ಬೆಂಗಳೂರು,ಏ.12- ಸಚಿವ ಸಂಪುಟ ಪುನರ್ ರಚನೆಯಾಗಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ಹೇರಲು ಸುಮಾರು 26ಕ್ಕೂ ಹೆಚ್ಚು ಮಂದಿ ಶಾಸಕರು ಇಂದು ದೆಹಲಿಗೆ ತೆರಳಲಿದ್ದಾರೆ.ನಾಳೆ ಬೆಳಗ್ಗೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಸಂಸದೀಯ ಮಂಡಳಿ ಅಧ್ಯಕ್ಷೆ ಸೋನಿಯಾಗಾಂಧಿ, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್, ರಣದೀಪ್ಸಿಂಗ್ ಸುರ್ಜೇವಾಲ ಮತ್ತಿತರರನ್ನು ಭೇಟಿ ಮಾಡಲು ಪ್ರಯತ್ನಿಸಲಿದ್ದಾರೆ.
ರಾಹುಲ್ ಗಾಂಧಿ ಲಭ್ಯತೆ ಬಗ್ಗೆ ಅನುಮಾನಗಳಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು ಭೇಟಿಗೆ ಸಮಯ ನೀಡಿದ್ದಾರೆ ಎನ್ನಲಾಗಿದೆ. ಸಂಪುಟದಲ್ಲಿರುವವರು ಈಗಾಗಲೇ 3 ವರ್ಷ ಕಳೆದಿದ್ದಾರೆ. ಬಾಕಿಯಿರುವ ಎರಡೂವರೆ ವರ್ಷಗಳಿಗೆ ತಮಗೆ ಅವಕಾಶ ಮಾಡಿಕೊಡಬೇಕೆಂದು ಹಿರಿಯ ಶಾಸಕರು ಒತ್ತಾಯಿಸಲಿದ್ದಾರೆ.
ಇದಕ್ಕೂ ಮೊದಲು ಬೆಂಗಳೂರಿನ ಖಾಸಗಿ ಕ್ಲಬ್ನಲ್ಲಿ ಹಿರಿಯ ಶಾಸಕರು ಸಭೆ ನಡೆಸಿದ್ದರು. ಅನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಂಪುಟ ಪುನರ್ ರಚನೆ ಮಾಡಬೇಕು ಮತ್ತು ನಮಗೆ ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಹೈಕಮಾಂಡ್ ಅವಕಾಶ ನೀಡಿದರೆ ತಾವು ಸಂಪುಟ ಪುನರ್ ರಚನೆ ಮಾಡಲು ಸಿದ್ಧ ಎಂದು ಸಿದ್ದರಾಮಯ್ಯ ಶಾಸಕರ ನಿಯೋಗಕ್ಕೆ ಭರವಸೆ ನೀಡಿದ್ದರು. ಹೀಗಾಗಿ ಹೈಕಮಾಂಡ್ ಮೂಲಕ ಸಂಪುಟ ಪುನರ್ ರಚನೆಗೆ ಅವಕಾಶ ಕಲ್ಪಿಸಲು ಶಾಸಕರು ಮುಂದಾಗಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸಂಪುಟ ಪುನರ್ ರಚನೆ ಇಷ್ಟವಿಲ್ಲ. ಹಾಗಾಗಿ ಅವರು ಶಾಸಕರ ನಿಯೋಗದ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯಅವರಿಗೆ ಸಂಪುಟ ಪುನರ್ ರಚನೆಗೆ ಅವಕಾಶ ಸಿಕ್ಕರೆ, ತಮ ಬೆಂಬಲಿಗರಿಗೆ ಮಣೆ ಹಾಕಬಹುದು. ಆ ನಂತರ ತಮ ಪರವಾದ ಸಮರ್ಥಕರನ್ನು ಹೆಚ್ಚಿಸಿಕೊಳ್ಳಬಹುದು ಎಂಬ ಇರಾದೆ ಇದ್ದಂತಿದೆ. ಜೊತೆಗೆ ಸಂಪುಟ ಪುನರ್ ರಚನೆಯಾದರೆ ನಾಯಕತ್ವ ಬದಲಾವಣೆ ಕೂಗು ಕೂಡ ಕ್ಷೀಣವಾಗಲಿದೆ.
ಬಹುದಿನಗಳ ಕನಸನ್ನು ನನಸು ಮಾಡಿಕೊಳ್ಳಲು ಶಾಸಕರ ನಿಯೋಗ ದೆಹಲಿಯತ್ತ ಮುಖ ಮಾಡಿದೆ. ಶಿರಾ ಕ್ಷೇತ್ರದ ಶಾಸಕ ಟಿ.ಬಿ.ಜಯಚಂದ್ರ, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್, ರಾಮದುರ್ಗಾ ಶಾಸಕ ಆಶೋಕ್ ಪಟ್ಟಣ್, ಬಾಗೇಪಲ್ಲಿಯ ಸುಬ್ಬಾರೆಡ್ಡಿ, ಸಿಂಧನೂರಿನ ಹಂಪನಗೌಡ ಬಾದರ್ಲಿ, ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್, ಹಿರೇಕೆರೂರು ಶಾಸಕ ಯು.ಬಿ.ಬಣಕಾರ್, ಹುಬ್ಬಳ್ಳಿ-ಧಾರವಾಡ ಪೂರ್ವ ಶಾಸಕ ಪ್ರಸಾದ್ ಅಬ್ಬಯ್ಯ, ರೋಣ ಶಾಸಕ ಜಿ.ಎಸ್.ಪಾಟೀಲ್, ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ, ತಿಪಟೂರಿನ ಶಾಸಕ ಕೆ.ಷಡಕ್ಷರಿ, ಮುದ್ದೇಬಿಹಾಳದ ಸಿ.ಎಸ್.ನಾಡಗೌಡ, ಆನೇಕಲ್ನ ಬಿ. ಶಿವಣ್ಣ, ಮಳವಳ್ಳಿಯ ಪಿ. ನರೇಂದ್ರ ಸ್ವಾಮಿ, ಧಾರವಾಡದ ವಿನಯ್ಕುಲಕರ್ಣಿ, ಕೊಪ್ಪಳದ ರಾಘವೇಂದ್ರ ಯತ್ನಾಳ್, ಅಥಣಿಯ ಲಕ್ಷ್ಮಣ ಸವದಿ, ಗೋವಿಂದರಾಜ ನಗರದ ಪ್ರಿಯಕೃಷ್ಣ, ಸಾಗರದ ಬೇಳೂರು ಗೋಪಾಲಕೃಷ್ಣ ದೆಹಲಿಗೆ ತೆರಳಲಿದ್ದಾರೆ.
ನಿಯೋಗದ ಜೊತೆಗೆ ಮಾತುಕತೆ ನಡೆಸಲಿರುವ ವರಿಷ್ಠರು ಸಂಪುಟ ಪುನರ್ ರಚನೆಗೆ ಅವಕಾಶ ಮಾಡಿಕೊಟ್ಟರೆ ಒಂದಷ್ಟು ಮಂದಿ ಹೊಸಬರಿಗೆ ಅವಕಾಶ ಸಿಗಲಿದೆ. ಶಾಸಕರ ದೆಹಲಿಯ ಭೇಟಿಯ ಸಂಖ್ಯೆ ಕ್ರಮೇಣ ಹೆಚ್ಚಾಗುವ ಸಾಧ್ಯತೆಯೂ ಇದೆ.
