ಬೆಂಗಳೂರು,ಏ.14- ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಪರಿಣಾಮ ಪ್ರಮುಖ ಹುದ್ದೆಯಲ್ಲಿರುವವರ ತಲೆದಂಡಗಳು ಆರಂಭವಾಗಿದ್ದು, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ನಜೀರ್ ಅಹಮದ್ ಅವರನ್ನು ವಜಾಗೊಳಿಸಲಾಗಿದೆ.
ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೂ ರಾಜೀನಾಮೆ ನೀಡುವಂತೆ ಸೂಚನೆ ನೀಡಲಾಗಿದ್ದು, ತಮ ಕುರ್ಚಿ ಉಳಿಸಿಕೊಳ್ಳಲು ಜಮೀರ್ ಕೊನೆಯ ಕ್ಷಣದ ಕಸರತ್ತು ಆರಂಭಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಶಿಸ್ತಿಗೆ ಪ್ರಥಮ ಆದ್ಯತೆ ಎಂಬ ಸಂದೇಶ ರವಾನಿಸಲು ನಜೀರ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.
2023ರ ಮೇ 20ರಂದು ಸಿದ್ದರಾಮಯ್ಯ 2ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಜೂನ್ 1ರಂದು ನಜೀರ್ ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ನೇಮಕ ಮಾಡಿದ್ದರು. ಇವರ ಜೊತೆಗೆ ಕೆ.ಗೋವಿಂದರಾಜ್ ಅವರನ್ನು ಕೂಡ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು. ಇಬ್ಬರೂ ಮುಖ್ಯಮಂತ್ರಿಯವರಿಗೆ ಎಡ-ಬಲ ಎಂಬಂತೆ ಕಾಣಿಸಿಕೊಳ್ಳುತ್ತಿದ್ದರು. ಯಾವುದೇ ಅಧಿಕೃತ ಸಭೆ ಸಮಾರಂಭಗಳಿರಲಿ, ಖಾಸಗಿ ಕಾರ್ಯಕ್ರಮಗಳಿರಲಿ ಈ ಇಬ್ಬರ ಹಾಜರಾತಿ ಶತಸ್ಸಿದ್ಧ ಎಂಬಂತಿತ್ತು.
ಬಜೆಟ್ ತಯಾರಿಕೆಯಂತಹ ಮಹತ್ವದ ಹಾಗೂ ರಹಸ್ಯ ಸಭೆಗಳಲ್ಲೂ ಇಬ್ಬರೂ ಕಾಣಿಸಿಕೊಳ್ಳುತ್ತಿದ್ದರು, ಕೆಲವು ವೇಳೆ ಇದು ಅತಿರೇಕ ಎನ್ನಿಸಿ ಸಚಿವರು, ಶಾಸಕರು, ಪ್ರಮುಖ ನಾಯಕರು ಅಸಮಾಧಾನ ತೋಡಿಕೊಂಡಿದ್ದ ಉದಾಹರಣೆಗಳೂ ಇವೆ.
ಕಳೆದ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಜಯಗಳಿಸಿದ ವೇಳೆ ವಿಜಯೋತ್ಸವ ಆಚರಣೆಯಾಗಿತ್ತು. ನೂಕು ನುಗ್ಗಲು, ಕಾಲ್ತುಳಿತದಿಂದಾಗಿ 11 ಮಂದಿ ಜೀವ ಕಳೆದುಕೊಂಡಿದ್ದರು. ಆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಗೋವಿಂದರಾಜ್ ಅವರು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಳೆದ ಒಂದು ವರ್ಷದಿಂದಲೂ ನಜೀರ್ ಅಹಮದ್ ರಾಜಕೀಯ ಕಾರ್ಯದರ್ಶಿ ಸ್ಥಾನದಲ್ಲಿ ಮುಂದುವರೆದಿದ್ದರು.
ಇತ್ತೀಚೆಗೆ ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆಯ ವೇಳೆ ಟಿಕೆಟ್ ಹಂಚಿಕೆ ವಿಚಾರವಾಗಿ ಅಲ್ಪಸಂಖ್ಯಾತ ಮುಖಂಡರು ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿದ್ದರು. ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅದನ್ನು ಅಂಗೀಕರಿಸಿದ್ದರು. ಸಾಲದೆಂಬಂತೆ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳನ್ನು ವಿಸರ್ಜನೆ ಮಾಡಿ, ಹೊಸ ತಂಡವನ್ನು ಕಟ್ಟಲು ಚಾಲನೆ ನೀಡಿದ್ದಾರೆ.
ಅಲ್ಪಸಂಖ್ಯಾತರ ಅಸಮಾಧಾನ:
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶ್ಯಾಮನೂರು ಶಿವಶಂಕರಪ್ಪ ಅವರ ಮೊಮಗ ಸಮರ್ಥ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಿದ್ದರಿಂದ ಅಸಮಾಧಾನಗೊಂಡಿದ್ದ ಅಬ್ದುಲ್ ಜಬ್ಬಾರ್, ನಜೀರ್ ಅಹಮದ್, ಸಚಿವ ಜಮೀರ್ ಅಹಮದ್ ಖಾನ್ ನಕಾರಾತಕ ಸಂದೇಶ ಬಿಂಬಿತವಾಗುವಂತೆ ಮಾಡಿದ್ದರು ಎಂಬ ಆರೋಪಗಳಿವೆ. ಟಿಕೆಟ್ ಹಂಚಿಕೆಯ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕೆಂದು ಸಚಿವ ಜಮೀರ್ ಪಟ್ಟು ಹಿಡಿದಿದ್ದರೆ, ಅಬ್ದುಲ್ ಜಬ್ಬಾರ್ ಅವರಿಗೆ ಟಿಕೆಟ್ ನೀಡಬೇಕೆಂದು ನಜೀರ್ ಅಹಮದ್ ಒತ್ತಾಯಿಸಿದ್ದರು.
