Tuesday, April 14, 2026
Homeರಾಷ್ಟ್ರೀಯತನ್ನ ಹೋಲಿಕೆ ಇಲ್ಲ ಎಂದು ಮಗುವನ್ನು ನದಿಗೆ ಎಸೆದ ಪಾಪಿ ತಂದೆ

ತನ್ನ ಹೋಲಿಕೆ ಇಲ್ಲ ಎಂದು ಮಗುವನ್ನು ನದಿಗೆ ಎಸೆದ ಪಾಪಿ ತಂದೆ

Father throws child into river because he doesn't look like him

ಪುಣೆ,ಏ.14- ಅನುಮಾನ ಅನ್ನೋದು ಮನಷ್ಯನನ್ನು ಎಂತಹ ಕೀಳುಮಟ್ಟಕ್ಕೆ ಇಳಿಸುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿಯಂತಿದೆ. ತಾನೇ ಈ ಮಗುವಿನ ತಂದೆ ಹೌದೋ ಅಲ್ಲವೋ ಎಂಬ ಅನುಮಾನದಲ್ಲಿ ಪಾಪಿ ತಂದೆಯೊಬ್ಬ ತನ್ನ ಆರು ವರ್ಷದ ಮಗನನ್ನೇ ನದಿಗೆ ಎಸೆದು ಕೊಲೆ ಮಾಡಿದ್ದಾನೆ.

ಮಗು ನನಗೆ ಹುಟ್ಟಿಲ್ಲ ಎಂಬ ಅನುಮಾನದಿಂದ ತಂದೆ ತನ್ನ ಮಗುವನ್ನು ಕೃಷ್ಣಾ ನದಿಗೆ ಎಸೆದಿರುವ ಘಟನೆ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ನಡೆದಿದೆ. ಮಗ ತನ್ನ ಹೋಲಿಕೆ ಇಲ್ಲ ಎಂದು ಅನುಮಾನ ಪಟ್ಟ ತಂದೆ ಡಿಎನ್‌ಎ ಪರೀಕ್ಷೆ ಮಾಡಿಸುವ ಬದಲು ಮಗನನ್ನೇ ಕೊಲೆ ಮಾಡಿ ನದಿಗೆ ಎಸೆದಿದ್ದಾನೆ.

ವಿಜಯಪುರ ಜಿಲ್ಲೆಯ ನಾಗಠಾಣೆ ಗ್ರಾಮದ ಮಲ್ಲಿಕಾರ್ಜುನ ಆರೇಕರಿ ಮತ್ತು ಭಾಗ್ಯಶ್ರೀ ದಂಪತಿಯ ಆರು ವರ್ಷದ ಮಗ ಸಿದ್ಧಾರ್ಥ್‌ ತಂದೆಯಿಂದಲೇ ಮೃತಪಟ್ಟ ಮಗುವಾಗಿದೆ. ಸುಂದರವಾಗಿದ್ದ ಆ ಮಗು ತನ್ನ ತಂದೆಯನ್ನೇ ಹೋಲುತ್ತಿಲ್ಲ ಎಂದು ಕೆಲವು ಪರಿಚಯಸ್ಥರು ಹೇಳಿದ್ದ ವಿಷಯ ಮಲ್ಲಿಕಾರ್ಜುನನ ತಲೆಯಲ್ಲಿ ವಿಷ ಬಿತ್ತಿತ್ತು. ಕಳೆದ ಒಂದೂವರೆ ವರ್ಷಗಳಿಂದ ಇದೇ ವಿಷಯಕ್ಕೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಕೊನೆಗೆ ಈ ಸಂಶಯ ಕೊಲೆಯಲ್ಲಿ ಅಂತ್ಯವಾಗಿದೆ.

