Tuesday, April 14, 2026
Homeರಾಜ್ಯಜಿಬಿಎ ಚುನಾವಣೆ ಮುಂದೂಡಲು ರಾಜಕೀಯ ಷಡ್ಯಂತ್ರ..?

ಜಿಬಿಎ ಚುನಾವಣೆ ಮುಂದೂಡಲು ರಾಜಕೀಯ ಷಡ್ಯಂತ್ರ..?

Political conspiracy to postpone GBA elections..?

ಬೆಂಗಳೂರು, ಏ.14- ಬರುವ ಜೂನ್‌ ತಿಂಗಳಿನೊಳಗೆ ಜಿಬಿಎ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್‌ ನೀಡಿರುವ ಗಡುವು ಸಮೀಪಿಸುತ್ತಿರುವಂತೆ ಚುನಾವಣೆ ಮುಂದೂಡುವ ಕಸರತ್ತು ಆರಂಭಗೊಂಡಿದೆ. ಕೇಂದ್ರ ಸರ್ಕಾರದ ಜನಗಣತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಜಿಬಿಎ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ರಾವ್‌ ನಿರ್ಧರಿಸಿದ್ದಾರೆ.

ಜನಗಣತಿ ಕಾರ್ಯಕ್ಕೆ ಸರ್ಕಾರ ಹಾಗೂ ಜಿಬಿಎ ಸಿಬ್ಬಂದಿಗಳನ್ನು ನಿಯೋಜಿ ಸುವುದರಿಂದ, ಚುನಾವಣೆಯನ್ನು ನಡೆಸಲು ಅಗತ್ಯ ಸಿಬ್ಬಂದಿ ಕೊರತೆ ಉಂಟಾಗುವ ಸಾಧ್ಯತೆ ಇದೆ. ಈಗಾಗಲೇ ಹಲವಾರು ಸಿಬ್ಬಂದಿಗಳು ಜನಗಣತಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದರಿಂದ ಚುನಾವಣಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸುವುದು ಕಷ್ಟಕರವಾಗಲಿದೆ ಎಂಬ ವಾದದ ಮೇಲೆ ಅವರು ಪತ್ರ ಬರೆಯಲು ನಿರ್ಧರಿಸಿದ್ದಾರೆ.

ಇದರ ಜೊತೆಗೆ ವಾರ್ಡ್‌ಗಳ ಗಡಿ ಗುರುತಿಸುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚಿನ ಕಾಲಾವಕಾಶ ಅಗತ್ಯವಿರುವುದರಿಂದ, ಚುನಾವಣೆಯ ವೇಳಾಪಟ್ಟಿಗೆ ಮತ್ತಷ್ಟು ಸಮಯ ಬೇಕು ಎಂದು ಅವರು ಮನವಿ ಮಾಡಿಕೊಳ್ಳಲಿದ್ದಾರೆ.ಹೀಗಾಗಿ ಜಿಬಿಎ ಚುನಾವಣೆಯನ್ನು ಕನಿಷ್ಠ ಎರಡು ರಿಂದ ಮೂರು ತಿಂಗಳುಗಳ ಕಾಲ ಮುಂದೂಡಲು ಅನುಮತಿ ನೀಡುವಂತೆ ಅವರು ಕೇಳಿಕೊಳ್ಳಲಿದ್ದಾರೆ ಎಂದು ಜಿಬಿಎ ಮೂಲಗಳು ಮಾಹಿತಿ ನೀಡಿವೆ.

ಜೂನ್‌ ತಿಂಗಳಿನ ಬದಲು ಬರುವ ಅಗಸ್ಟ್‌ ಅಂತ್ಯದೊಳಗೆ ಚುನಾವಣೆ ನಡೆಸಲು ಅವಕಾಶ ನೀಡುವಂತೆ ಮನವಿ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.ಜಿಬಿಎ ಮುಖ್ಯ ಆಯುಕ್ತರ ಮನವಿ ಪತ್ರವನ್ನೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ ಜಿಬಿಎ ಚುನಾವಣೆಯನ್ನು ಮತ್ತೆ ಮುಂದಕ್ಕೆ ಹಾಕಿಸುವ ಪ್ರಯತ್ನಕ್ಕೆ ಸರ್ಕಾರ ಕೈ ಹಾಕಿದೆ ಎಂದು ಗೊತ್ತಾಗಿದೆ.

ಡಿಕೆಶಿ ಸಿಎಂ ಆಗುವ ಕನಸು ನನಸಾಗಾದಿರುವುದರಿಂದ ಹೇಗಾದರೂ ಮಾಡಿ ಜಿಬಿಎ ಚುನಾವಣೆಯನ್ನು ಮುಂದೂಡಿಸುವ ಕಸರತ್ತು ಆರಂಭಿಸಲಾಗಿದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ ಸರ್ಕಾರ ನಡವಳಿಕೆಗೆ ಛೀಮಾರಿ ಹಾಕಿದ್ದೇ ಆದರೆ ನಿಗದಿಯಂತೆ ಜೂನ್‌ ತಿಂಗಳಿನಲ್ಲೇ ಚುನಾವಣೆ ನಡೆಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳೂ ಖಚಿತಪಡಿಸಿವೆ.

RELATED ARTICLES

Latest News