ಬೆಂಗಳೂರು,ಏ.12- ದಿನದಿಂದ ದಿನಕ್ಕೆ ರಾಜ್ಯಾದ್ಯಂತ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಜನರು ಬಳಲಿ ಬೆಂಡಾಗಿದ್ದು ತಂಪು ಪಾನೀಯಗಳತ್ತ ಮುಖ ಮಾಡಿದ್ದು ಎಳನೀರು ಬೆಲೆ ಶತಕದತ್ತ ದಾಪುಗಾಲಿಟ್ಟಿದೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ 35 ಡಿ.ಸೆ. ತಾಪಮಾನ ಏರಿಕೆಯಾಗಿದ್ದು, ಇನ್ನೂ ಹೆಚ್ಚಾಗುವ ನಿರೀಕ್ಷೆಯಿದ್ದು ದೇಹವನ್ನು ತಣಿಸಿಕೊಳ್ಳಲು ಎಲ್ಲೆಡೆ ಜನರು ಎಳನೀರು, ಕಲ್ಲಂಗಡಿ ಸೇರಿದಂತೆ ಮತ್ತಿತರ ತಂಪು ಪಾನೀಯಗಳನ್ನು ಸೇವಿಸುತ್ತಿದ್ದಾರೆ.
ಸಾರ್ವಜನಿಕರು ತಾಪಮಾನ ಹೆಚ್ಚಾದ ಕಾರಣ ಲಘು ಉಪಾಹಾರ ಸೇವನೆ ಮಾಡುತ್ತಿದ್ದು ಹೆಚ್ಚಾಗಿ ಪಾನೀಯಗಳನ್ನು ಸೇವಿಸುತ್ತಿದ್ದಾರೆ.ದರ ಹೆಚ್ಚಾದರೂ ಪರವಾಗಿಲ್ಲ, ನಮಗೆ ಆರೋಗ್ಯ ಮುಖ್ಯ ಎಂದು ಕೆಲವರು ನೈಸರ್ಗಿಕ ಪಾನೀಯ ಎಳನೀರಿನ ಮೊರೆ ಹೋಗಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಗುಣಮಟ್ಟದ ಎಳನೀರು 70 ರೂ.ಗಳಿಂದ 80 ರೂ.ಗೆ ಮಾರಾಟವಾಗುತ್ತಿದೆ. ಮದ್ದೂರು, ಮಂಡ್ಯ, ಮೈಸೂರು, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಎಳನೀರು ಸರಬರಾಜಾಗುತ್ತಿದೆ.
ಮಳೆಯ ಕೊರತೆ ಹಾಗೂ ರೋಗಬಾಧೆಯಿಂದ ಇಳುವರಿ ಕುಂಠಿತವಾಗಿ ಬೆಲೆ ಏರಿಕೆಯಾಗಿದೆ. ಏಷ್ಯಾದಲ್ಲೇ ದೊಡ್ಡ ಮಾರುಕಟ್ಟೆಯಾದ ಮದ್ದೂರು ಮಾರುಕಟ್ಟೆಯಲ್ಲಿ 40 ರೂ.ಗಳಿಂದ 50 ರೂ.ಗೆ ಎಳನೀರು ಸಿಗುತ್ತಿದ್ದು ಸಾಗಾಟ, ವ್ಯಾಪಾರಿಗಳ ಕೂಲಿ ಎಲ್ಲಾ ಸೇರಿ ನಗರದಲ್ಲಿ 70 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಹಣ ಕೊಟ್ಟರೂ ಸಹ ಉತ್ತಮ ಎಳನೀರು ಮಾರುಕಟ್ಟೆಯಲ್ಲಿ ಸಿಗದಂತಾಗಿದೆ. ಎಷ್ಟೇ ನೀರು ಕುಡಿದರೂ ದಾಹ ನೀಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ.
ಕಲ್ಲಂಗಡಿ ಸೀಸನ್ ಮುಗಿಯುತ್ತಾ ಬಂದಿದ್ದು ಅದು ಕೂಡಾ ಬೆಲೆ ಏರಿಕೆಯಾಗಿದೆ. ಬೆಳಿಗ್ಗೆ 8 ಗಂಟೆಯಾದರೆ ಬಿಸಿಲು ನೆತ್ತಿ ಸುಡುತ್ತಿದ್ದು ಮನೆಯಿಂದ ಹೊರಬರಲು ಜನರು ಹೆದರುತ್ತಿದ್ದಾರೆ. ಸೆಖೆಯಿಂದ ಪಾರ್ಕ್‌ಗಳಿಗೂ ಸಹ ವಾಕಿಂಗ್ ಹೋಗುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ.
ಮನೆಗಳಲ್ಲಿ 24 ಗಂಟೆ ಎಸಿ, ಏರ್‌ಕೂಲರ್, ಫ್ಯಾನ್ ಚಾಲೂ ಆಗಿರುತ್ತವೆ. ಬೇಸಿಗೆ ಹಿನ್ನೆಲೆಯಲ್ಲಿ ಎಸಿ, ಏರ್‌ಕೂಲರ್, ಫ್ಯಾನ್‌ಗಳ ಬೇಡಿಕೆ ಹೆಚ್ಚಿದ್ದು, ವ್ಯಾಪಾರ ವಹಿವಾಟು ಭರದಿಂದ ಸಾಗಿದೆ.
