ಕಲಬುರಗಿ. ಏ.8- ರಥೋತ್ಸವದ ವೇಳೆ ಆಯತಪ್ಪಿ ರಥದ ಚಕ್ರಕ್ಕೆ ಸಿಲುಕಿದ ಭಕ್ತರೊಬ್ಬರು ಮೃತಪಟ್ಟಿರುವ ಘಟನೆ ಫರತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಿನೋದ್ ರೆಡ್ಡಿ (40) ಮೃತಪಟ್ಟ ದುರ್ದೈವಿ. ಕಲಬುರಗಿ ಜಿಲ್ಲೆ ಹಾಗರಗುಂಡಗಿಯಲ್ಲಿ ಶ್ರೀ ಶರಣಬಸವೇಶ್ವರ ರಥೋತ್ಸವ ನಡೆಯುತ್ತಿದೆ.
ರಥೋತ್ಸವದ ಅಂಗವಾಗಿ ಜಿಲ್ಲೆಯ ಸುತ್ತಮುತ್ತಲಿನ ತಾಲೂಕುಗಳಿಂದ ಸಹಸ್ರಾರು ಭಕ್ತಾಧಿಗಳು ಆಗಮಿಸಿದ್ದರು. ನಿನ್ನೆ ಸಂಜೆ ಭಕ್ತಾಧಿಗಳೆಲ್ಲಾ ಸೇರಿ ರಥ ಎಳೆಯುತ್ತಿದ್ದಾಗ ಆಯತಪ್ಪಿ ವಿನೋದ್ ರೆಡ್ಡಿ ಎಂಬುವವರು ರಥದ ಚಕ್ರದ ಅಡಿ ಸಿಲುಕಿಕೊಂಡಿದ್ದಾರೆ.
ಅದನ್ನು ಗಮನಿಸದೆ ರಥ ಎಳೆದಿದ್ದರಿಂದ ಚಕ್ರದಡಿ ಸಿಲುಕಿ ತೀವ್ರ ರಕ್ತ ಸ್ರಾವವಾಗಿ ವಿನೋದ್ ರೆಡ್ಡಿ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಈ ದುರ್ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು.
ಸುದ್ದಿ ತಿಳಿದು ಫರತಾಬಾದ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
