ಕೇಪ್‌ಟೌನ್, ಮೇ 8- ಅಟ್ಲಾಂಟಿಕ್ ಸಮುದ್ರದಲ್ಲಿ ಸಂಚರಿಸುತ್ತಿದ್ದ ಡಚ್ ಧ್ವಜದ ಎಂವಿ ಹೊಂಡಿಯಸ್ ಕ್ರೂಸ್ ಹಡಗಿನಲ್ಲಿ ಅಪರೂಪದ ಹ್ಯಾಂಟಾವೈರಸ್ ಸೋಂಕು ಹಲವು ವಾರಗಳಿಂದ ಹರಡುತ್ತಿದ್ದು, ಇದುವರೆಗೆ ಕನಿಷ್ಠ ಮೂವರು ಪ್ರಯಾಣಿಕರು ಮೃತಪಟ್ಟಿದ್ದಾರೆ. ಹಲವರು ಅಸ್ವಸ್ಥರಾಗಿದ್ದಾರೆ.
ಈ ಹಡಗಿನಲ್ಲಿ ಇನ್ನೂ 140ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದು, ಹಡಗು ಇದೀಗ ಸ್ಪೇನ್ನ ಕ್ಯಾನರಿ ದ್ವೀಪಗಳತ್ತ ಸಾಗುತ್ತಿದೆ. ಈಗಾಗಲೇ ಹಡಗಿನಿಂದ ಇಳಿದಿರುವ ಪ್ರಯಾಣಿಕರು ಹಾಗೂ ಅವರ ಸಂಪರ್ಕಕ್ಕೆ ಬಂದವರನ್ನು ವಿವಿಧ ದೇಶಗಳ ಆರೋಗ್ಯ ಇಲಾಖೆ ಪತ್ತೆಹಚ್ಚಿ ನಿಗಾವಹಿಸುವ ಪ್ರಯತ್ನದಲ್ಲಿದೆ.
ಹ್ಯಾಂಟಾವೈರಸ್ ಸಾಮಾನ್ಯವಾಗಿ ಇಲಿ ಹಾಗೂ ಇತರ ಕೀಟಕಗಳ ಮೂಲಕ ಹರಡುವ ಸೋಂಕು. ಕೆಲ ಅಪರೂಪದ ಸಂದರ್ಭಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಹುದು. ಆದರೆ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಸಾರ್ವಜನಿಕರಿಗೆ ತಕ್ಷಣದ ದೊಡ್ಡ ಅಪಾಯ ಇಲ್ಲ, ಏಕೆಂದರೆ ವೈರಸ್ ಸುಲಭವಾಗಿ ಹರಡುವುದಿಲ್ಲ ಎಂದು ಹೇಳಲಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯಸ್ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಹ್ಯಾಂಟಾವೈರಸ್‌ನ ಮೊದಲ ಪ್ರಕರಣ ಏ.6ರಂದು ಪತ್ತೆಯಾಗಿದೆ. ರೋಗ ಲಕ್ಷಣಗಳು ಕಾಣಿಸಿಕೊಂಡ ವ್ಯಕ್ತಿ ಏಪ್ರಿಲ್ 11ರಂದು ಹಡಗಿನಲ್ಲಿ ಮೃತಪಟ್ಟರು. ಅವರಿಂದ ಯಾವುದೇ ಮಾದರಿಗಳನ್ನು ಸಂಗ್ರಹಿಸಲಾಗಿರಲಿಲ್ಲ. ಆದರೆ, ಅವರಲ್ಲಿ ಉಸಿರಾಟ ಸಂಬಂಧಿ ರೋಗ ಲಕ್ಷಣಗಳು ಇಲ್ಲದಿದ್ದರಿಂದ ಹ್ಯಾಂಟಾವೈರಸ್ ಬಗ್ಗೆ ಶಂಕೆ ವ್ಯಕ್ತವಾಗಿರಲಿಲ್ಲ.
