Thursday, April 16, 2026
Homeರಾಜ್ಯಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಅನುಮೋದನೆ

ಬೆಂಗಳೂರು-ಮುಂಬೈ ನಡುವೆ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಅನುಮೋದನೆ

Vande Bharat Sleeper To Now Connect Bengaluru-Mumbai, Railway Ministry Gives Approval

ಬೆಂಗಳೂರು,ಏ.11- ಬೆಂಗಳೂರು ಮತ್ತು ದೇಶದ ವಾಣಿಜ್ಯ ರಾಜಧಾನಿ ಮುಂಬೈ ನಡುವೆ ಸಂಪರ್ಕ ಕಲ್ಪಿಸುವ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಕೊನೆಗೂ ಹಸಿರುನಿಶಾನೆ ದೊರೆತಿದೆ. ಬೆಂಗಳೂರು ಮತ್ತು ಮುಂಬೈ ನಡುವೆ ವಂದೇ ಭಾರತ್‌ ಸ್ಲೀಪರ್‌ ರೈಲು ಸಂಚಾರಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅನುಮೋದನೆ ನೀಡಿದ್ದು, ಬಹು ದಿನಗಳ ಕನಸು ಕೊನೆಗೂ ಈಡೇರಿದೆ.

ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌ ಅವರಿಗೆ ಪತ್ರ ಬರೆದಿರುವ ಅಶ್ವಿನಿ ವೈಷ್ಣವ್‌ ಅವರು, ತಮ್ಮ ಬೇಡಿಕೆಯಂತೆ ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣಕ್ಕೆ ವಂದೇ ಭಾರತ್‌ ರೈಲನ್ನು ಏಪ್ರಿಲ್‌ 5ರಂದು ಅನುಮೋದನೆ ನೀಡಿದ್ದಾಗಿ ಪತ್ರದಲ್ಲಿ ತಿಳಿಸಲಾಗಿದೆ.

ಡಿಸೆಂಬರ್‌ 2ರಂದು ನೈಋತ್ಯ ರೈಲ್ವೆಯ(ಎನ್‌ಡಬ್ಲ್ಯುಆರ್‌) ಸ್ಥಾಯಿ ಸಮಿತಿಯ ಅಧ್ಯಯನ ಭೇಟಿಯ ಸಂದರ್ಭದಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಎಎಂವಿಟಿ ಬೆಂಗಳೂರು ಮೂಲ/ಅಂತ್ಯ ನಿಲ್ದಾಣವಾಗಿ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಒತ್ತಾಯಿಸಿದ್ದರು.

ಈಗ ಇರುವ ರೈಲುಗಳು ಪ್ರಯಾಣಕ್ಕೆ 24-30 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ಆದರೆ,ಬಸ್‌‍ಗಳು 16-18 ಗಂಟೆಗಳನ್ನು ತೆಗೆದುಕೊಳ್ಳುತ್ತವೆ. ನಮಗೆ ಬಸ್‌‍ನಷ್ಟು ವೇಗದ ರೈಲುಗಳು ಬೇಕು ಎಂದು ತಿಳಿಸಿದ್ದರು.

ಈಗ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳ ಸಾವಿರಾರು ಪ್ರಯಾಣಿಕರು ಹಾಗೂ ಮಹಾರಾಷ್ಟ್ರದ ಪುಣೆ, ಮುಂಬೈ ಇನ್ನಿತರ ನಗರಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ತ್ವರಿತ ಹಾಗೂ ಆರಾಮದಾಯಕ ರೈಲು ಸಾರಿಗೆ ಸಿಕ್ಕಂತಾಗಿದೆ.
ಕೇಂದ್ರದ ಈ ನಿರ್ಧಾರಕ್ಕಾಗಿ ಪಿಸಿ ಮೋಹನ್‌ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪ್ರಯಾಣಿಕರ ಪರವಾಗಿ ಧನ್ಯವಾದ ತಿಳಿಸಿದ್ದಾರೆ. ಈ ರೈಲು ಯಾವೆಲ್ಲ ಮಾರ್ಗದಲ್ಲಿ ಸಂಚರಿಸಲಿದೆ.

