ಬೆಂಗಳೂರು, ಮೇ.8- ಸುಪ್ರೀಂ ಕೋರ್ಟ್ ಸೂಚನೆಯಂತೆ ಜೂ. 20 ರಿಂದ 24ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಗ್ರೇಶಿ ಇಂದಿಲ್ಲಿ ತಿಳಿಸಿದರು.
ಪಂಚ ಪಾಲಿಕೆಗಳ ಚುನಾವಣೆ ಸಂಬಂಧ ಇಂದು ಆಯೋಗದಲ್ಲಿ ಕರೆಯಲಾಗಿದ್ದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಚುನಾವಣಾ ದಿನಾಂಕ ಪ್ರಕಟ ಮಾತ್ರ ಬಾಕಿ ಇದೆ. ಜಿಬಿಎ ಮನವಿ ಪತ್ರ ನೀಡಿ ಸ್ವಲ್ಪ ಕಾಲ ಮುಂದೂಡುವಂತೆ ಕೇಳಿ ಕೊಂಡಿದ್ದರು.ಆದರೆ, ಜೂನ್ 30 ರೊಳಗೆ ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳಿಗೆ ಚುನಾವಣೆ ಮುಗಿಸಬೇಕಿರುವ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿರುವುದರಿಂದ ಚುನಾವಣೆ ಮುಂದೂಡುವ ಅಧಿಕಾರ ನನ್ನಗಿಲ್ಲ ಎಂದರು.
ಜೂ.24 ರೊಳಗೆ ಸರ್ಕಾರಿ ಪ್ರಾಯೋಜಿತ ಯಾವುದೇ ಕಾರ್ಯಕ್ರಮಗಳಿದ್ದರೆ ಶೀಘ್ರವೇ ಮುಗಿಸಲು ಸೂಚನೆ ನೀಡಿದರು ಹಾಗೂ ಚುನಾವಣೆ ದಿನಾಂಕ ಶೀಘ್ರದಲ್ಲೇ ಜಾರಿ ಆಗುವ ಬಗ್ಗೆ ಜಿಬಿಎ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜೂನ್ 20 ರಿಂದ ಜೂನ್ 24 ರೊಳಗೆ ಚುನಾವಣೆ ನಡೆಸಬೇಕಾಗಿದೆ ಆದರೆ ಯಾವ ದಿನ ಚುನಾವಣೆ ಮಾಡಬೇಕು ಅನ್ನುವುದನ್ನು ಒಂದು ವಾರದಲ್ಲಿ ನಿಗದಿ ಪಡಿಸುತ್ತೇವೆ ಎಂದು ಅವರು ತಿಳಿಸಿದರು.ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಗಡುವಿನೊಳಗೆ ಚುನಾವಣೆ ನಡೆಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಜಿಬಿಎ ನೂರು ಸಮಸ್ಯೆ ಹೇಳಲಿ ಅದಕ್ಕೆ ನಾವು ಕೇರ್ ಮಾಡಲ್ಲ. ಜೂ.20 ರಿಂದ 24ರ ನಡುವಿನ ಅವಧಿಯಲ್ಲಿ ಚುನಾವಣೆ ನಡೆಸುವುದು ಕಡ್ಡಾಯ ಎಂದರು.ಒಂದು ವಾರ ಕಾಯುತ್ತೇನೆ, ಅವರು ಹೇಳಿದರೂ ಬಿಟ್ಟರೂ ನಾನು ಈ ಅವಧಿಯಲ್ಲಿ ಚುನಾವಣೆ ನಡೆಸಿ ತೀರುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ಖಚಿತಪಡಿಸಿದರು.
ಚುನಾವಣೆಗೆ ಸಿದ್ದತೆ: ಜಿಬಿಎ ಚುನಾವಣೆ ಸಂಬಂಧ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಚುನಾವಣಾ ಸಿದ್ಧತೆ ಏನೆಲ್ಲ ತಯಾರಿ ಆಗಬೇಕು ಅನ್ನೋ ಚರ್ಚೆ ನಡೆಯಿತು. ಚುನಾವಣೆಗೆ ದಿನಾಂಕ ನಿಗದಿಪಡಿಸುವ ನಿರ್ಧಾರವನ್ನು ಚುನಾವಣಾ ಆಯೋಗ ತೆಗೆದುಕೊಳ್ಳಲಿದೆ ಎಂದರು. ಚುನಾವಣೆಗೆ ಆರ್ಒ, ಎಆರ್ಒ ಹಾಗೂ ಬಿಎಲ್ಒ ಗಳ ನೇಮಕಾತಿಗೆ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯುಕ್ತರು ಸೂಚನೆ ನೀಡಿದ್ದಾರೆ ಅದನ್ನು ಪಾಲಿಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಈಗಾಗಲೇ ವಾರ್ಡ್ ವಿಂಗಡಣೆ, ಮೀಸಲಾತಿ ಹಾಗೂ ಅಂತಿಮ ಮತದಾರರ ಪಟ್ಟಿ ಸಿದ್ಧಗೊಂಡಿದ್ದು, ಚುನಾವಣೆಗೆ ಬೇಕಾದ ಪೂರ್ವ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ. ಇದರ ಜೊತೆಗೆ ವಾರ್ಡುವಾರು ಮತದಾನ ಕೇಂದ್ರದ ಪಟ್ಟಿಯನ್ನು ಆಯೋಗದ ಅನುಮೋದನೆ ಪಡೆದು ಪ್ರಚುರಪಡಿಸುವುದು, ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳ ನೇಮಕಾತಿ ಅಧಿಸೂಚನೆ ಹೊರಡಿಸುವುದು, ಮತಗಟ್ಟೆ ಸಿಬ್ಬಂದಿ ನೇಮಕ ಮತ್ತು ತರಬೇತಿ, ಮತಪೆಟ್ಟಿಗೆಗಳ ಎತ್ತುವಳಿ, ಸಾಗಾಣಿಕೆ, ಸಂಗ್ರಹಣೆ ಸಂಬಂಧ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವುದು, ಮಸ್ಟರಿಂಗ್, ಡಿ-ಮಸ್ಟರಿಂಗ್ ಮತ್ತು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸುವುದು, ಭದ್ರತಾ ಕೊಠಡಿ ವ್ಯವಸ್ಥೆ, ಸಾರ್ವಜನಿಕ ಸ್ಥಳಗಳಲ್ಲಿ ಪೋಸ್ಟರ್ ಮತ್ತು ಹೋರ್ಡಿಂಗ್ ಹಾಕುವುದನ್ನು ನಿಷೇಧಿಸುವುದು ಹಾಗೂ ಚುನಾವಣಾ ಪ್ರಚಾರಕ್ಕಾಗಿ ಸಭೆ ನಡೆಸಲು ರಾಜಕೀಯ ಪಕ್ಷಗಳಗೆ ಅನುಮತಿ ನೀಡುವ ಕುರಿತಂತೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ಅವರು ಹೇಳಿದರು.ಪಂಚ ಪಾಲಿಕೆಗಳ ಆಯುಕ್ತರು ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
