Tuesday, April 14, 2026
Homeರಾಜಕೀಯವಿಧಾನಸೌಧದಲ್ಲಿ ಕುಳಿತರೆ ಜನರ ಸಮಸ್ಯೆ ಬಗೆಹರಿಯಲ್ಲ : ಹೆಚ್ಡಿಕೆ

ವಿಧಾನಸೌಧದಲ್ಲಿ ಕುಳಿತರೆ ಜನರ ಸಮಸ್ಯೆ ಬಗೆಹರಿಯಲ್ಲ : ಹೆಚ್ಡಿಕೆ

Sitting in Vidhana Soudha will not solve people's problems: HDK

ಬೆಂಗಳೂರು,ಏ.14- ವಿಧಾನಸೌಧದ ಮೂರನೇ ಮಹಡಿಯಲ್ಲಿ ಕುಳಿತು ಆಡಳಿತ ನಡೆಸಿದರೆ ರಾಜ್ಯದ ಜನರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.

ಜೆ.ಪಿ.ಭವನದಲ್ಲಿಂದು ಜೆಡಿಎಸ್‌‍ ಹಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಹಾಗೂ ಉಪಪ್ರಧಾನಿ ಡಾ.ಬಾಬು ಜಗಜೀವನರಾಂ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಳ್ಳಿಹಳ್ಳಿಗೆ ಭೇಟಿ ನೀಡಿ ಜನರ ಸಮಸ್ಯೆಯನ್ನು ಅರಿತು ಆ ಸಮಸ್ಯೆಗಳನ್ನು ಬಗೆಹರಿಸಿದರೆ ಅಂಬೇಡ್ಕರ್‌ರವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.

ಹಳ್ಳಿಹಳ್ಳಿಗೆ ಭೇಟಿ ನೀಡಿದಾಗ ಯಾವ ಸಮಸ್ಯೆಗಳಿವೆ ಎಂಬುದು ಅರಿವಿಗೆ ಬರಲಿದೆ ಎಂದ ಅವರು, ಜಿಡಿಪಿ ಆಧಾರದ ಮೇಲೆ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿ ಪ್ರಮಾಣ ಪತ್ರ ಕೊಡಲಾಗುವುದಿಲ್ಲ ವಾಸ್ತವಾಂಶಗಳನ್ನು ಹೇಳಿದರೆ ವಿಲನ್‌ಗಳಾಗುತ್ತೇವೆ ಎಂದು ಹೇಳಿದರು.

ಇಂದು ಬೆಳಿಗ್ಗೆ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದ ಮಹಿಳೆಯೊಬ್ಬರು ಬಂದು ಮನೆ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಆಕೆಗೆ ನಿವೇಶನವೂ ಇಲ್ಲ, ಗೊರಗುಂಟೆಪಾಳ್ಯದ ಮತ್ತೊಬ್ಬ ಹೆಣ್ಣುಮಗಳು ತನ್ನ ಪತಿಗಾಗಿ ಆಸ್ಪತ್ರೆ ವೆಚ್ಚ 29 ಲಕ್ಷ ಖರ್ಚು ಮಾಡಿದ್ದಾರೆ. ಆದರೆ ಇನ್ನೂ ಗುಣವಾಗಿಲ್ಲ.

