Homeರಾಷ್ಟ್ರೀಯಕ್ಲೇರ್‌ ಮಜುಂದಾರ್‌ ಬಯೋಕಾನ್‌ನ ಮುಂದಿನ ಸಾರಥಿ

ಕ್ಲೇರ್‌ ಮಜುಂದಾರ್‌ ಬಯೋಕಾನ್‌ನ ಮುಂದಿನ ಸಾರಥಿ

Biocon founder Kiran Mazumdar Shaw announces succession plan

ಬೆಂಗಳೂರು,ಮೇ 6 : ಭಾರತದ ಪ್ರಮುಖ ಜೈವಿಕ ತಂತ್ರಜ್ಞಾನ ಕಂಪನಿ ಬಯೋಕಾನ್‌ ಮುಂದಿನ ಹಂತದ ಸಾರಥಿಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಜಾಗತಿಕ ಮಟ್ಟಕ್ಕೆ ಬಯೋಕಾನ್‌ ಸಂಸ್ಥಾಪಕಿ ಕಿರಣ್‌ ಮಜುಂದಾರ್‌ ಶಾ ತಮ ಉತ್ತರಾಧಿಕಾರಿಯನ್ನು ಘೋಷಿಸಿ ಉದ್ಯಮ ಜಗತ್ತನ್ನು ಅಚ್ಚರಿಗೊಳಿಸಿದ್ದಾರೆ.

ತಮ ಸೋದರನ ಮಗಳು ಕ್ಲೇರ್‌ ಮಜುಂದಾರ್‌ ಅವರು ಬಯೋಕಾನ್‌ನ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ಘೋಷಿಸಿದ್ದಾರೆ. 37 ವರ್ಷದ ಕ್ಲೇರ್‌ ಮಜುಂದಾರ್‌, ಉನ್ನತ ಶಿಕ್ಷಣ ಪಡೆದು,ಉದ್ಯಮ ಅನುಭವ ಹೊಂದಿರುವ ಜೈವಿಕ ವಿಜ್ಞಾನ ತಜ್ಞೆಯಾಗಿದ್ದಾರೆ.

ಆಕೆಯ ತಂದೆ-ತಾಯಿ ಇಬ್ಬರೂ ಅಮೆರಿಕದ ಕಂಪ್ಯೂಟರ್‌ ಸೈನ್ಸ್ ಪ್ರಾಧ್ಯಾಪಕರು. ಅವರ ಸಹೋದರ ಎರಿಕ್‌ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಕ್ಯಾಲ್ಟೆಕ್‌)ಯಲ್ಲಿ ಪ್ರಾಧ್ಯಾಪಕರಾಗಿದ್ದು, ಕೃತಕ ಬುದ್ಧಿಮತ್ತೆ ಕ್ಷೇತ್ರದ ಪರಿಣತರಾಗಿದ್ದಾರೆ.

ಕ್ಲೇರ್‌ ಮಸಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ)ಯಿಂದ ಜೈವಿಕ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಜೊತೆಗೆ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯದಿಂದ ಎಂಬಿಎ ಹಾಗೂ ಕ್ಯಾನ್ಸರ್‌ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನ್ನೂ ಪಡೆದಿದ್ದಾರೆ.
ಕಳೆದ 2018ರಲ್ಲಿ ಅವರು ಬಿಕಾರಾ ಥೆರಪ್ಯೂಟಿಕ್ಸ್ ಸಂಸ್ಥೆಯನ್ನು ಸ್ಥಾಪಿಸಿದ್ದು, ಅದು ಈಗ ದ್ವಿ-ನಿರ್ದಿಷ್ಟ ಆಂಟಿಬಾಡಿಗಳ ಆಧರಿತ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ತೊಡಗಿರುವ ಕ್ಲಿನಿಕಲ್‌ ಹಂತದ ಕಂಪನಿಯಾಗಿ ಬೆಳೆದಿದೆ.

ಅವರ ನೇತೃತ್ವದಲ್ಲಿ ಈ ಸಂಸ್ಥೆ 2024ರಲ್ಲಿ ನ್ಯಾಸ್ಡಾಕ್‌ನಲ್ಲಿ ಪಟ್ಟಿ ಮಾಡಲಾಗಿದೆ. ಇದಲ್ಲದೆ, ಕ್ಲೇರ್‌ ಅವರು ರಿಲೇ ಥೆರಪ್ಯೂಟಿಕ್‌್ಸ ಮತ್ತು ನೂರಾ ಹೆಲ್ತ್‌ ಸಂಸ್ಥೆಗಳ ನಿರ್ದೇಶಕ ಮಂಡಳಿಗಳಲ್ಲೂ ಸದಸ್ಯರಾಗಿದ್ದಾರೆ.

ಕಿರಣ್‌ ಮಜುಂದಾರ್‌ ಶಾ ಅವರು 1978ರಲ್ಲಿ ಬೆಂಗಳೂರು ನಗರದಲ್ಲಿ ಕೇವಲ 10,000 ಬಂಡವಾಳದಿಂದ ಬಯೋಕಾನ್‌ ಸಂಸ್ಥೆಯನ್ನು ಪ್ರಾರಂಭಿಸಿ, ನಾಲ್ಕು ದಶಕಗಳಲ್ಲಿ ದೇಶದ ಅತಿ ದೊಡ್ಡ ಜೈವಿಕ ತಂತ್ರಜ್ಞಾನ ಕಂಪನಿಯನ್ನಾಗಿ ಬೆಳೆಸಿದ್ದಾರೆ.

ತಮ ನಿರ್ಧಾರ ಕುರಿತು ಮಾತನಾಡಿದ ಅವರು,ನಾನು ಬಯೋಕಾನ್‌ನ ಏಕೈಕ ಮಾಲೀಕಳಾಗಿದ್ದೇನೆ. ಅದನ್ನು ಸುರಕ್ಷಿತ ಕೈಗಳಿಗೆ ಒಪ್ಪಿಸುವುದು ನನಗೆ ಮುಖ್ಯ. ಕ್ಲೇರ್‌ ನನ್ನ ಉತ್ತರಾಧಿಕಾರಿಯಾಗಲು ಸಮರ್ಥಳಾಗಿದ್ದಾಳೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ಒಬ್ಬ ಮಹಿಳೆ ನಾಲ್ಕು ದಶಕಗಳಲ್ಲಿ ನಿರ್ಮಿಸಿದ ಬಯೋಕಾನ್‌ ಎಂಬ ದೈತ್ಯ ಸಂಸ್ಥೆಯನ್ನು ಈಗ ಮತ್ತೊಬ್ಬ ಮಹಿಳೆ ಮುಂದಿನ ಹಂತಕ್ಕೆ ಕೊಂಡೊಯ್ಯಲಿದ್ದಾರೆ. ಕಿರಣ್‌ ಮಜುಂದಾರ್‌ ಶಾ ಅವರಿಗೆ ಮಕ್ಕಳಿಲ್ಲ.ಇಂದು ಅವರು ಬಯೋಕಾನ್‌ ಸಂಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಉತ್ತರಾಧಿಕಾರಿಯಾಗಿ ಕ್ಲೇರ್‌ ಅವರನ್ನು ಘೋಷಿಸಿದ್ದಾರೆ.

RELATED ARTICLES

Latest News