Tuesday, April 14, 2026
Homeರಾಜ್ಯ2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ : ಆರ್‌.ಅಶೋಕ್‌

2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ : ಆರ್‌.ಅಶೋಕ್‌

ನಾಗಮಂಗಲ,ಏ.14- ಮುಂಬರುವ 2028ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾಗಲಿದೆ. ಯಾರು ಮುಖ್ಯಮಂತ್ರಿಯಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, 2028ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಜೆಡಿಎಸ್‌ ಕೂಡ ಜೊತೆಗೆ ಇರಲಿದೆ. ಯಾರು ಮುಖ್ಯಮಂತ್ರಿಯಾಗಬೇಕು ಎಂದು ಪ್ರಧಾನಿ ನರೇಂದ್ರಮೋದಿ, ಸಚಿವ ಅಮಿತ್‌ ಶಾ ಮೊದಲಾದ ನಾಯಕರು ತೀರ್ಮಾನಿಸಲಿದ್ದಾರೆ ಎಂದರು.

ಬಿಜೆಪಿಯಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳು ಅನೇಕರಿದ್ದಾರೆ. ಪಕ್ಷದ ಆಶೀರ್ವಾದವಿದ್ದರೆ ನಾನು ಕೂಡ ಸಿಎಂ ಆಗಬಹುದು. ಈಗ ಅವೆಲ್ಲಕ್ಕಿಂತಲೂ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯುವುದು ಮುಖ್ಯ. ಇದಕ್ಕಾಗಿ ನಾವು ಹೋರಾಟ ಮುಂದುವರಿಸುತ್ತೇವೆ ಎಂದರು.

ಮುಖ್ಯಮಂತ್ರಿ ಬದಲಾವಣೆ ನವೆಂಬರ್‌ನಲ್ಲಿ ಆಗಬೇಕಿತ್ತು. ಈಗ ಆ ದಿನಾಂಕ ಮುಗಿದುಹೋಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಲ್ಲಿಕಾರ್ಜುನ ಖರ್ಗೆಯವರ ಮನೆಗೆ ಹೋಗಿ ಗಲಾಟೆ ಮಾಡಿದ್ದಾರೆ. ಈ ಜಗಳದಲ್ಲೇ ಸರ್ಕಾರ ಸತ್ತುಹೋಗಿದೆ. ಪಕ್ಷದ ಅಧ್ಯಕ್ಷರಿಗೆ ಗೌರವ ಇದ್ದಿದ್ದರೆ ಶಾಸಕರು ದೆಹಲಿಗೆ ಹೋಗುತ್ತಿರಲಿಲ್ಲ.

ಡಿ.ಕೆ.ಶಿವಕುಮಾರ್‌ ಧ್ವನಿಗೆ ಮೂರು ಪೈಸೆಯ ಬೆಲೆಯನ್ನು ಶಾಸಕರು ನೀಡುತ್ತಿಲ್ಲ. ಅವರ ವರ್ಚಸ್ಸು ಕಡಿಮೆಯಾಗುತ್ತಿದೆ ಎಂಬುದು ಇದರಿಂದ ತಿಳಿದುಬರುತ್ತದೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್‌ನಲ್ಲಿ ಸಿಎಂ ಆಸೆ ಇಟ್ಟುಕೊಂಡವರು ಜಗಳವಾಡುತ್ತಿದ್ದಾರೆ. ಈ ನಡುವೆ ರಾಜ್ಯದ ಅಭಿವೃದ್ಧಿ ನಡೆಯುತ್ತಿಲ್ಲ. ಹಿಂದೆ ಜನತಾದಳವನ್ನು ಜಗಳಗಳ ಪಾರ್ಟಿ ಎಂದು ಕರೆಯುತ್ತಿದ್ದರು. ಈಗ ಅದೇ ಕಾಂಗ್ರೆಸ್ಸೇ ಜಗಳಗಳ ಪಾರ್ಟಿಯಾಗಿದೆ ಎಂದು ಟೀಕಿಸಿದರು.

ಮಂದಿರ ಉದ್ಘಾಟನೆ:
ಆದಿಚುಂಚನಗಿರಿ ಸಂಸ್ಥಾನದ ಗುರು ಭೈರವೈಕ್ಯ ಮಂದಿರದ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಇಲ್ಲಿ ಉತ್ತಮ ತಯಾರಿ ನಡೆಯುತ್ತಿದ್ದು, ಸಾವಿರಾರು ಜನರು ಕೂರುವ ವ್ಯವಸ್ಥೆ ಮಾಡಲಾಗಿದೆ. ಮಂದಿರವನ್ನು ಬಹಳ ಆಕರ್ಷಕ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ.
ಪ್ರಧಾನಿ ನರೇಂದ್ರಮೋದಿಗೆ ಮಠದ ಬಗ್ಗೆ ಅಪಾರ ಭಕ್ತಿ ಭಾವವಿದೆ.

ಈ ಹಿಂದೆಯೂ ಅವರು ಮಠದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಮೊದಲಿಗೆ ಭೈರವೈಕ್ಯ ದೇವರ ಪೂಜೆಯಲ್ಲಿ ಪಾಲ್ಗೊಂಡು, ನಂತರ ಮಂದಿರ ಉದ್ಘಾಟನೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದರು.
ನನಗೂ ಕೂಡ ಕಾರ್ಯಕ್ರಮ ದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆತಿದ್ದು, ನಾಳಿನ ಕಾರ್ಯಕ್ರಮದಲ್ಲಿ ಭಾಗಿ ಯಾಗುವುದಾಗಿ ಆರ್‌. ಅಶೋಕ್‌ ಹೇಳಿದರು.

RELATED ARTICLES

Latest News