ಆ ವ್ಯಕ್ತಿಯ ಪತ್ನಿ ಇದ್ದ ಹಡಗು ಸೇಂಟ್ ಹೆಲೆನಾ ದ್ವೀಪಕ್ಕೆ ತಲುಪಿತ್ತು. ಆಕೆ ಅಲ್ಲಿ ಕರಾವಳಿಯಲ್ಲಿ ಇಳಿದಿದ್ದರು. ಅವರಲ್ಲಿ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಏ.25ರಂದು ಜೋಹಾನ್ಸ ಬರ್ಗ್ ವಿಮಾನದಲ್ಲಿ ಪ್ರಯಾಣಿಸುವ ವೇಳೆ ಅವರ ಆರೋಗ್ಯ ಹದಗೆಟ್ಟು ಮರು ದಿನ ಮೃತಪಟ್ಟರು ಎಂದು ವಿವರಿಸಿದ್ದಾರೆ.
ಅವರಿಂದ ಮಾದರಿಗಳನ್ನು ಸಂಗ್ರಹಿಸಿ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಸಾಂಕ್ರಾಮಿಕ ರೋಗಗಳ ಸಂಸ್ಥೆ ಹ್ಯಾಂಟಾವೈರಸ್ ದೃಢಪಡಿಸಿದೆ ಎಂದು ಹೇಳಿದರು.ಹಿಂದಿನ ಆಂಡೀಸ್ ವೈರಸ್ ಸ್ಫೋಟಗಳಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ಹರಡಿರುವುದು ಆಪ್ತ ಹಾಗೂ ದೀರ್ಘಕಾಲದ ಸಂಪರ್ಕ ಹೊಂದಿದ್ದವರಲ್ಲಿ ಕಂಡುಬರುತ್ತಿತ್ತು. ವಿಶೇಷವಾಗಿ ಮನೆಯ ಸದಸ್ಯರು, ಆತೀಯ ಸಂಗಾತಿಗಳು ಹಾಗೂ ವೈದ್ಯಕೀಯ ಸೇವೆ ನೀಡುತ್ತಿದ್ದವರಲ್ಲಿ ಸೋಂಕು ಹರಡಿತ್ತು. ಪ್ರಸ್ತುತ ಪರಿಸ್ಥಿತಿಯಲ್ಲಿಯೂ ಅದೇ ರೀತಿಯ ಕಂಡುಬರುತ್ತಿದೆ ಎಂದು ಎಚ್ಚರಿಸಿದ್ದಾರೆ.
ಬಾಧಿತರ ಚಿಕಿತ್ಸೆಗೆ, ಪ್ರಯಾಣಿಕರ ಸುರಕ್ಷತೆ ಮತ್ತು ಗೌರವ ಕಾಪಾಡಲು ಹಾಗೂ ವೈರಸ್ ಮತ್ತಷ್ಟು ಹರಡುವುದನ್ನು ತಡೆಯಲು ಸಂಬಂಧಿತ ಸರ್ಕಾರಗಳು ಮತ್ತು ಪಾಲುದಾರರೊಂದಿಗೆ ಸಹಕಾರ ಮುಂದುವರಿಸಲಿದೆ ಎಂದಿದ್ದಾರೆ.
ಕೇಬೊ ವರ್ಡೆ, ನೆದರ್‌ಲ್ಯಾಂಡ್, ದಕ್ಷಿಣ ಆಫ್ರಿಕಾ, ಸ್ಪೇನ್ ಮತ್ತು ಯುನೈಟೆಡ್ ಕಿಂಗ್ಡಮ್ ಸರ್ಕಾರಗಳಿಗೆ ಅವರ ಸಮೀಪದ ಸಹಕಾರ ಮತ್ತು ಬೆಂಬಲಕ್ಕಾಗಿ ನಾನು ಧನ್ಯವಾದ ತಿಳಿಸುತ್ತೇನೆ. ದಕ್ಷಿಣ ಆಫ್ರಿಕಾದ , ಸೆನೆಗಲ್‌ನ ಇನ್ಸಿಟಿಟ್ಯೂಟ್ ಪಾಸ್ಟರ್ ಡಕಾರ್ ಹಾಗೂ ಸ್ವಿಟ್ಜರ್‌ಲ್ಯಾಂಡ್ ಸೇರಿದಂತೆ ತಾಂತ್ರಿಕ ಪರಿಣಿತಿ ಒದಗಿಸಿದ ಎಲ್ಲಾ ಪಾಲುದಾರರಿಗೂ ಕೃತಜ್ಞತೆಗಳು ಎಂದು ಹೇಳಿದ್ದಾರೆ.
