ನವದೆಹಲಿ,ಏ.14- ಮುಂದಿನ 2029ರಲ್ಲಿ ನಡೆಯುವ ಲೋಕಸಭೆ ಹಾಗೂ ವಿವಿಧ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಸಂಪೂರ್ಣ ಜಾರಿಗೆ ಬಂದರೆ, ಭಾರತೀಯ ಪ್ರಜಾಪ್ರಭುತ್ವ ಇನ್ನಷ್ಟು ಬಲಿಷ್ಠ ಮತ್ತು ಚೈತನ್ಯಮಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ ಮಹಿಳೆಯರಿಗೆ ಬರೆದ ಪತ್ರದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮಾಡುತ್ತಿರುವ ಹಿನ್ನೆಲೆಯಲ್ಲಿ ವಿಧಾನಮಂಡಲಗಳಲ್ಲಿ ಅವರ ಪ್ರತಿನಿಧಿತ್ವ ಹೆಚ್ಚುವುದು ಅತ್ಯವಶ್ಯಕ ಎಂದು ಮೋದಿ ತಿಳಿಸಿದ್ದಾರೆ.ಇದೇ ವೇಳೆ ಸಂಸತ್ತಿನಲ್ಲಿ ನಾರಿ ಶಕ್ತಿ ವಂದನ ಅಧಿನಿಯಂ ಗೆ ಅಗತ್ಯ ತಿದ್ದುಪಡಿ ತಕ್ಷಣ ಅಂಗೀಕರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಏಪ್ರಿಲ್ 16ರಿಂದ ಆರಂಭವಾಗುವ ಮೂರು ದಿನಗಳ ವಿಶೇಷ ಸಂಸತ್ ಅಧಿವೇಶನದಲ್ಲಿ ಈ ತಿದ್ದುಪಡಿಗಳನ್ನು ಅಂಗೀಕರಿಸಬೇಕು ಆದರೆ, ಇನ್ನಷ್ಟು ವಿಳಂಬವಾದರೆ ಅದು ಭಾರತದ ಮಹಿಳೆಯರಿಗೆ ಅನ್ಯಾಯವಾಗುತ್ತದೆ ಎಂದು ತಿಳಿಸಿದ್ದಾರೆ.ಭಾರತದ ಹೆಣ್ಣುಮಕ್ಕಳು ತಮ ಹಕ್ಕಿಗಾಗಿ ಅನಂತ ಕಾಲ ಕಾಯಲು ಹೇಳಲು ಸಾಧ್ಯವಿಲ್ಲ. ವಿಧಾನಮಂಡಲಗಳಲ್ಲಿ ಮಹಿಳೆಯರ ಧ್ವನಿ ಬಲವಾದರೆ ಪ್ರಜಾಪ್ರಭುತ್ವದ ಧ್ವನಿಯೇ ಬಲವಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ.
ಇದೇ ವೇಳೆ, ಮುಂಬರುವ ಸಂಸತ್ ಅಧಿವೇಶನದಲ್ಲಿ ಸಂವಿಧಾನ ತಿದ್ದುಪಡಿ ಅಂಗೀಕಾರಕ್ಕಾಗಿ ದೇಶದ ಮಹಿಳೆಯರು ಆಶೀರ್ವಾದ ನೀಡಬೇಕು ಮತ್ತು ತಮ ಸ್ಥಳೀಯ ಸಂಸದರಿಗೆ ಪತ್ರ ಬರೆದು ಬೆಂಬಲ ನೀಡಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.
2023ರ ಸೆಪ್ಟೆಂಬರ್‌ನಲ್ಲಿ ಸಂಸತ್ ನಾರಿ ಶಕ್ತಿ ವಂದನ ಅಧಿನಿಯಂ ಅನ್ನು ಅಂಗೀಕರಿಸಿತ್ತು. ಈ ಕಾಯ್ದೆಯಡಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33% ಸ್ಥಾನಗಳನ್ನು ಮೀಸಲಿಡುವ ವ್ಯವಸ್ಥೆ ಮಾಡಲಾಗಿದೆ.ಈ ತಿದ್ದುಪಡಿ ಜಾರಿಯಾದರೆ ಲೋಕಸಭಾ ಸ್ಥಾನಗಳ ಸಂಖ್ಯೆ 816ಕ್ಕೆ ಏರಿಕೆಯಾಗಲಿದ್ದು, ಅದರಲ್ಲಿ 273 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತದೆ.
ಪ್ರಸ್ತುತ ಕಾನೂನಿನ ಪ್ರಕಾರ, 2027ರ ಜನಗಣತಿಯ ನಂತರ ನಡೆಯುವ ಡಿಲಿಮಿಟೇಶನ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ (ಸುಮಾರು 2034ರವರೆಗೆ) ಈ ಮೀಸಲಾತಿ ಜಾರಿಗೆ ಬರುವುದಿಲ್ಲ. ಆದ್ದರಿಂದ, 2029ರ ಚುನಾವಣೆಯಿಂದಲೇ ಈ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ತಿದ್ದುಪಡಿ ತರಲು ಮುಂದಾಗಿದೆ.