ಸತತ ಪ್ರಯತ್ನ: ರೈಲು ಸಂಚಾರಕ್ಕೆ ಒಪ್ಪಿಗೆ ಕಳೆದ ವರ್ಷ ಡಿಸೆಂಬರ್‌ 2 ರಂದು ನೈಋತ್ಯ ರೈಲ್ವೆ ಸ್ಥಾಯಿ ಸಮಿತಿಯ ಮಾರ್ಗ ಅಧ್ಯಯನಕ್ಕೆ ಬಂದಾಗ ಪಿಸಿ ಮೋಹನ್‌ ಅವರು ವಂದೇ ಭಾರತ್‌ ಸ್ಲೀಪರ್‌ ರೈಲನ್ನು ಪರಿಚಯಿಸಲು ಒತ್ತಾಯಿಸಿದ್ದರು.

ಸತತ ಪ್ರಯತ್ನದ ಭಾಗವಾಗಿ ರೈಲು ಕಾರ್ಯಾಚರಣೆಗೆ ಕೇಂದ್ರ ಒಪ್ಪಿಗೆ ನೀಡಿದೆ. ಸ್ಲೀಪರ್‌ ರೈಲು ಮಾರ್ಗ, ನಿಲುಗಡೆ ನಿಲ್ದಾಣಗಳು ಮುಂಬೈ-ಬೆಂಗಳೂರು ಸ್ಲೀಪರ್‌ ವಂದೇ ಭಾರತ್‌ ರೈಲು ಕೆಎಸ್‌‍ಆರ್‌ ಬೆಂಗಳೂರು ನಿಲ್ದಾಣದಿಂದ ತುಮಕೂರು, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ಪುಣೆ, ಲೋನಾವಲ, ಕಲ್ಯಾಣ್‌ ಜಂಕ್ಷನ್‌ ಮಾರ್ಗವಾಗಿ ಮುಂಬೈನ ಪ್ರಸಿದ್ಧ ಛತ್ರಪತಿ ಶಿವಾಜಿ ರೈಲು ನಿಲ್ದಾಣ ತಲುಪಲಿದೆ. ಆದರೆ ಈ ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ ಎನ್ನಲಾಗಿದೆ.

ರಾಜ್ಯ ಪ್ರವಾಸೋದ್ಯಮಕ್ಕೆ ಉತ್ತೇಜನ, ಸಾರಿಗೆಗೆ ಪೂರಕ ಕರ್ನಾಟಕದ ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಜಿಲ್ಲೆಗಳು ಹಾಗೂ ಅಕ್ಕಪಕ್ಕ ಜಿಲ್ಲೆಗಳ ಸುದೀರ್ಘ ಪ್ರಯಾಣದ ಪ್ರಯಾಣಿಕರಿಗೆ ಈ ರೈಲಿನಿಂದ ಅನುಕೂಲವಾಗಲಿದೆ. ಶೈಕ್ಷಣಿಕ, ಉದ್ಯೋಗ, ಪ್ರವಾಸೋಧ್ಯಮಕ್ಕೆ ಉತ್ತೇಜನ ಸಿಕ್ಕಂತಾಗುತ್ತದೆ.

ಕೈಗಾರಿಕೆ, ವ್ಯಾಪಾರ ವಹೀವಾಟು ವಿಚಾರದಲ್ಲೂ ಒಂದಷ್ಟು ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ. ಕರ್ನಾಟಕದ ಮೊದಲ ಸ್ಲೀಪರ್‌ ವಿಬಿ ರೈಲು ಮುಂಬೈ-ಬೆಂಗಳೂರು ಮಧ್ಯೆ ಸುಮಾರು 1211 ಕಿಲೋ ಮೀಟರ್‌ ದೂರವಿದೆ. ಇಷ್ಟು ದೂರವನ್ನು ಸುಮಾರು 20 ಗಂಟೆ ಒಳಗೆ ಕ್ರಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ರೈಲು ಬೆಂಗಳೂರು ಮತ್ತು ಮುಂಬೈಗೆ ಆಗಮನ, ನಿರ್ಗಮನ, ಸಮಯದ ಮಿತಿ, ವೇಳಾಪಟ್ಟಿಯನ್ನು ರೈಲ್ವೆ ಇಲಾಖೆ ಕೆಲವೇ ದಿನಗಳಲ್ಲಿ ಪ್ರಕಟಿಸಲಿದೆ. ಒಟ್ಟಾರೆ ನೋಡುವುದಾದರೆ ಬೆಂಗಳೂರು ಒಳಗೊಂಡಂತೆ ಕರ್ನಾಟಕಕ್ಕೆ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲು ಸಿಕ್ಕಂತಾಗಿದೆ.

RELATED ARTICLES

Latest News