ಏಪ್ರಿಲ್ 1ರಂದು ಹಡಗು ಅರ್ಜೆಂಟೀನಾದ ದಕ್ಷಿಣ ಭಾಗದ ಉಶುವಾಯಾ ನಗರದಿಂದ ಹೊರಟಿತು. ಏಪ್ರಿಲ್ 6 ರಂದು 70 ವರ್ಷದ ಡಚ್ ಪ್ರಯಾಣಿಕನಿಗೆ ಜ್ವರ, ತಲೆನೋವು ಹಾಗೂ ಅಜೀರ್ಣ ಲಕ್ಷಣಗಳು ಕಾಣಿಸಿಕೊಂಡವು. ಹಡಗೇರುವ ಮುನ್ನ ಆತ ಹಾಗೂ ಪತ್ನಿ ಅರ್ಜೆಂಟೀನಾ ಮತ್ತು ಚಿಲಿಯಲ್ಲಿ ಪ್ರವಾಸ ಮಾಡಿದ್ದರು.
ಏಪ್ರಿಲ್ 11ರಂದು ಆ ವ್ಯಕ್ತಿಗೆ ಉಸಿರಾಟದ ತೊಂದರೆ ಉಂಟಾಗಿ ಹಡಗಿನಲ್ಲೇ ಮೃತಪಟ್ಟರು. ಆ ವೇಳೆ ಸಾವಿನ ನಿಖರ ಕಾರಣ ಪತ್ತೆಯಾಗಿರಲಿಲ್ಲ.ಏಪ್ರಿಲ್ 15 ರಂದು ಟ್ರಿಸ್ಟನ್ ಡ ಕುನ್ಹಾ ದ್ವೀಪದಲ್ಲಿ ಆರು ಹೊಸ ಪ್ರಯಾಣಿಕರು ಹಡಗೇರಿದರು. ಮೃತ ವ್ಯಕ್ತಿಯ ಶವ ಇನ್ನೂ ಹಡಗಲ್ಲೇ ಇತ್ತು. ಏಪ್ರಿಲ್ 24 ರಂದು ಮೃತನ ಶವವನ್ನು ಸೇಂಟ್ ಹೆಲೆನಾ ದ್ವೀಪದಲ್ಲಿ ಇಳಿಸಲಾಯಿತು. ಅವರ ಪತ್ನಿ ಸೇರಿದಂತೆ 20ಕ್ಕೂ ಹೆಚ್ಚು ಪ್ರಯಾಣಿಕರು ಹಡಗಿನಿಂದ ಇಳಿದರು.
ಏಪ್ರಿಲ್ 25ರಂದು ಅಸ್ವಸ್ಥತೆಯ ಲಕ್ಷಣಗಳಿದ್ದ ಮೃತನ ಪತ್ನಿ ಸೇಂಟ್ ಹೆಲೆನಾದಿಂದ ದಕ್ಷಿಣ ಆಫ್ರಿಕಾಕ್ಕೆ ವಿಮಾನದಲ್ಲಿ ಪ್ರಯಾಣಿಸಿದರು. ಆ ವಿಮಾನದಲ್ಲಿ 88 ಮಂದಿ ಇದ್ದರು. ಏಪ್ರಿಲ್ 26 ರಂದು ದಕ್ಷಿಣ ಆಫ್ರಿಕಾದ ವಿಮಾನ ನಿಲ್ದಾಣದಲ್ಲಿ ಮತ್ತೊಂದು ವಿಮಾನಕ್ಕೆ ಹತ್ತುವ ವೇಳೆ ಡಚ್ ಮಹಿಳೆ ಕುಸಿದು ಬಿದ್ದು ಮೃತಪಟ್ಟರು.
