Thursday, April 16, 2026
Homeರಾಜ್ಯಶೇ.33ರಷ್ಟು ಮಹಿಳಾ ಮೀಸಲಾತಿ : ಪಕ್ಷಾತೀತ ಬೆಂಬಲಕ್ಕೆ ಶೋಭಾ ಕರಂದ್ಲಾಜೆ ಮನವಿ

ಶೇ.33ರಷ್ಟು ಮಹಿಳಾ ಮೀಸಲಾತಿ : ಪಕ್ಷಾತೀತ ಬೆಂಬಲಕ್ಕೆ ಶೋಭಾ ಕರಂದ್ಲಾಜೆ ಮನವಿ

33% women's reservation: Shobha Karandlaje appeals for non-partisan support

ಬೆಂಗಳೂರು,ಏ.11- ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಹಿಳಾ ಮೀಸಲಾತಿ ಮಸೂದೆಯನ್ನು ಪಕ್ಷಬೇಧ ಮರೆತು ಪಕ್ಷಾತೀತವಾಗಿ ಎಲ್ಲರೂ ಸಂಸತ್ತಿನ ಉಭಯ ಸದನಗಳಲ್ಲಿ ಬೆಂಬಲ ನೀಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.

ಇದೇ 15 ಮತ್ತು 16ರಂದು ಸಂಸತ್‌ನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತು ವಿಶೇಷ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಎಲ್ಲರೂ ರಾಜಕೀಯ ಲಾಭ-ನಷ್ಟ ಯೋಚಿಸದೆ ಎಲ್ಲರೂ ಒಕ್ಕೋರಲಿನಿಂದ ಬೆಂಬಲ ನೀಡಬೇಕು. ಇದರಿಂದಾಗಿ ಮಹಿಳೆಯರ ದಶಕಗಳ ಕನಸು ನನಸಾಗಲಿದೆ ಎಂದು ಹೇಳಿದರು.

ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಮಹಿಳೆಯರಿಗೆ ಶಾಸನಸಭೆ ಗಳಲ್ಲಿ ಮೀಸಲಾತಿ ನೀಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಆದರೆ ಇದನ್ನು ಈಡೇರಿಸಲು ಯಾರೊಬ್ಬರು ಮುಂದಾಗಿರಲಿಲ್ಲ. ಭರವಸೆ ಕೇವಲ ಭರವಸೆಯಾಗಿಯೇ ಕಾಗದದ ಮೇಲೆ ಉಳಿದಿತ್ತು. ಈಗ ಈಡೇರಿಸುವ ಕಾಲ ಬಂದಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರಮೋದಿ ಅವರು ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಒತ್ತು ಕೊಟ್ಟಿದ್ದಾರೆ. ಶಾಸನಸಭೆಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರಬೇಕು ಎಂಬುದು ಅವರ ಅಭಿಲಾಷೆಯಾಗಿತ್ತು. ಹೀಗಾಗಿಯೇ ಮೀಸಲಾತಿ ಮಸೂದೆಯನ್ನು ಜಾರಿಗೆ ತರುತ್ತಿದ್ದಾರೆ. ಸಂಸತ್‌ನಲ್ಲಿ ಯಾವುದಾದರೂ ಸಲಹೆ, ಸೂಚನೆ, ಮಾರ್ಗದರ್ಶನ ಇದ್ದರೆ ಎಲ್ಲರೂ ನೀಡಬಹುದು. ಸರ್ಕಾರ ಅದನ್ನು ಸಕಾರಾತಕವಾಗಿ ಪರಿಗಣಿಸುತ್ತದೆ ಎಂದು ಹೇಳಿದರು.

15 ವರ್ಷದ ಹಿಂದೆ ಸಂಸತ್ತಿನಲಿ ಚರ್ಚೆಗೆ ಬಂದಾಗ ಮಸೂದೆಯ ಕಾಗದಪತ್ರಗಳನ್ನು ಹರಿದುಹಾಕಿದ ಘಟನೆ ನಡೆದಿತ್ತು. ಈ ಬಾರಿ ಂತಹ ಘಟನೆಗೆ ಅವಕಾಶ ಇರುವುದಿಲ್ಲ. ಚರ್ಚೆಯಲ್ಲಿ ಎಲ್ಲರೂ ಪಾಲ್ಗೊಂಡು ಮಸೂದೆ ಬಗ್ಗೆ ಯಾವುದಾದರೂ ಆಕ್ಷೇಪಗಳಿದ್ದರೆ ಸದನದಲ್ಲಿ ತಿಳಿಸಬಹುದು. ಸರಿಯಾದ ದಾರಿಯಲ್ಲಿ ಮನೆ ನಡೆಸುವವಳು, ಮಕ್ಕಳನ್ನು ನಡೆಸುವವಳು ಮಹಿಳೆ. ಹೀಗಾಗಿ ಇದು ಅಗತ್ಯವಾಗಿ ಬೇಕಾಗಿದೆ ಎಂದರು.

