕೆ ಹೆಚ್ಚಿನ ಅಡ್ಡಿ ಉಂಟುಮಾಡುತ್ತಿದೆ.
ಮಡಿಕೇರಿಯಲ್ಲಿ ಪ್ರವಾಸಿ ಮಹಿಳೆ ನಾಪತ್ತೆಯಾದ ಬೆನ್ನಲ್ಲೇ ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲೂ ಇಂತಹದೇ ಒಂದು ಆತಂಕಕಾರಿ ಘಟನೆ ನಡೆದಿರುವುದು ಸಾರ್ವಜನಿಕರಿಗೆ ಆತಂಕ ಉಂಟಾಗಿದೆ.
ದತ್ತಪೀಠದ ಸಮೀಪವೇ ಇರುವ ಮಾಣಿಕ್ಯಧಾರದಲ್ಲಿ ಬಾಲಕಿ ನಾಪತ್ತೆಯಾಗಿರುವುದು ಪ್ರವಾಸಿಗರಲ್ಲಿ ತೀವ್ರ ಆತಂಕ ಮೂಡಿಸಿದೆ. ಪ್ರಸ್ತುತ ಇಂದು ಬೆಳಗ್ಗೆಯಿಂದ ಮತ್ತೆ ಹುಡುಕಾಟ ಮುಂದುವರಿದಿದ್ದು ನಾಪತ್ತೆಯಾದ ನಂದನಾಳ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಡ್ರೋನ್ ಮೂಲಕ ಬಾಲಕಿಯನ್ನು ಪತ್ತೆ ಹಚ್ಚಲಾಗುತ್ತಿದೆ.