ಏಪ್ರಿಲ್ 27ರಂದು ಹಡಗಿನಲ್ಲಿ ಮತ್ತೊಬ್ಬ ಬ್ರಿಟಿಷ್ ಪ್ರಯಾಣಿಕ ಅಸ್ವಸ್ಥರಾದರು. ಅವರನ್ನು ಮೊದಲು ಅಸೆನ್ಶನ್ ದ್ವೀಪಕ್ಕೆ, ನಂತರ ದಕ್ಷಿಣ ಆಫ್ರಿಕಾಕ್ಕೆ ಕರೆದೊಯ್ಯಲಾಯಿತು. ಅವರಿಗೆ ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ನ್ಯುಮೋನಿಯಾ ಲಕ್ಷಣಗಳು ಕಂಡುಬಂದವು.
ಏಪ್ರಿಲ್ 28 ರಂದು ಜರ್ಮನ್ ಮಹಿಳಾ ಪ್ರಯಾಣಿಕೆಯೂ ಅಸ್ವಸ್ಥರಾದರು. ಮೇ 2ರಂದು ಆಕೆ ಹಡಗಿನಲ್ಲೇ ಮೃತಪಟ್ಟರು. ದಕ್ಷಿಣ ಆಫ್ರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬ್ರಿಟಿಷ್ ವ್ಯಕ್ತಿಗೆ ಹ್ಯಾಂಟಾವೈರಸ್ ದೃಢಪಟ್ಟಿತ್ತು.
ಮೇ 3ರಂದು ವಿಶ್ವ ಆರೋಗ್ಯ ಸಂಸ್ಥೆ ಹಡಗಿನಲ್ಲಿ ಶಂಕಿತ ಹ್ಯಾಂಟಾವೈರಸ್ ಸ್ಫೋಟಕ್ಕೆ ಪ್ರತಿಕ್ರಿಯಿಸುತ್ತಿರುವುದಾಗಿ ಘೋಷಿಸಿತು.ಮೇ 4ರಂದು ದಕ್ಷಿಣ ಆಫ್ರಿಕಾದ ಅಧಿಕಾರಿಗಳು ಮೃತಪಟ್ಟ ಡಚ್ ಮಹಿಳೆಯ ದೇಹದ ಪರೀಕ್ಷೆಯಲ್ಲಿ ಹ್ಯಾಂಟಾವೈರಸ್ ದೃಢಪಡಿಸಿದರು. ಇದನ್ನು ಅಧಿಕೃತವಾಗಿ ಸಾಂಕ್ರಾಮಿಕ ಎಂದು ಪರಿಗಣಿಸಲಾಯಿತು.
ಮೇ 5ರಂದು ಕೇಪ್ ವರ್ಡೆ ಅಧಿಕಾರಿಗಳು ಹೆಚ್ಚಿನ ಪ್ರಯಾಣಿಕರನ್ನು ಇಳಿಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಹಡಗು ಮತ್ತು ಅಧಿಕಾರಿಗಳ ನಡುವೆ ತೀವ್ರ ಚರ್ಚೆ ನಡೆಯಿತು. ಇಬ್ಬರು ಸಿಬ್ಬಂದಿ ಗಂಭೀರ ಅಸ್ವಸ್ಥರಾಗಿದ್ದರು. ಹಡಗಿನ ವೈದ್ಯರೂ ಸೋಂಕಿಗೆ ಒಳಗಾಗಿದ್ದರು.
ಮೇ 6ರಂದು ಮೂರು ಅಸ್ವಸ್ಥರನ್ನು ಯುರೋಪಿನ ವಿಶೇಷ ಆಸ್ಪತ್ರೆಗೆ ವಿಮಾನದ ಮೂಲಕ ಕಳುಹಿಸಲಾಯಿತು. ಅವರಲ್ಲಿ ಇಬ್ಬರಿಗೆ ಹ್ಯಾಂಟಾವೈರಸ್ ದೃಢಪಟ್ಟಿತು. ಬಳಿಕ ಹಡಗು ಕ್ಯಾನರಿ ದ್ವೀಪಗಳತ್ತ ಹೊರಟಿತು.ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮತ್ತೊಬ್ಬ ಪ್ರಯಾಣಿಕನಿಗೂ ಸೋಂಕು ದೃಢಪಟ್ಟಿದ್ದು, ಒಟ್ಟು ದೃಢಪಟ್ಟ ಪ್ರಕರಣಗಳ ಸಂಖ್ಯೆ ಐದಕ್ಕೆ ಏರಿತು.