ಇಂತಹ ಸಮಸ್ಯೆಗಳನ್ನು ಹೊತ್ತು ನನ್ನ ಬಳಿ ಬರುತ್ತಾರೆ. ಅಂತವರಿಗೆ ಕೈಲಾದ ಸಹಾಯ ಮಾಡುತ್ತಿದ್ದೇನೆ. ಅಂಬೇಡ್ಕರ್‌ರವರ ಕನಸು ನನಸಾಗಲು ಸಂಕಷ್ಟದಲ್ಲಿರುವ ಸಮಸ್ಯೆಯ ಸುಳಿಯಲ್ಲಿರುವ ಇಂತವರಿಗೆ ಪರಿಹಾರ ಒದಗಿಸಿದರೆ ಸಾರ್ಥಕವಾಗುತ್ತದೆ. ಶೋಷಿತರ ಬದುಕನ್ನು ಹಸನುಗೊಳಿಸಿ ಸಮಾನತೆ ತಂದಾಗ ಅಂಬೇಡ್ಕರ್‌ರವರ ಆಶಯ ಈಡೇರಿಸಿದಂತಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿನ್ನೆ ಸೇತುವೆಯನ್ನು ಉದ್ಘಾಟನೆ ಮಾಡಿದ್ದಾರೆ. ಆ ಸೇತುವೆಗೆ ಸಿದ್ದರಾಮಯ್ಯನವರ ಹೆಸರನ್ನೇ ಇಟ್ಟಿದ್ದಾರೆ. ಅದು 2014ರಲ್ಲಿ ಮಂಜೂರಾಗಿದ್ದ ಸೇತುವೆ. ಕಳೆದ ಮೂರು ವರ್ಷಗಳಲ್ಲಿ ಆದ ಅಭಿವೃದ್ಧಿ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ಮುಖ್ಯಮಂತ್ರಿಗಳು ಅಭಿವೃದ್ಧಿ ವಿಚಾರದಲ್ಲಿ ಆತಾವಲೋಕನ ಮಾಡಿಕೊಳ್ಳಬೇಕು. ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಪ್ರಜೆಗಳ ಹಕ್ಕೇನೆಂಬುದನ್ನು ಪ್ರತಿಪಾದಿಸಿದ್ದಾರೆ. ರಾಜ್ಯಕ್ಕೆ ಉತ್ತಮ ಆಡಳಿತ ನೀಡುವ ಒಳ್ಳೆಯ ನಾಯಕತ್ವದ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಮೂರನೇ ಬಾರಿ ಸಿಎಂ ಆಗುವುದು ಜನರ ಕೈಯಲ್ಲಿದೆ :
ನಾನು ಈಗಾಗಲೇ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಮತ್ತೆ ಮೂರನೇ ಬಾರಿ ಮುಖ್ಯಮಂತ್ರಿಯಾಗುವುದು ನನ್ನ ಕೈಲಿಲ್ಲ. ನಾಡಿನ ಜನರ ಕೈಯಲ್ಲಿದೆ ಎಂದರು. ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಒಳ್ಳೆಯದಾಗಬೇಕಿದ್ದರೆ ಜೆಡಿಎಸ್‌‍ ಅನಿವಾರ್ಯ. ಇತ್ತೀಚೆಗೆ ನಡೆದ ಬೆಂಗಳೂರಿನ ಜನತಾ ಸಮಾವೇಶ ಹೊಸ ದಾಖಲೆ ನಿರ್ಮಿಸಿದೆ ಎಂದು ಅವರು ಹೇಳಿದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಹೋರಾಟದ ಫಲವಾಗಿ ಶಾಸನ ಸಭೆಗಳಲ್ಲಿ ಶೇ.33 ರಷ್ಟು ಮಹಿಳಾ ಮೀಸಲಾತಿ ಜಾರಿಯಾಗಲಿದೆ. 2029ಕ್ಕೆ ರಾಜ್ಯದಲ್ಲಿ 116 ಕ್ಷೇತ್ರಗಳು ಮಹಿಳಾ ಮೀಸಲು ಕೇತ್ರಗಳಾಗಿವೆ. ರಾಜ್ಯದಲ್ಲಿ 42 ಲೋಕಸಭಾ ಕ್ಷೇತ್ರಗಳು ಏರಲಿವೆ. ಹೀಗಾಗಿ ಮಹಿಳೆಯರು ನಮ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸನ್ನದ್ಧರಾಗಿ ನಾಯಕತ್ವ ಗುಣ ರೂಢಿಸಿಕೊಳ್ಳಬೇಕು ಎಂದರು.

ಏ.20ರ ನಂತರ ವಾರದಲ್ಲಿ ಒಂದು ದಿನ ರಾಜ್ಯದಲ್ಲಿದ್ದು ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು ಎಂದರು.ಜೆಡಿಎಸ್‌‍ ಪರಿಶಿಷ್ಟ ವಿಭಾಗದ ರಾಜ್ಯಾಧ್ಯಕ್ಷ ಡಾ.ಅನ್ನದಾನಿ ಮಾತನಾಡಿ, ಅಂಬೇಡ್ಕರ್‌ರವರ ಕನಸು ನನಸು ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು. ದಲಿತರ ಮನೆಯಲ್ಲಿ ವಾಸ್ತವ್ಯ ಮಾಡಿ ಅವರ ಸಮಸ್ಯೆಯನ್ನು ಅರಿತರು. ಅದರ ಪರಿಣಾಮ ಇಂದು ದಲಿತರ ಕೇರಿಗಳಲ್ಲಿ ಕಾಂಕ್ರಿಟ್‌ ರಸ್ತೆಗಳು ನಿರ್ಮಾಣವಾಗಿವೆ. ಮತ್ತೆ ಕುಮಾರಸ್ವಾಮಿಯವರು ವಿಧಾನಸೌಧದಲ್ಲಿ ಆಡಳಿತ ನಡೆಸಬೇಕು. ಅದಕ್ಕಾಗಿ ಎಲ್ಲರೂ ಶಕ್ತಿಮೀರಿ ಶ್ರಮಿಸೋಣ ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌‍ ಕೋರ್‌ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ, ಮಾಜಿ ಸಚಿವ ವೆಂಕಟರಾವ್‌ ನಾಡಗೌಡ, ವಿಧಾನಪರಿಷತ್‌ ಸದಸ್ಯರಾದ ಜವರಾಯಿಗೌಡ, ಟಿ.ಎ.ಶರವಣ, ವಿಧಾನಪರಿಷತ್‌ ಮಾಜಿ ಸದಸ್ಯರಾದ ರಮೇಶ್‌ಗೌಡ, ತಿಪ್ಪೇಸ್ವಾಮಿ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

RELATED ARTICLES

Latest News