ಅಬ್ದುಲ್ ಜಬ್ಬಾರ್ ವಿಷಯದಲ್ಲಿ ಸ್ಥಳೀಯ ನಾಯಕರಲ್ಲೇ ಒಮತ ಮೂಡದ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್, ಸಮರ್ಥ್ ಶ್ಯಾಮನೂರು ಅವರಿಗೆ ಟಿಕೆಟ್ ನೀಡಿದೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಶಾಸಕರಾದ ರಿಜ್ವಾನ್ ಅರ್ಷದ್, ಸಲೀಂ ಅಹಮದ್ ಮತ್ತಿತರರು ವಾದಿಸಿದ್ದರು. ಕೊನೆಗೂ ನಿನ್ನೆ ನಜೀರ್ ಅಹಮದ್ ಅವರನ್ನು ಸಂಪುಟ ದರ್ಜೆಯ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆ ಗೊಳಿಸಲಾಗಿದೆ.
ಅಧಿಕಾರದಿಂದ ಪದಚ್ಯುತಿಗೊಳಿಸುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಈ ಮೊದಲು ಮತಗಳ್ಳತನ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪ್ರತಿಯಾಗಿ ಮಾತನಾಡಿದ್ದ ಆಗಿನ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಈಗ ಅದೇ ರೀತಿ ನಜೀರ್ ಅಹಮದ್ ಅವರಿಗೂ ದಂಡನೆ ವಿಧಿಸಲಾಗಿದೆ.
ಜಮೀರ್‌ಗೂ ಕಂಟಕ:
ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧವಾಗಿ ಎಸ್‌ಡಿಪಿಐ ಅಭ್ಯರ್ಥಿಗೆ ಆರ್ಥಿಕ ನೆರವು ನೀಡಿದ ಆರೋಪ ಸಚಿವ ಜಮೀರ್ ಅಹಮದ್ ಖಾನ್ ಅವರ ಮೇಲಿದೆ. ಈ ಕಾರಣಕ್ಕೆ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂಬ ಒತ್ತಡಗಳು ಹೆಚ್ಚುತ್ತಿವೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ಸಿಂಗ್ ಸುರ್ಜೇವಾಲ ಅವರು ಉಪಚುನಾವಣೆಗಳ ಪರಿಸ್ಥಿತಿಗಳನ್ನು ಖುದ್ದಾಗಿ ಅವಲೋಕಿಸುವುದರಿಂದಾಗಿ ಮುಲಾಜಿಲ್ಲದೆ ಕ್ರಮಗಳಾಗುತ್ತಿವೆ. ಜಮೀರ್ ಅಹಮದ್ ತಲೆದಂಡದಿಂದ ತಪ್ಪಿಸಿಕೊಳ್ಳಲು ಕೆ.ಸಿ.ವೇಣುಗೋಪಾಲ್ ಅವರ ತವರು ರಾಜ್ಯ ಕೇರಳದ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಅದನ್ನು ಒಪ್ಪದೇ, ಉಪಚುನಾವಣಾ ಕಣದಿಂದ ದೂರ ಉಳಿದಿದ್ದನ್ನೇ ಪ್ರಮುಖವಾಗಿ ಪರಿಗಣಿಸಿ ಜಮೀರ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಅಥವಾ ರಾಜೀನಾಮೆ ಪಡೆಯಬೇಕೆಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ.
ಕುರ್ಚಿ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವಾಗಿ ಜಮೀರ್ ಅಹಮದ್ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕಾವೇರಿಯಲ್ಲಿ ಭೇಟಿ ಮಾಡಿ ವಿವರಣೆ ನೀಡಿದ್ದಾರೆ. ತಾವು ಕಾಂಗ್ರೆಸ್ ವಿರುದ್ಧವಾಗಿ ಬೇರೆ ಯಾವ ಪಕ್ಷದ ಅಭ್ಯರ್ಥಿಗೂ ಆರ್ಥಿಕ ನೆರವು ನೀಡಿಲ್ಲ. ಕೆ.ಸಿ.ವೇಣುಗೋಪಾಲ್ ಅವರು ಸೂಚನೆ ನೀಡಿದ್ದರಿಂದಾಗಿ ಕೇರಳ ರಾಜ್ಯದ ಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೆ.
ಕೊನೆಯ ಎರಡು ದಿನ ದಾವಣಗೆರೆ ಹಾಗೂ ಬಾಗಲಕೋಟೆಗಳಲ್ಲಿಯೂ ಪ್ರಚಾರ ಮಾಡಿದ್ದೇನೆ. ತಾವು ಯಾವುದೇ ಅಸಮಾಧಾನಗಳನ್ನು ವ್ಯಕ್ತಪಡಿಸಿಲ್ಲ. ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ ಎಂದು ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಇದಕ್ಕೆ ಒಪ್ಪದ ಕಾಂಗ್ರೆಸ್ ಹೈಕಮಾಂಡ್ ಸಚಿವರ ತಲೆದಂಡಕ್ಕೆ ನಿರ್ದೇಶನ ನೀಡಿದೆ ಎನ್ನಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಮೀರ್ ಅಹಮದ್ ಖಾನ್ ಅವರಿಗೆ ರಾಜೀನಾಮೆ ನೀಡುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ವಾತಾವರಣ ಸೃಷ್ಟಿಸಿದೆ.
