ಬೆಂಗಳೂರು,ಏ.14- ಮುಖ್ಯಮಂತ್ರಿ ಯಾಗಿ ಮುಂದುವರಿಯಬೇಕು ಎಂಬ ಜಿದ್ದಿಗೆ ಬಿದ್ದಿರುವ ಸಿದ್ದರಾಮಯ್ಯ ಅವರ ರೆಕ್ಕೆಪುಕ್ಕಗಳನ್ನು ಕತ್ತರಿಸಿ ನಿಶಕ್ತೀಕರಣಗೊಳಿಸುವ ವ್ಯವಸ್ಥಿತ ಕಾರ್ಯತಂತ್ರ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ.
ಸಿದ್ದರಾಮಯ್ಯ ಅವರ ಪರವಾಗಿ ಧ್ವನಿ ಎತ್ತಿದ ಬಹುತೇಕ ನಾಯಕರ ವಿರುದ್ಧ ಕಾಂಗ್ರೆಸ್‌ನಲ್ಲಿ ಒಂದಲ್ಲಾ ಒಂದು ಕಾರಣಕ್ಕೆ ಪದಚ್ಯುತಿಗೊಳಿಸುವ ಮೂಲಕ ಇತರರಲ್ಲೂ ಭಯ ಸೃಷ್ಟಿಸುವ ಪ್ರಯತ್ನಗಳಾಗುತ್ತಿವೆ.
ಸಚಿವರಾದ ಸತೀಶ್‌ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ ಕೆ.ಎನ್.ರಾಜಣ್ಣ ಸೇರಿದಂತೆ ಕೆಲವರು ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದರು.ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರು ಎಂತಹುದೇ ಕಠಿಣ ಸಂದರ್ಭ ಬಂದರೂ ತಮ ಬೆಂಬಲಿಗರನ್ನು ಕೈಬಿಡುವುದಿಲ್ಲ ಎಂಬ ಪ್ರತೀತಿ ಇದೆ. ಆದರೆ ಇದಕ್ಕೆ ಅಪವಾದ ಎಂಬಂತೆ
ಕೆ.ಎನ್.ರಾಜಣ್ಣ ಅವರ ತಲೆದಂಡವಾಗಿತ್ತು.
ಈ ಹಿಂದೆ ಸಿದ್ದರಾಮಯ್ಯ ಅವರ ಬಣದಲ್ಲಿದ್ದ ಕೆಲವು ನಾಯಕರು ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಪಟ್ಟು ಹಿಡಿದು ಹಾಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರಾಬಲ್ಯವನ್ನು ತಗ್ಗಿಸುವ ಪ್ರಯತ್ನ ನಡೆಸಿದ್ದರು.
ಈ ಹಿಂದೆ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಹೆಚ್ಚುವರಿ ಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಯ ಬೇಡಿಕೆ ವ್ಯಾಪಕ ಮುಜುಗರ ಉಂಟು ಮಾಡಿತ್ತು. ಎಷ್ಟು ಬಾರಿ ಸೂಚನೆ ನೀಡಿದ್ದರೂ ಕೂಡ ಸಚಿವರು ತಮ ಬೇಡಿಕೆಗಳನ್ನು ನಿಲ್ಲಿಸಿರಲಿಲ್ಲ. ಸಮಯಕ್ಕಾಗಿ ಕಾಯುತ್ತಿದ್ದ ಡಿ.ಕೆ.ಶಿವಕುಮಾರ್ ಅವರು ಮತಗಳ್ಳತನ ಪ್ರಕರಣದಲ್ಲಿ ಸಚಿವ ಕೆ.ಎನ್. ರಾಜಣ್ಣ ಅವರ ಹೇಳಿಕೆಗಳನ್ನೇ ಅಸ್ತ್ರ ಮಾಡಿಕೊಂಡು ಹೈಕಮಾಂಡ್‌ಗೆ ವರದಿ ನೀಡಿದ್ದರು. ಪರಿಣಾಮ ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲೇ ಮುಲಾಜಿಲ್ಲದೇ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಸಂದೇಶ ರವಾನೆಯಾಗಿತ್ತು.
ಕೊನೇ ಕ್ಷಣದವರೆಗೂ ರಾಜಣ್ಣ ಅವರನ್ನು ಉಳಿಸಿಕೊಳ್ಳಲು ಸಿದ್ದರಾಮಯ್ಯ ಹರಸಾಹಸ ನಡೆಸಿದ್ದರು. ಅದರೆ ಹೈಕಮಾಂಡ್ ಯಾವುದೇ ಸಹನೆ ತೋರಿಸದೇ ತನ್ನ ನಿಲುವಿಗೆ ಅಂಟಿಕೊಂಡಿತ್ತು. ವರಿಷ್ಠರ ಹಠದ ಮುಂದೆ ಸಿದ್ದರಾಮಯ್ಯ ಅವರ ಆಟ ನಡೆಯಲಿಲ್ಲ. ಕೊನೆಗೆ ರಾಜಣ್ಣ ಅವರನ್ನು ಸಂಪುಟದಿಂದಲೇ ವಜಾಗೊಳಿಸಲಾಯಿತು.
