Homeರಾಜ್ಯರಾಜ್ಯಾದ್ಯಂತ ಮಿತಿಮೀರಿದ ಬೀದಿ ನಾಯಿಗಳ ಹಾವಳಿ

ರಾಜ್ಯಾದ್ಯಂತ ಮಿತಿಮೀರಿದ ಬೀದಿ ನಾಯಿಗಳ ಹಾವಳಿ

Stray dog ​​menace across the state

ಬೆಂಗಳೂರು, ಮೇ 6- ರಾಜ್ಯಾದ್ಯಂತ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸುಪ್ರೆಂ ಕೋರ್ಟ್‌ನಿಂದ ಸ್ಪಷ್ಟ ಮಾರ್ಗಸೂಚಿಗಳು ಇದ್ದರೂ, ಸ್ಥಳೀಯ ಸಂಸ್ಥೆಗಳು ಸಮರ್ಪಕ ಕ್ರಮ ಕೈಗೊಳ್ಳದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.

ಬೀದಿ ನಾಯಿಗಳಿಗೆ ಆಶ್ರಯ (ಶೆಲ್ಟರ್‌) ಕಲ್ಪಿಸುವುದು, ಸಂತಾನೋತ್ಪತ್ತಿ ನಿಯಂತ್ರಣ (ಸ್ಟೆರಿಲೈಸೇಶನ್‌) ಮತ್ತು ಲಸಿಕಾ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕೆಂದು ಸೂಚನೆ ಇದ್ದರೂ, ಜಾರಿಗೆ ಮಾತ್ರ ವಿಳಂಬವಾಗುತ್ತಿದೆ. ಪರಿಣಾಮವಾಗಿ ಪ್ರತಿದಿನವೂ ರಾಜ್ಯದ ವಿವಿಧ ಭಾಗಗಳಿಂದ ಬೀದಿ ನಾಯಿ ಕಡಿತದ ಪ್ರಕರಣಗಳು ವರದಿಯಾಗುತ್ತಿವೆ.

ಬೆಂಗಳೂರಿನ ಜಿಬಿಎ ವ್ಯಾಪ್ತಿಯಲ್ಲೇ ಸದ್ಯ ಸುಮಾರು 2 ಲಕ್ಷ 79 ಸಾವಿರ ಬೀದಿ ನಾಯಿಗಳಿವೆ ಎನ್ನಲಾಗಿದೆ. ಕಳೆದ ಆರು ತಿಂಗಳಲ್ಲಿ ಮಾತ್ರ ನಗರದಲ್ಲಿ 13,821 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಇದು ನಗರದಲ್ಲಿ ಪರಿಸ್ಥಿತಿ ಎಷ್ಟರ ಮಟ್ಟಿಗೆ ಗಂಭೀರವಾಗಿದೆ ಎಂಬುದನ್ನು ತೋರಿಸುತ್ತದೆ.

ಇನ್ನೊಂದೆಡೆ, ರಾಜ್ಯದ ಮಟ್ಟದಲ್ಲಿ ಕಳೆದ ಒಂದು ವರ್ಷದಲ್ಲಿ ಸುಮಾರು 2.05 ಲಕ್ಷ ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಇದೇ ಅವಧಿಯಲ್ಲಿ 25 ಮಂದಿ ಬೀದಿ ನಾಯಿಗಳ ದಾಳಿಯಿಂದ ಸಾವನ್ನಪ್ಪಿರುವುದು ಆತಂಕಕಾರಿ ಸಂಗತಿ. ಜೊತೆಗೆ, ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ಅಂದಾಜಿಸಲಾಗಿದೆ. ತಜ್ಞರ ಪ್ರಕಾರ, ಸಮಸ್ಯೆ ನಿಯಂತ್ರಣಕ್ಕೆ ಬರುವುದಕ್ಕೆ ಸಮಗ್ರ ಕಾರ್ಯಯೋಜನೆ ಅಗತ್ಯ. ಕೇವಲ ನಾಯಿಗಳನ್ನು ಹಿಡಿದು ಬಿಡುವುದು ಅಥವಾ ಸ್ಥಳಾಂತರಿಸುವುದು ಪರಿಹಾರವಲ್ಲ. ಅದರ ಬದಲಿಗೆ, ವ್ಯಾಪಕವಾಗಿ ಸ್ಟೆರಿಲೈಸೇಶನ್‌, ಲಸಿಕೆ, ಮತ್ತು ಕಸ ನಿರ್ವಹಣೆಯಲ್ಲಿನ ಸುಧಾರಣೆಗಳು ಅಗತ್ಯವಿದೆ.

ಸಾರ್ವಜನಿಕರು ಕೂಡ ಎಚ್ಚರಿಕೆಯಿಂದ ಇರಬೇಕು. ವಿಶೇಷವಾಗಿ ಮಕ್ಕಳು ಹಾಗೂ ವೃದ್ಧರು ಬೀದಿ ನಾಯಿಗಳಿಂದ ದೂರವಿರಬೇಕು. ಕಡಿತದ ಸಂದರ್ಭಗಳಲ್ಲಿ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ. ಪಶು ಇಲಾಖೆಯ ಆಡಳಿತದ ನಿರ್ಲಕ್ಷ್ಯ ಮತ್ತು ಸಮರ್ಪಕ ಯೋಜನೆಯ ಕೊರತೆಯಿಂದ ಬೀದಿ ನಾಯಿಗಳ ಸಮಸ್ಯೆ ನಿಯಂತ್ರಣಕ್ಕೆ ಸಿಗದೆ, ಜನರ ಸುರಕ್ಷತೆಗೆ ಸವಾಲಾಗಿ ಪರಿಣಮಿಸಿದೆ.

RELATED ARTICLES

Latest News