ಬೆಂಗಳೂರು, ಮೇ 8- ಮೈಸೂರು ಮತ್ತು ಕೊಡುಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ವಿವಿಧ ಅಭಿವೃದ್ಧಿ ಯೋಜನೆ ಕುರಿತು ಚರ್ಚೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಕೆಆರ್ನಗರ ಮತ್ತು ಹುಣಸೂರಿನಲ್ಲಿ ಎರಡು ಏತ ನೀರಾವರಿ ಯೋಜನೆಗಳಿದ್ದು, ಅವುಗಳನ್ನು ಶೀಘ್ರವಾಗಿ ಆರಂಭಿಸಬೇಕು ಹಾಗೂ ಕೊಡಗಿನಲ್ಲಿ ಬಾಕಿಯಿರುವ ಏತ ನೀರಾವರಿ ಯೋಜನೆಗೆ ಕೇಂದ್ರದಿಂದ ಅಗತ್ಯವಿರುವ ಪೂರ್ವಾನುಮತಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಉಪ ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಹದಗೆಟ್ಟಿರುವ ಸೇತುವೆಗಳನ್ನು ದುರಸ್ತಿ ಮಾಡಲು ಒತ್ತಾಯಿಸಲಾಗಿದೆ. ಇದೊಂದು ಸೌಜನ್ಯದ ಭೇಟಿಯಾಗಿದ್ದು, ತಾತ ಆಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಇದೇ ವೇಳೆ ಶುಭ ಹಾರೈಸಿದ್ದೇನೆ ಎಂದು ಹೇಳಿದರು.
ಶಾಸಕರು ಹಾಗೂ ಇತರ ಜನ ಪ್ರತಿನಿಧಿಗಳು ಶಿಷ್ಟಾಚಾರದ ಲಾಭ ಪಡೆದು ಐಪಿಎಲ್ ಪಂದ್ಯಾವಳಿಯ ಟಿಕೆಟ್ ಕೇಳುವುದು ಸರಿಯಲ್ಲ. ಒಂದು ವೇಳೆ ಕ್ರಿಕೆಟ್ ಪಂದ್ಯಾವಳಿ ನೋಡಬೇಕಾದರೆ ಹಣ ಕೊಟ್ಟು ಟಿಕೆಟ್ ಖರೀದಿಸಬೇಕು ಅಥವಾ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಸದಸ್ಯರಾಗಿದ್ದರೆ ಅದರ ಲಾಭ ಪಡೆದು ಪಂದ್ಯಾವಳಿಗಳನ್ನು ವೀಕ್ಷಿಸಬಹುದು.
ಇದರಲ್ಲಿ ರಾಜಕೀಯ ಹೊರತಾಗಿ ಪಂದ್ಯಾವಳಿಗಳು ಆಯೋಜನೆಗೊಳ್ಳಬೇಕೆಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ಹಿಂದಿನ ಸರ್ಕಾರ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿತ್ತು. ಈಗ ದೇಶಭಕ್ತ ಪಕ್ಷ ಅಧಿಕಾರಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಟಿಎಂಸಿಯ ಧೋರಣೆಗಳು ಮತ್ತು ನಡವಳಿಕೆಗಳು ಸರಿಯಲ್ಲ ಎಂದರು.