ಈ ಹಿಂದೆ ನನಗೆ ಇಂಧನ ಇಲಾಖೆ ಕೊಟ್ಟಾಗ ಎಲ್ಲರೂ ತಮಾಷೆ ಮಾಡಿದ್ದರು. ಇದನ್ನು ಹೇಗೆ ನಿಭಾಯಿಸುತ್ತಾರೆ ಎಂದು ಕುಹುಕವಾಡಿದ್ದರು. ಆದರೆ ನಾನು ನಿರ್ವಹಿಸಿದೆ. ದೇಶದ ಸಂಸತ್ತಿಗೆ ಮಹಿಳೆಯರು ಬರಬೇಕು ಎಂದು ಮನವಿ ಮಾಡಿದರು. ಇಂದಿರಾ ಗಾಂಧಿಯವರು ಪ್ರಧಾನಿ ಆಗಿದ್ದ ಪಕ್ಷದಲ್ಲಿ ಸೋನಿಯಾ ಗಾಂಧಿಯವರು ಯುಪಿಎಯನ್ನು ನಿಯಂತ್ರಿಸುತ್ತಿದ್ದಾಗ ಮಹಿಳಾ ಮೀಸಲಾತಿ ಕುರಿತು ಚರ್ಚೆ ನಡೆಯಿತು. ಮೊಸಳೆಕಣ್ಣೀರು ಸುರಿಸಿದ್ದರು.

ಕೆಲವು ಬಾರಿ ವಿರೋಧಿಸಿದ್ದರು. ಅವರಿಗೆ ಮಹಿಳೆ ಎಂದರೆ ಈಗ ಪ್ರಿಯಾಂಕ ಗಾಂಧಿ ಮಾತ್ರ. ಬೇರೆ ಮಹಿಳೆಯರು ಬರುವುದು ಅವರಿಗೆ ಅಗತ್ಯ ಇಲ್ಲವೇ ಎಂದು ಪ್ರಶ್ನಿಸಿದರು. ಬೇರೆ ಮಹಿಳೆಯರಿಗೆ ಅವಕಾಶ ಬೇಡ ಎಂಬುದು ಕಾಂಗ್ರೆಸ್ಸಿನ ಮಾನಸಿಕತೆ. ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಹೊರತುಪಡಿಸಿ ಸಾಮಾನ್ಯ ಮಹಿಳೆಯರು ಸಂಸತ್ತಿಗೆ ಬರುವುದು ಅವರಿಗೆ ಬೇಕಾಗಿಲ್ಲ. ಈ ಮಾನಸಿಕತೆಯನ್ನು ಕಾಂಗ್ರೆಸ್‌‍ ಬದಲಾಯಿಸಿಕೊಳ್ಳಬೇಕು ಎಂದರು.

ಜಿಲ್ಲೆಗಳಲ್ಲಿ ಮಹಿಳಾ ಸಮಾವೇಶ: ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಸಿ.ಮಂಜುಳಾ ಮಾತನಾಡಿ, ನಾರಿ ಶಕ್ತಿ ವಂದನ್‌ ಎಂಬ ಕಾಯ್ದೆ ತರಲು ಪ್ರಧಾನಿಯವರು ಮುಂದಾಗಿದ್ದು, ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಈ ಸಂಬಂಧ ಎಲ್ಲ ಜಿಲ್ಲೆಗಳಲ್ಲಿ ಮಹಿಳಾ ಮೋರ್ಚಾದಿಂದ ಮಹಿಳಾ ಸಮಾವೇಶ ಆಯೋಜಿಸಲಾಗುವುದು.ಸಹಿ ಸಂಗ್ರಹವೂ ನಡೆಯಲಿದೆ ಎಂದರು.

ನಾಳೆ ಕೆ.ಆರ್‌.ಪುರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಸಹಿ ಸಂಗ್ರಹ ಆರಂಭವಾಗುತ್ತಿದೆ. ಇದು ರಾಜ್ಯದಾದ್ಯಂತ ನಡೆಯಲಿದೆ. ಮಸೂದೆ ಬೆಂಬಲಿಸಲು ಮಿಸ್ಡ್‌ ಕಾಲ್‌ ಅಭಿಯಾನ ಮಾಡುತ್ತಿದ್ದೇವೆ. ವಿಭಾಗ ಮಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಗುತ್ತದೆ. ಯುವ ಮೋರ್ಚಾದಿಂದ ಬೈಕ್‌, ಸ್ಕೂಟಿ ರ್ಯಾಲಿಗಳನ್ನು ಆಯೋಜಿಸಲಿದ್ದೇವೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್‌, ಮಾಜಿ ಶಾಸಕಿ ರೂಪಾಲಿ ನಾಯಕ್‌, ರಾಜ್ಯ ವಕ್ತಾರರಾದ ಕು.ಸುರಭಿ ಹೊದಿಗೆರೆ ಉಪಸ್ಥಿತರಿದ್ದರು.

RELATED ARTICLES

Latest News