ಅಂತಿಮ ಕ್ಷಣದಲ್ಲಿ ಸಿದ್ದರಾಮಯ್ಯ ಅವರು, ಕನಿಷ್ಠ ರಾಜಣ್ಣ ಅವರಿಗೆ ಸ್ವಯಂ ರಾಜೀನಾಮೆ ನೀಡಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು. ಆದರೆ ಹೈಕಮಾಂಡ್ ಯಾವುದನ್ನೂ ಪರಿಗಣಿಸದೆ ರಾಜೀನಾಮೆ ಪಡೆಯುವ ಬದಲಾಗಿ ವಜಾಗೊಳಿಸುವ ನಿರ್ಣಯ ಕೈಗೊಳ್ಳುವಂತೆ ಒತ್ತಡ ಹಾಕಿತ್ತು.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ತಮ ಬೆಂಬಲಿಗರನ್ನು ಉಳಿಸಿಕೊಳ್ಳಲಾಗದೇ ಅಸಹಾಯಕರಾಗಿದ್ದರು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಕೆ.ಗೋವಿಂದರಾಜ್ ಅವರನ್ನು ಕೈಬಿಡುವ ಸಂದರ್ಭದಲ್ಲೂ ಇದೇ ಕಾರ್ಯತಂತ್ರವನ್ನು ಅನುಸರಿಸಲಾಗಿತ್ತು. ಈಗ ನಜೀರ್ ಅಹಮದ್ ಅವರ ಉಚ್ಚಾಟನೆಯ ಮೂಲಕ 3ನೇ ಬಾರಿಗೆ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾದಂತಿದೆ. ರಾಜಕಾರಣ ಅವಕಾಶಗಳ ಕಲೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪದೇ ಪದೇ ಹೇಳುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಅವಕಾಶವನ್ನು ತಮ ಅನುಕೂಲಕ್ಕೆ ಬಳಸಿಕೊಳ್ಳುವ ಮೂಲಕ ಡಿ.ಕೆ.ಶಿವಕುಮಾರ್ ರಾಜಕೀಯವಾಗಿ ಮೇಲುಗೈ ಸಾಧಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ತಮಗಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದು, ಸಿದ್ದರಾಮಯ್ಯ ಅವರೇ ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸುವಂತಹ ವಾತಾವರಣವನ್ನು ನಿರ್ಮಿಸಲಾಗುತ್ತಿದೆ.
ಎರಡನೇ ಬಾರಿ ಮುಖ್ಯಮಂತ್ರಿಯಾಗಿ 3 ವರ್ಷ ಅಧಿಕಾರ ಪೂರ್ಣಗೊಳಿಸುವ ಹೊಸ್ತಿಲಿನಲ್ಲಿರುವ ಸಿದ್ದರಾಮಯ್ಯ ಅವರಿಗೆ ದಿನೇದಿನೇ ರಾಜಕೀಯ ಪರಿಸ್ಥಿತಿ ಹದಗೆಡುವಂತಾಗಿದೆ. ಬೆಂಬಲಿಗರನ್ನು ಬಲಿಕೊಟ್ಟು ಅಧಿಕಾರದಲ್ಲಿ ಮುಂದುವರಿಯಬೇಕೇ? ಎಂಬ ಜಿಜ್ಞಾಸೆ ಕಾಡುವಂತಾಗಿದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಈಗಾಗಲೇ ಎರಡು ತಲೆದಂಡಗಳಾಗಿವೆ. ಇನ್ನೂ ಪ್ರಮುಖ ನಾಯಕರ ತಲೆದಂಡದ ಮುನ್ಸೂಚನೆ ಇದೆ. ಫಲಿತಾಂಶ ಬಳಿಕ ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ ನೀಡಬೇಕೆಂದು ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಒಂದು ವೇಳೆ ಅದು ಘಟಿಸಿದ್ದೇ ಆದರೆ ಸಿದ್ದರಾಮಯ್ಯ ನಿಸ್ಸಹಾಯಕರು ಎಂಬ ಸಂದೇಶ ರವಾನೆಯಾಗಲಿದ್ದು, ಅಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಯವರು ತಮ ಸ್ವಾಭಿಮಾನವನ್ನು ಬದಿಗಿಟ್ಟು ಕುರ್ಚಿ ಉಳಿಸಿಕೊಳ್ಳುತ್ತಾರೆಯೇ ಎಂಬ ಪ್ರಶ್ನೆ ಕಾಡಲಾರಂಭಿಸಿದೆ.