ಕಳೆದ ಮಾ. 16ರಂದು ಮಗನನ್ನು ಶಾಲಾ ಪ್ರವೇಶಕ್ಕಾಗಿ ಕರೆದುಕೊಂಡು ಹೋಗುವುದಾಗಿ ಹೆಂಡತಿಗೆ ಸುಳ್ಳು ಹೇಳಿದ ಮಲ್ಲಿಕಾರ್ಜುನ, ಮಗನಿಗೆ ಹೊಸ ಬಟ್ಟೆಗಳನ್ನು ತೊಡಿಸಿ ವಿಜಯಪುರದಿಂದ ಮಹಾರಾಷ್ಟ್ರದ ಕರಾಡ್‌ಗೆ ಕರೆದೊಯ್ದಿದ್ದಾನೆ. ಕರಾಡ್‌ ತಾಲೂಕಿನ ವಡೋಲಿ ಭಿಕೇಶ್ವರ ಬಳಿಯ ಕೃಷ್ಣಾ ನದಿಯ ದಡಕ್ಕೆ ಮಗನನ್ನು ಕರೆದೊಯ್ದ ಆತ, ಕಿಂಚಿತ್ತೂ ದಯೆಯಿಲ್ಲದೆ ಮಗನನ್ನು ತುಂಬಿ ಹರಿಯುತ್ತಿದ್ದ ನದಿಗೆ ಎಸೆದಿದ್ದಾನೆ.

ಮಗು ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟ ನಂತರ, ಏನೂ ಗೊತ್ತಿಲ್ಲದವನಂತೆ ಮನೆಗೆ ಮರಳಿದ್ದಾನೆ.ಮಾರ್ಚ್‌ 18 ರಂದು ಕರಾಡ್‌ ಪೊಲೀಸರಿಗೆ ನದಿಯ ದಡದಲ್ಲಿ ಮಗುವಿನ ಗುರುತು ಪತ್ತೆಯಾಗದ ಶವ ಸಿಕ್ಕಿತ್ತು. ಇತ್ತ ಮಲ್ಲಿಕಾರ್ಜುನ ಮಗನನ್ನು ಹಾಸ್ಟೆಲ್‌ಗೆ ಸೇರಿಸಿದ್ದೇನೆ ಎಂದು ಹೆಂಡತಿಯನ್ನು ನಂಬಿಸಿದ್ದ.

ಆದರೆ ಏಪ್ರಿಲ್‌ 1 ರಂದು ಮಗ ಸಿದ್ಧಾರ್ಥ್‌ನ ಹುಟ್ಟುಹಬ್ಬದ ದಿನ ಪತಿಯನ್ನು ಪದೇ ಪದೇ ಒತ್ತಾಯಿಸಿದಾಗ ಆತ ನೀಡಿದ ಅಸಂಬದ್ಧ ಉತ್ತರಗಳು ಅನುಮಾನ ಹುಟ್ಟಿಸಿದವು. ಕೂಡಲೇ ಆಕೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು.

ಪೊಲೀಸರ ತನಿಖೆಯಲ್ಲಿ ಸತ್ಯ ಒಪ್ಪಿಕೊಂಡ ಆರೋಪಿ ಕರ್ನಾಟಕ ಮತ್ತು ಮಹಾರಾಷ್ಟ್ರ ಪೊಲೀಸರು ಜಂಟಿಯಾಗಿ ತಾಂತ್ರಿಕ ವಿಶ್ಲೇಷಣೆ ನಡೆಸಿದಾಗ, ಮಲ್ಲಿಕಾರ್ಜುನನ ಮೊಬೈಲ್‌ ಲೊಕೇಶನ್‌ ಕರಾಡ್‌ ಬಳಿ ಇರುವುದು ಪತ್ತೆಯಾಯಿತು. ಪೊಲೀಸರ ತೀವ್ರ ವಿಚಾರಣೆಯ ಸಂದರ್ಭದಲ್ಲಿ ಸಂಶಯದ ಕಾರಣಕ್ಕಾಗಿ ಮಗನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.

RELATED ARTICLES

Latest News